ಬಾಂಗ್ಲಾ ಪತ್ರಕರ್ತೆ ಕತ್ತು ಸೀಳಿ ಕೊಲೆ

 

ಢಾಕಾ,ಆ.೨೯- ಬಾಂಗ್ಲಾದೇಶದ ಸುದ್ದಿ ವಾಹಿನಿಯ ಮಹಿಳಾ ಪತ್ರಕರ್ತೆಯ ಮನೆಗೆ ನುಗ್ಗಿದ ಅಪರಿಚಿತರ ಗುಂಪು ಆಕೆಯ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ.
ಖಾಸಗಿ ಸುದ್ದಿ ವಾಹಿನಿ ಆನಂದದಲ್ಲಿ ವರದಿಗಾರ್ತಿಯಾಗಿ ಹಾಗೂ ಬಾಂಗ್ಲಾ ದಿನಪತ್ರಿಕೆ ಡೈಲಿ ಜಾಗೃತೊದಲ್ಲೂ ಕಾರ್ಯನಿರ್ವಹಿಸಿದ್ದ ಸುಬರ್ನಾ ನೋದಿ (೩೨) ಮೃತ ಪತ್ರಕರ್ತೆ.
ಪಬ್ನಾ ಜಿಲ್ಲೆಯ ರಾಧಾನಗರದಲ್ಲಿ ಒಂಬತ್ತು ವರ್ಷದ ಮಗಳ ಜತೆ ವಾಸವಿದ್ದ ನೋದಿ, ಪತಿಯಿಂದ ವಿವಾಹ ವಿಚ್ಛೇದನ ಕೋರಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಬಂದಿದ್ದ ೧೦ರಿಂದ ೧೨ ಮಂದಿ ಅಪರಿಚಿತರು, ೧೦.೪೫ರ ಸಮಯದಲ್ಲಿ ನೋದಿ ಮನೆ ಬೆಲ್ ಮಾಡಿ ಒಳ ಪ್ರವೇಶಿಸಿದ್ದಾರೆ. ಕೂಡಲೇ ನೋದಿಯನ್ನು ಶಸ್ತ್ರಾಸ್ತ್ರಗಳಿಂದ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸ್ಥಳೀಯರು ನೋದಿ ಅವರನ್ನು ರಕ್ಷಿಸಲು ಮುಂದಾಗಿ ಆಸ್ಪತ್ರೆಗೆ ಸೇರಿಸಿದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Comment