ಬಸ್ ಸ್ಕೂಟರ್‌ಗೆ ಡಿಕ್ಕಿ ಟೆಕ್ಕಿ ಬಲಿ

ಬೆಂಗಳೂರು, ಆ. ೨೪- ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರೊಬ್ಬರು ಮೃತಪಟ್ಟಿರುವ ದುರ್ಘಟನೆ ಬನ್ನೇರುಘಟ್ಟ ರಸ್ತೆಯ ಡೆಕತ್ಲಾನ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಜಿಗಿಣಿಯ ಅಸೆಂಚರ್ ಕಂಪನಿಯಲ್ಲಿ ಕ್ಲಿನಿಕಲ್ ಡೆಟಾ ಮ್ಯಾನೇಜರ್ ಆಗಿದ್ದ ಆಗಿದ್ದ ಸ್ವಾಮಿ (25) ಮೃತಪಟ್ಟಿದ್ದು, ಹಿಂದೆ ಕುಳಿತಿದ್ದ ವಿಜ್ಞಾನಿ ತೇಜು (22) ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತುರುವೇಕೆರೆ ಮೂಲದ ಸ್ವಾಮಿ, ಚಿಕ್ಕ ಆಡುಗೋಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.
ರಾತ್ರಿ 7ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಡಿಯೋ ಸ್ಕೂಟರ್‌ನಲ್ಲಿ ಸ್ನೇಹಿತೆ ತೇಜು ಅವರನ್ನು ಬಿಳೇಕಳ್ಳಿಯ ಮನೆಗೆ ಬಿಟ್ಟು ಬರಲು ಹಿಂದೆ ಕೂರಿಸಿಕೊಂಡು ಬನ್ನೇರುಘಟ್ಟ ರಸ್ತೆಯಲ್ಲಿ ಬರುತ್ತಿದ್ದರು. ಮಾರ್ಗಮಧ್ಯೆ ಡೆಕತ್ಲಾನ್ ಬಳಿ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸ್ವಾಮಿ ಸ್ಥಳದಲ್ಲೇ ಮೃತಪಟ್ಟರೆ, ತೇಜು ಗಾಯಗೊಂಡರು. ಪ್ರಕರಣ ದಾಖಲಿಸಿರುವ ಹುಳಿಮಾವು ಸಂಚಾರ ಪೊಲೀಸರು ಬಸ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪೇಂಟರ್ ಸಾವು
ಚಾಮರಾಜಪೇಟೆಯ 4ನೇ ಮುಖ್ಯರಸ್ತೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಪೇಂಟಿಂಗ್ ಮಾಡುತ್ತಿದ್ದ ಅಬ್ದುಲ್ ರೆಹಮಾನ್ (35) ಎಂಬಾತ ಆಯಾತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.
ಕಟ್ಟಡದಲ್ಲಿ ನಿನ್ನೆ ಸಂಜೆ 6ರ ವೇಳೆ ಪೇಂಟಿಂಗ್ ಮಾಡುವಾಗ ಈ ದುರ್ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಿಸಿರುವ ಚಾಮರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Comment