ಬಹಿರ್ದೆಸೆಗೆ ಬಳಕೆಯಾಗುತ್ತಿರುವ ಉದ್ಯಾನವನ !

ಕಲಬುರಗಿ,ಜು.17-ಜನರಿಗೆ ಸ್ವಚ್ಛ ಗಾಳಿ ಸಿಗಲಿ, ವಾಯು ವಿಹಾರ ಮಾಡಲು, ಮಕ್ಕಳು ಆಟವಾಡಲು ಅನುಕೂಲವಾಗಲಿ, ಇಳಿ ವಯಸ್ಸಿನವರು ಕೆಲ ಹೊತ್ತು ಕುಳಿತುಕೊಂಡು ತಮ್ಮ ಆಯಾಸ ಕಳೆಯಲಿ ಎಂಬ ಉದ್ದೇಶದಿಂದ ನಿರ್ಮಿಸಿದ್ದ ಉದ್ಯಾನವನವೊಂದು ಬಹಿರ್ದೆಸೆಗೆ ಬಳಕೆಯಾಗುತ್ತಿದೆ.
ಮಹಾನಗರ ಪಾಲಿಕೆಯ ವಾರ್ಡ ನಂ.53 ರಲ್ಲಿ ಬರುವ ಅಂಬಿಕಾ ನಗರದಲ್ಲಿರುವ ಸಾರ್ವಜನಿಕ ಉದ್ಯಾನವನವೇ ಬಹಿರ್ದೆಸೆಗೆ ಬಳಕೆಯಾಗುತ್ತಿದ್ದು, ಇದರಿಂದಾಗಿ ಉದ್ಯಾನವನ ನಿರ್ಮಾಣದ ಉದ್ದೇಶವೇ ವಿಫಲವಾದಂತಾಗಿದೆ.
“ಉದ್ಯಾನವನದಲ್ಲಿ ಮುಳ್ಳು ಕಂಠಿ ಬೆಳೆದಿದ್ದು, ವಿಷ ಜಂತುಗಳು ಓಡಾಡುತ್ತಿವೆ. ಶೌಚಾಲಯದ ಸೌಕರ್ಯವಿಲ್ಲದವರು ಉದ್ಯಾನವನದಲ್ಲಿಯೇ ಶೌಚಕ್ಕೆ ಹೋಗುತ್ತಿದ್ದು, ಇದರಿಂದ ಸುತ್ತ ಮುತ್ತಲು ಗಬ್ಬು ವಾಸನೆ ಹರಡುತ್ತಿದೆ. ಹೀಗಾಗಿ ಸುತ್ತಮುತ್ತಲ್ಲಿನ ಮನೆಗಳಲ್ಲಿ ವಾಸಿಸುವವರು ಹಿಂಸೆ ಅನುಭವಿಸುವಂತಾಗಿದೆ.
ಉದ್ಯಾನವನದಲ್ಲಿ ಮುಳ್ಳುಕಂಠಿ ಬೆಳೆದು ನಿಂತಿದ್ದರೂ ಅದನ್ನು ಕಡಿದು ಸ್ವಚ್ಛಗೊಳಿಸಿಲ್ಲ, ಸುತ್ತಲು ಕಂಪೌಡ್ ಗೋಡೆ ನಿರ್ಮಿಸಿಲ್ಲ. ಉದ್ಯಾನವನ ಹಾವು, ಚೇಳು, ಹೆಗ್ಗಣಗಳಿಗೆ ಆಶ್ರಯತಾಣವಾಗಿದ್ದು, ರಾತ್ರಿ ವೇಳೆ ಮನೆಯೊಳಗೆ ನುಸುಳುತ್ತಿವೆ. ಇದರಿಂದ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ”
“ಉದ್ಯಾನವದಲ್ಲಿ ಬೆಳೆದು ನಿಂತಿರುವ ಮುಳ್ಳುಕಂಠಿ ಕಡಿದು ಸ್ವಚ್ಛಗೊಳಿಸಿ, ಸುತ್ತಲು ಕಂಪೌಡ್ ಗೋಡೆ ನಿರ್ಮಿಸಿ ಎಂದು ಮಹಾನಗರ ಪಾಲಿಕೆಯ ಸದಸ್ಯರಿಗೆ ಮತ್ತು ಮಹಾನಗರ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ” ಎನ್ನುತ್ತಾರೆ ಬಡಾವಣೆಯ ನಾಗರಿಕರಾದ ಶರಣು ಕೋಳಿ, ಹಣಮಂತಪ್ಪ ಸಾವೂರ, ಮಹ್ಮದ್ ಫಾರುಕ್, ದರ್ಶನಸಿಂಗ್ ಠಾಕೂರ ಅವರು.
@12bc = ಬಲಿಗೆ ಕಾದಿರುವ ಬಾವಿ
ಉದ್ಯಾನವನದಲ್ಲಿರುವ ಹಳೆಯ ಕಾಲದ ಬಾವಿ ಪಾಳು ಬಿದ್ದಿದ್ದು, ಮಕ್ಕಳು ಆಟವಾಡಲು ಹೋಗಿ ಬಾವಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸಂಭವವಿದೆ. ಪಾಳು ಬಾವಿಯನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು, ಇಲ್ಲವೇ ಬಾವಿಯ ಹೂಳೆತ್ತಬೇಕು ಎಂದು ಬಡಾವಣೆಯ ಅವರು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಈ ಬಗ್ಗೆ ನಿಗಾವಹಿಸಿ ಸಾರ್ವಜನಿಕ ಉದ್ಯಾನವನ ಬಹಿರ್ದೆಸೆಗೆ ಬಳಕೆಯಾಗುತ್ತಿರುವುದನ್ನು ತಡೆಯಬೇಕಿದೆ. ಹಾಳು ಬಾವಿ ಹೂಳೆತ್ತುವ ಇಲ್ಲವೇ ಮುಚ್ಚುವ ಕ್ರಮ ಕೈಗೊಂಡ ಬಡಾವಣೆಯ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.

Leave a Comment