ಬಸ್ ನಿಲ್ದಾಣ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾವು

ಬೆಂಗಳೂರು,ಜ.೧೨- ಶಾಂತಿ ನಗರ ಬಸ್ ನಿಲ್ದಾಣದ ಕಟ್ಟಡದ ಮೇಲಿನಿಂದ ಬಿದ್ದು ಕೂಲಿ ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ದಾರುಣ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ.
ಮೃತ ಕಾರ್ಮಿಕ ಸುಮಾರು ೩೦ವರ್ಷದವನಾಗಿದ್ದು ಸದ್ಯಕ್ಕೆ ಆತನ ಹೆಸರು ವಿಳಾಸ ಪತ್ತೆಯಾಗಿಲ್ಲ. ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಸ್ವಾತಿ ಡಿಲಕ್ಸ್ ಹೋಟೆಲ್‌ಕಟ್ಟಡದ ೭ನೇ ಮಹಡಿಯಲ್ಲಿ ಕೆಲ ಕಾರ್ಮಿಕರು ಉಳಿದುಕೊಳ್ಳುತ್ತಿದ್ದರು, ಮೃತಪಟ್ಟ ವ್ಯಕ್ತಿ ಕೂಡ ಅಲ್ಲೇ ವಾಸವಿದ್ದ ಎಂದು ತಿಳಿದು ಬಂದಿದೆ
ಕಟ್ಟಡದ ಮೇಲಿಂದ ರಾತ್ರಿ ೧.೩೦ರ ವೇಳೆ ಕಾರ್ಮಿಕ ಬಿದ್ದು ಕೆಳಗೆ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ರಾತ್ರಿ ಪ್ರಯಾಣಿಕರೊಬ್ಬರನ್ನು ಆಟೋ ಚಾಲಕ ಬಸ್ ನಿಲ್ದಾಣಕ್ಕೆ ಕರೆ ತಂದಾಗ ವಿಷಯ ಬೆಳಕಿಗೆ ಬಂದಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು ಕಾರ್ಮಿಕನನ್ನು ಕಟ್ಟಡ ಮೇಲಿನಿಂದ ಯಾರೋ ತಳ್ಳಿ ಕೊಲೆಗೈದಿರುವ ಶಂಕೆ ಕೂಡಾ ವ್ಯಕ್ತವಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

Leave a Comment