ಬಸ್ ಪ್ರಯಾಣ ದರ ಏರಿಕೆ ಬೇಡ ಅಧಿಕಾರಿಗಳಿಗೆ ಸಿಎಂ ಸೂಚನೆ

ಬೆಂಗಳೂರು, ಅ. ೧೨- ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರಗಳನ್ನು ಯಾವುದೇ ಕಾರಣಕ್ಕೂ ಏರಿಕೆ ಮಾಡಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪ್ರಯಾಣ ದರ ಏರಿಕೆ ಮಾಡದಂತೆ ಸೂಚನೆ ನೀಡಿದರು.

ಪೆಟ್ರೋಲ್ ಹಾಗೂ ಡೀಸಲ್ ದರ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಪ್ರಯಾಣ ದರವನ್ನು ಏರಿಕೆ ಮಾಡಲು ಅನುಮತಿ ನೀಡುವಂತೆ ಇಂದಿನ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದರಾದರೂ ಅದಕ್ಕೆ ಒಪ್ಪದ ಕುಮಾರಸ್ವಾಮಿ ದರ ಏರಿಕೆ ಮಾಡದಂತೆ ಸೂಚನೆ ನೀಡಿದರು.

ಬಸ್ ಪ್ರಯಾಣ ದರ ಏರಿಕೆಯಿಂದ ಸಾಮಾನ್ಯ ಜನರಿಗೆ ಹೊರೆಯಾಗುತ್ತದೆ. ರೈಲುದರ ಏರಿಕೆಯಿಂದ ಆಗುವ ನಷ್ಟವನ್ನು ಬೇರೆ ರೀತಿಯಲ್ಲಿ ಸರಿದೂಗಿಸಿಕೊಳ್ಳಿ. ಪ್ರಯಾಣ ದರ ಏರಿಕೆ ಬೇಡ ಎಂದವರು ಸಾರಿಗೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಹಿಂದೆಯೇ ಕೆಎಸ್‌ಆರ್‌ಟಿಸಿ ಶೇ. 18ರಷ್ಟು ದರ ಏರಿಕೆ ಮಾಡಿತ್ತು. ಆಗಲೂ ದರ ಏರಿಕೆಯನ್ನು ತಡೆ ಹಿಡಿದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಮತ್ತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ದರ ಏರಿಕೆ ಮಾಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

Leave a Comment