ಬಹುಕೋಟಿ ಸರಕಾರಿ ಇನಾಂ ಭೂಮಿ ಕಬಳಿಕೆ

ತನಿಖೆಗೆ ವಹಿಸದಿದಲ್ಲಿ ನ್ಯಾಯಾಲಯ ಮೊರೆ
ರಾಯಚೂರು.ಆ.8- ನಗರದ ಆಶಾಪೂರು ರಸ್ತೆಗೆ ಹೊಂದಿಕೊಂಡಿರುವ 84 ಎಕರೆ ಸರಕಾರಿ ಭೂಮಿ ಕಬಳಿಕೆ ಪ್ರಕರಣ ತನಿಖೆಗೊಳಪಡಿಸಿ ಇನಾಂ ರದ್ಧತಿ ಭೂ ಸುಧಾರಣಾ ಕಾಯ್ದೆ ಉಲ್ಲಂಘಿಸಿರುವ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ವಹಿಸದಿದ್ದಲ್ಲಿ ಜಿಲ್ಲಾಡಳಿತ ಹಾಗೂ ಸಹಾಯಕ ಆಯುಕ್ತ, ತಹಶೀಲ್ದಾರ್ ವಿರುದ್ಧ ಕಂದಾಯ ನ್ಯಾಯಲಯ ಮೊರೆ ಹೋಗಲಾಗುವುದೆಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಎಚ್ಚರಿಸಿದರು.
ಅವರಿಂದು ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ನಗರ ವ್ಯಾಪ್ತಿಯಲ್ಲಿ ಸರ್ವೆ ನಂ. 1362, 1359/1 ಹಾಗೂ 1356/2 ರ ಒಟ್ಟು 84 ಎಕರೆ ಇನಾಂ ಜಮೀನು ನಗರ ವ್ಯಾಪ್ತಿಗೊಳಪಡುವ ಆಶಾಪೂರು ರಸ್ತೆಗೆ ಹೊಂದಿಕೊಂಡಿದ್ದು ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಯೂರಿರುವ ಖಾಜಿ ಮೊಹಮದ್ ಅಬ್ದುಲ್ ರಸೂಲ್ ಸಿದ್ದಿಕಿ ಮೂಲ ಇನಾಂದಾರರಾಗಿದ್ದಾರೆ. ಮೇಲ್ಕಂಡವರ ವಾರಸುದಾರರು ಎಂದು ಮಹಮದ್ ಮಹಿಬೂಬ್ ಅಲಿ ಹಾಗೂ ಅವರ ಪುತ್ರರು ನಕಲಿ ಜಿಪಿಎ ಖೊಟ್ಟಿ ದಾಖಲೆ ಸೃಷ್ಟಿಸಿ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರಿಂದ ಒಟ್ಟು 84 ಎಕರೆ ಜಮೀನು ಕಾನೂನು ಬಾಹಿರ ತಮ್ಮ ಹೆಸರಿಗೆ ವರ್ಗಾಯಿಸಿ ಭೂ ಕಬಳಿಕೆದಾರರೊಂದಿಗೆ ಶಾಮೀಲಾಗಲಾಗಿದೆ.
ಸುಮಾರು 200 ಕೋಟಿ ಬೆಳೆ ಬಾಳುವ ಒಟ್ಟು 84 ಎಕರೆ ಸರಕಾರಿ ಭೂಮಿ ವರ್ಗಾವಣೆಯಲ್ಲಿ ಇನಾಂ ರದ್ಧತಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಸ್ಪಷ್ಟ ಉಲ್ಲಂಘನೆಯಾಗಿರುವ ಕುರಿತು ಜಿಲ್ಲಾಡಳಿತಕ್ಕೆ ದಾಖಲೆ ಸಮೇತ ದೂರು ನೀಡಿದರೂ ಕಳೆದ 6 ತಿಂಗಳಿನಿಂದ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ವಹಿಸದೇ ಪ್ರಾದೇಶಿಕ ಆಯುಕ್ತರಿಂದ ರವಾನೆಯಾಗಿರುವ ವರದಿ ಮೂಲೆಗುಂಪು ಮಾಡಲಾಗಿದೆ. ಸರಕಾರಿ ಭೂಮಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸುದೀರ್ಘ ವಿಚಾರಣೆ ಬಳಿಕ ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರು ಜಿಲ್ಲಾಡಳಿತಕ್ಕೆ ಪತ್ರ ಬರೆದು ಕಬಳಿಕೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವಸತಿಹೀನ ಕೊಳಗೇರಿಗಳಿಗೆ ಹಂಚಿಕೆ ಮಾಡುವಂತೆ ಸ್ಪಷ್ಟ ನಿರ್ದೇಶನ ನೀಡಿದರೂ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ರವರು ಮಾತ್ರ ತಪ್ಪಿತಸ್ಥ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ವಹಿಸುವಲ್ಲಿ ಮೀನಾಮೇಷ ಎಣಿಸುವ ಮೂಲಕ ಮೂಲ ವಾರಸುದಾರರಲ್ಲದ ಭೂಕಬಳಿಕೆದಾರರ ರಕ್ಷಣೆಗೆ ಸಹಕರಿಸಲಾಗುತ್ತದೆ.
ಮೇಲ್ಕಂಡ ಜಮೀನು ಸರಕಾರಿ ವ್ಯಾಜ್ಯವೆಂದು ಪಹಣಿ ಪತ್ರಿಕೆ ಕಲಂ 11 ರಲ್ಲಿ ಸ್ಪಷ್ಟವಾಗಿ ನಮೂದಿಸಿದ್ದರೂ ಸದರಿ ಜಮೀನು ಮಹಮದ್ ಮಹಿಬೂಬ್ ಅಲಿ ಎನ್ನುವ ನಕಲಿ ವಾರಸುದಾರರ ಹೆಸರಿಗೆ ವರ್ಗಾಯಿಸಲಾಗಿದೆ. ವಿರುಪಾಕ್ಷಪ್ಪ, ಶರಣುಭೂಪಾಲ್ ನಾಡಗೌಡ, ಕಡಗೋಳ ರಾಮಚಂದ್ರ ಎನ್ನುವ ನಕಲಿ ಜಿಪಿಎ, ಶಿವಾನಂದ ಚುಕ್ಕಿ, ಅಭಿಷೇಕ ನಾಡಗೌಡ, ಬಸವರಾಜ ಸಕ್ರಿ, ಸುಧಾ ಗಂಡ ಉದಯಕುಮಾರ, ಕಡಗೋಳ ಆಂಜಿನೇಯ ಎನ್ನುವ ನಕಲಿ ಖರೀದಿದಾರರ ಬೋಗಸ್ ದಾಖಲೆ ಸೃಷ್ಟಿಸಲಾಗಿದೆ. ಕಂದಾಯ ಸಚಿವರು ಸರಕಾರದ ಮುಖ್ಯ ಕಾರ್ಯದರ್ಶಿ ಕಾನೂನು ಸಚಿವರು, ಕಂದಾಯ ಇಲಾಖೆ ಮೇಲಾಧಿಕಾರಿಗಳ ತಪಾಸಣೆ ಹಾಗೂ ನಿರ್ದೇಶನ ಮೇರೆಗೆ ಸದರಿ ಜಮೀನು ಸರಕಾರಕ್ಕೆ ಸೇರಬೇಕೆಂದು ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರಿಂದ ಸ್ಪಷ್ಟ ಆದೇಶ ನೀಡಲಾಗಿದ್ದರೂ ಭೂ ಕಬಳಿಕೆದಾರರ ರಕ್ಷಣೆ ಮುಂದುವರೆದಿದ್ದು ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮೇಲಾಡಳಿತಕ್ಕೆ ತಪ್ಪು ವರದಿ ನೀಡಿರುವ ಈ ಹಿಂದಿನ ಸಹಾಯಕ ಆಯುಕ್ತ ವೀರ ಮಲ್ಲಪ್ಪ ಪೂಜಾರ್, ತಹಶೀಲ್ದಾರ್ ಮಧುಕೇಶ್ವರ ಇನ್ನಿತರರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ವಹಿಸಿ ಸರಕಾರಿ ಭೂಮಿ ಜಿಲ್ಲಾಡಳಿತ ವಶಕ್ಕೆ ಪಡೆದು ವಸತಿ ಹೀನರಿಗೆ ಹಂಚಿಕೆ ಮಾಡದಿದ್ದಲ್ಲಿ ಕಂದಾಯ ನ್ಯಾಯಲಯ ಮೊರೆ ಹೋಗಲಾಗುವುದೆಂದು ಎಚ್ಚರಿಸಿದರು.
ಶರಣಪ್ಪ ಮರ್ಚೇಟ್ಹಾಳ್, ಜಿ.ಅಮರೇಶ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment