ಬಾಂಬ್ ಇಟ್ಟಿದ್ದ ಆದಿತ್ಯ ಶರಣು

ಮಣಿಪಾಲದ ಆದಿತ್ಯ ರಾವ್ ಬೆಂಗಳೂರು ಪೊಲೀಸ್ ವಶದಲ್ಲಿ  |  ತೀವ್ರ ವಿಚಾರಣೆ

ಮಂಗಳೂರು, ಜ.೨೨- ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಪರಾರಿಯಾಗಿದ್ದ ಆರೋಪಿ ಮಣಿಪಾಲ ಸಮೀಪದ ಮಣ್ಣಪಳ್ಳ ನಿವಾಸಿ ಆದಿತ್ಯ ರಾವ್(೪೨) ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಐಜಿಪಿ ನೀಲಮಣಿರಾಜು ಅವರ ಎದುರು ಇಂದು ಬೆಳಗ್ಗೆ ೮.೪೦ರ ಸುಮಾರಿಗೆ ಶರಣಾಗಿದ್ದಾನೆ. ‘ಬಾಂಬ್ ಇಟ್ಟಿದ್ದು ನಾನೇ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಆರೋಪಿಯನ್ನು ವಶಕ್ಕೆ ಪಡೆದು ಹಲಸೂರುಗೇಟ್ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಪೊಲೀಸರು ಬಂಧಿತನ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಹುಸಿ ಬಾಂಬ್ ಕರೆ ಮಾಡುವಲ್ಲಿ ಎಕ್ಸ್‌ಪರ್ಟ್!
ಆದಿತ್ಯ ರಾವ್ ೨೦೧೮ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೆಜೆಸ್ಟಿಕ್ ರೈಲು ನಿಲ್ದಾಣವನ್ನು ಸ್ಫೋಟಿಸುವುದಾಗಿ ಹುಸಿ ಬಾಂಬ್ ಕರೆ ಮಾಡಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಎಂಬಿಎ ಪದವೀಧರನಾದ ಆದಿತ್ಯ ರಾವ್‌ನನ್ನು ೨೦೧೮ರ ಆಗಸ್ಟ್‌ನಲ್ಲಿ ಬಂಧಿಸಿ ಜೈಲಿಗಟ್ಟಿದ್ದರು. ೧೫ ದಿನಗಳ ಅಂತರದಲ್ಲಿ ಎರಡು ಬಾರಿ ಟರ್ಮಿನಲ್ ಮೆನೇಜರ್‌ಗೆ ಕರೆ ಮಾಡಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆಯೊಡ್ಡಿದ್ದ. ಪಾರ್ಕಿಂಗ್ ಜಾಗ ಸ್ಪೋಟಿಸುವುದಾಗಿ ಇ-ಮೇಲ್ ಮಾಡಿದ್ದ. ವಿಚಾರಣೆ ವೇಳೆ ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್‌ಗೆ ಬೆದರಿಕೆ ಕರೆ ಮಾಡಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದ. ಬಿ.ಇ., ಎಂಬಿಎ ಕಲಿತಿದ್ದ ಆದಿತ್ಯ ರಾವ್ ಕೆಲತಿಂಗಳ ಹಿಂದೆ ಕೆಐಎಎಲ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿನ ಅಧಿಕಾರಿಗಳು ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಕೆಲಸ ಬಿಟ್ಟಿದ್ದ. ಅದೇ ಕೋಪದಿಂದ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದಾಗಿ ಆತ ಹೇಳಿಕೆ ನೀಡಿದ್ದ.

ಬ್ಯಾಂಕ್ ಹುದ್ದೆ, ಅಡುಗೆ ಕೆಲಸ, ಸೆಕ್ಯುರಿಟಿ ಗಾರ್ಡ್…
ಆರೋಪಿ ಆದಿತ್ಯ ರಾವ್ ಬಿ.ಕೃಷ್ಣಮೂರ್ತಿ ರಾವ್ ಎಂಬವರ ಪುತ್ರನಾಗಿದ್ದು ಉಡುಪಿಯ ಮಣಿಪಾಲ್‌ನ ಕೆಎಚ್‌ಬಿ ಕಾಲೊನಿಯಲ್ಲಿ ಕೆಲವರ್ಷಗಳ ಕಾಲ ವಾಸವಿದ್ದ. ಮಣಿಪಾಲದಲ್ಲೇ ೨೦೦೭ರಲ್ಲಿ ಎಂಬಿಎ ಪದವಿ ಮುಗಿಸಿ ಕೆಲಸ ಅರಸಿ ಬೆಂಗಳೂರಿಗೆ ಬಂದು ಎಂ.ಜಿ.ರಸ್ತೆಯಲ್ಲಿರುವ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಒಂದು ವರ್ಷದ ಬಳಿಕ ಅಲ್ಲಿ ಕೆಲಸ ತೊರೆದು, ಮತ್ತೊಂದು ಬ್ಯಾಂಕ್‌ನಲ್ಲಿ ಸೇಲ್ಸ್ ಮೆನೇಜರ್ ಹುದ್ದೆಗೆ ಸೇರಿದ್ದ. ಅಲ್ಲಿ ಆರು ತಿಂಗಳು ಕೆಲಸ ಮಾಡಿ ಮತ್ತೆ ಈ ಹಿಂದೆ ಕೆಲಸ ಮಾಡಿದ್ದ ಬ್ಯಾಂಕ್‌ನಲ್ಲೇ ಕೆಲಸಕ್ಕೆ ಸೇರಿದ್ದ. ನಂತರ ಆ ಕೆಲಸವನ್ನೂ ಬಿಟ್ಟು ಮೂಡಬಿದ್ರೆಯ ಆಳ್ವಾಸ್ ಕಾಲೇಜ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಸೇರಿದ್ದ. ಅಲ್ಲಿಯೂ ಕೆಲಸ ತೊರೆದು ಮಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಾರ್ಡ್ ಕೆಲಸಕ್ಕೆ ನೇಮಕಗೊಂಡಿದ್ದ. ಆರೋಪಿ ೨೦೧೩ರಲ್ಲಿ ಉಡುಪಿಯ ಪುತ್ತಿಗೆ ಮಠದಲ್ಲಿ ಅಡುಗೆ ಸಹಾಯಕನಾಗಿಯೂ ಕೆಲಸ ಮಾಡಿದ್ದಾನೆ. ಬಳಿಕ ಬೆಂಗಳೂರಿಗೆ ತೆರಳಿದ ಆದಿತ್ಯ ರಾವ್ ಜಯನಗರದ ಜೀವ ವಿಮಾ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ. ಈ ವೇಳೆ ಕಂಪೆನಿಯ ಲ್ಯಾಪ್‌ಟಾಪ್ ಕಳ್ಳತನ ಮಾಡಿ ಕೆಲಸ ತೊರೆದಿದ್ದ. ಈ ಬಗ್ಗೆ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸುದ್ದಗುಂಟೆಪಾಳ್ಯದಲ್ಲಿರುವ ಪೇಯಿಂಗ್ ಗೆಸ್ಟ್‌ನಲ್ಲಿ ವಾಸವಿದ್ದ ಆರೋಪಿ, ರೂಮ್‌ಮೇಟ್ ಒಬ್ಬನ ಲ್ಯಾಪ್‌ಟಾಪ್ ಕಳವು ಮಾಡಿ ಪರಾರಿಯಾಗಿದ್ದ. ಈ ಬಗ್ಗೆಯೂ ಜೂ.೩೦ರಂದು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಆದಿತ್ಯನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು.

ಆದಿತ್ಯರಾವ್ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಕೇಳಿಕೊಂಡು ಹೋಗಿದ್ದ. ಈ ವೇಳೆ ಕೆಲಸ ಖಾಲಿ ಇಲ್ಲವೆಂದು ಹೇಳಿ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಇಂಟರ್‌ನೆಟ್‌ನಲ್ಲಿ ವಿಮಾನ ನಿಲ್ದಾಣದ ಮಾಹಿತಿ ವಿಚಾರಣೆ ಸಂಖ್ಯೆ ಹುಡುಕಿ ಆ.೨೦ರಂದು ಹುಸಿ ಬಾಂಬ್ ಕರೆ ಕರೆ ಮಾಡಿದ್ದ. ಅದಾದ ಬಳಿಕ ಆ.೨೭ರಂದು ವಿಮಾನ ನಿಲ್ದಾಣದ ಏರ್ ಏಷಿಯಾ ಏರ್‌ಲೈನ್ಸ್ ಕೌಂಟರ್‌ಗೆ ಕರೆ ಮಾಡಿ ಕೊಚ್ಚಿ ಮತ್ತು ಹೈದರಾಬಾದ್‌ಗೆ ಪ್ರಯಾಣಿಸುವ ವಿಮಾನ ಹಾಗೂ ಮುಂಬೈ, ಕೊಯಮತ್ತೂರು, ದೆಹಲಿಗೆ ಪ್ರಯಾಣಿಸುವ ವಿಮಾನಗಳಲ್ಲಿ ಬಾಂಬ್ ಇರಬಹುದು ಎಂದು ಬೆದರಿಸಿದ್ದ.
ರೈಲು ನಿಲ್ದಾಣದ ಲಗೇಜ್ ಕೊಠಡಿಯಲ್ಲಿ ತನ್ನ ಬ್ಯಾಗ್ ಇರಿಸಿದ್ದ ಆರೋಪಿ ಆದಿತ್ಯ, ಲಗೇಜ್ ಮರಳಿ ಪಡೆಯುವಾಗ ಸಿಬ್ಬಂದಿ ಶುಲ್ಕ ಕಟ್ಟುವಂತೆ ಕೇಳಿದ್ದರು. ಈ ವೇಳೆ ನನ್ನ ಬಳಿಯೇ ಹಣ ಕೇಳುತ್ತೀರಾ ಎಂದು ಸಿಬ್ಬಂದಿ ಜತೆ ಜಗಳ ಮಾಡಿದ್ದ. ಅದೇ ದಿನ ಸಂಜೆ ರೈಲ್ವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ರೈಲ್ವೆ ನಿಲ್ದಾಣದ ಕ್ಲಾಕ್ ರೂಮ್‌ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದ. ಪೊಲೀಸರು ತಪಾಸಣೆ ನಡೆಸಿದಾಗ ಅದೊಂದು ಹುಸಿ ಕರೆ ಎಂದು ಗೊತ್ತಾಗಿತ್ತು.

‘ಕುಡ್ಲ’ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ!
ಆರೋಪಿ ಕಳೆದೊಂದು ತಿಂಗಳಿಂದ ಮಂಗಳೂರು ‘ಕುಡ್ಲ ಕ್ವಾಲಿಟಿ’ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಳೆದ ಒಂದು ತಿಂಗಳಿಂದ ಬಿಲ್ಲಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದು ಬಾರ್ ಆಂಡ್ ರೆಸ್ಟೋರೆಂಟ್ ವಿಭಾಗದಲ್ಲಿ ದುಡಿಯುತ್ತಿದ್ದ. ಹೋಟೆಲ್‌ನಲ್ಲಿ ವೆಜ್ ಊಟ ಮಾಡುತ್ತಿದ್ದ ಆದಿತ್ಯ ರಾವ್ ಯಾರೊಂದಿಗೂ ಮಾತನಾಡದೆ ಒಂಟಿಯಾಗಿ ಇರುತ್ತಿದ್ದ ಆರೋಪಿ. ಮಂಗಳೂರಿನಿಂದ ಲಾರಿಯಲ್ಲಿ ಬೆಂಗಳೂರಿಗೆ ಹೋಗಿ ಶರಣಾಗಿದ್ದಾನೆ ಎನ್ನಲಾಗಿದೆ. ನಿನ್ನೆ ರಾತ್ರಿ ೩೦ ಕಡೆ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು ಮಂಗಳೂರು, ಮೈಸೂರು, ಶಿವಮೊಗ್ಗ, ಹಾಸನ, ಉಡುಪಿ ಸೇರಿದಂತೆ ವಿವಿಧ ಕಡೆ ಹುಡುಕಾಟ ನಡೆಸಲಾಗಿತ್ತು. ಎಲ್ಲಾ ಕಡೆ ಹುಡುಕುತ್ತಿರುವ ಕಾರಣ ಪೊಲೀಸರ ಕೈಗೆ ಸಿಗದೆ ರಾತೋರಾತ್ರಿ ಬೆಂಗಳೂರಿಗೆ ಲಾರಿ ಮೂಲಕ ತೆರಳಿದ ಆದಿತ್ಯ ರಾವ್ ಶರಣಾಗಿದ್ದಾನೆ ಎಂದು ಉನ್ನತ ಮೂಲಗಳಿಂದ ಮಾಹಿತಿ ತಿಳಿಸಿದೆ.

Leave a Comment