ಬಸ್‌ ಚಾಲಕರ ಮೊಬೈಲ್ ಬಳಕೆ: ಶಿಸ್ತುಕ್ರಮಕ್ಕೆ ಮುಂದಾದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ

ಬೆಂಗಳೂರು, ಮಾ.20- ವಾಹನ ಚಲಾಯಿಸುವಾಗ ಚಾಲಕರು ಮೊಬೈಲ್ ಬಳಸಬಾರದು ಎಂಬ ನಿಯಮವೇ ಇದೆ. ಆದರೂ ಕೆಲ ಸಾರಿಗೆ ಬಸ್‌ಗಳಲ್ಲಿಯೂ ಹಾಗೂ ಖಾಸಗಿ ಬಸ್ ಚಾಲಕರು ಬಸ್ ಚಲಾಯಿಸುವಾಗ ಯಾರಿಗೂ ಕ್ಯಾರೆ ಎನ್ನದೇ ಮೊಬೈಲ್ ಬಳಸುವುದು ಸಾಮಾನ್ಯವಾಗಿದೆ. ಈ ಬಗ್ಗೆ ಸಾರ್ವಜನಿಕರು ಪ್ರಯಾಣಿಕರಿಂದ ಸಾರಿಗೆ ಇಲಾಖೆಗೆ ದೂರು ಬಂದಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಚಾಲಕರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಜೆಡಿಎಸ್‌ನ ಶರವಣ ಕೇಳಿದ ಪೂರಕ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವರು, ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ ನಿಷೇಧವಿದೆಯಾದರೂ ಕೆಲ ಚಾಲಕರು ಮೊಬೈಲ್ ಬಳಸುವುದು ಗಮನಕ್ಕೆ ಬಂದಿದೆ. ಇಂತವರ ವಿರುದ್ಧ ಸರ್ಕಾರಿ ಖಾಸಗಿ ಎನ್ನದೇ ಶಿಸ್ತು ಕ್ರಮ ಜರುಗಿಸಿ ಅವರ ವಿರುದ್ಧ ಕೇಸು ದಾಖಲು ಮಾಡಲಾಗುವುದು. ಈ ಬಗ್ಗೆ ಸಾರಿಗೆ ಇಲಾಖಾಧಿಕಾರಿಗಳಿಗೆ ಸೂಚನೆ ಕೊಡಲಾಗುವುದು ಎಂದರು.
ಇದಕ್ಕೂ ಮುನ್ನ ಬಿ‌.ಎಂ‌.ಫಾರೂಖ್ ಮಾತನಾಡಿ, ಬಸ್ ನಿಲ್ದಾಣಗಳಲ್ಲಿ ಸೋಲಾರ್ ಅಳವಡಿಕೆ ಕುರಿತು ಪ್ರಸ್ತಾಪಿಸಿದರು. ಆಗ ಲಕ್ಷ್ಮಣ್ ಸವದಿ ಇಲಾಖೆಯಲ್ಲಿ ಹಣಕಾಸಿನ ಪರಿಸ್ಥಿತಿ ನೋಡಿ ಕೊಂಡು ರಾಜ್ಯದ ಎಲ್ಲಾ ಬಸ್ ನಿಲ್ದಾಣ ಗಳಲ್ಲಿ ಸೋಲಾರ್ ಅಳವಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಖಾಸಗಿ ವಾಹನಗಳ ಮುಂದೆ ಹಲವು ಅಧ್ಯಕ್ಷರು, ಸದಸ್ಯರು ಸೇರಿದಂತೆ ಸಂಘ- ಸಂಸ್ಥೆಗಳ ಹೆಸರಿನಲ್ಲಿ ದೊಡ್ಡದೊಡ್ಡ ನಾಮಫಲಕಗಳನ್ನು ಹಾಕಿಕೊಂಡು ಓಡಾಡುತ್ತಿದ್ದಾರೆ.ಇದರಿಂದ ಶಾಸಕರ ಘನತೆ ಗೌರವ ಕಡಿಮೆ ಆಗುತ್ತಿದೆ. ಇಂತಹವರಿಂದಾಗಿ ನಿಜವಾದ ಜನಪ್ರತಿನಿಧಿಗಳನ್ನೂ ಜನ ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಬಸವರಾಜ ಹೊರಟ್ಟಿ ಮತ್ತು ಟಿ ಎ ಶರವಣ ಸದನದ ಗಮನಕ್ಕೆ ತಂದರು‌.
ಇದಕ್ಕೆ ಉತ್ತರ ನೀಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಇಂತಹ ನಾಮಫಲಕಗಳ ನಿಯಂತ್ರಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳುತ್ತಿದ್ದು, ಮುಂದಿನ ದಿನಗಳನ್ನು ಇಂಥ ಬೋರ್ಡ್ ಗಳನ್ನು ಸಂಪೂರ್ಣ ವಾಗಿ ನಿಷೇಧ ಮಾಡುವುದಾಗಿ ಸದನಕ್ಕೆ ಭರವಸೆ ನೀಡಿದರು.
ಬೀದರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ವತಿಯಿಂದ ಒಟ್ಟು 1601 ಮೋಟಾರ್ ಕ್ಯಾಬ್‌ಗಳಿಗೆ ರಹದಾರಿ ನೀಡಲಾಗಿದೆ. ಬೆಂಗಳೂರು ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರದಲ್ಲಿ 501 ಮೋಟಾರ್ ಕ್ಯಾಬ್ ರಹದಾರಿಗಳನ್ನು ಮತ್ತು 788 ಮ್ಯಾಕ್ಸಿ ಕ್ಯಾಬ್ ರಹದಾರಿಗಳನ್ನು ನೀಡಲಾಗಿದೆ. ಅಲ್ಲದೇ ಬೀದರ್ ಜಿಲ್ಲೆಯಲ್ಲಿ ಪರವಾನಿಗೆ ಇಲ್ಲದೆ ಒಟ್ಟು 890 ವಾಹನಗಳು ಬೀದರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಏ. 1 2019 ರಿಂದ ಜನವರಿ 31, 2020ರವರೆಗೆ 217 ಪ್ರಕರಣಗಳನ್ನು ದಾಖಲಿಸಿದ್ದು, 37 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 9,83,863 ರೂ ತೆರಿಗೆ ವಸೂಲಿ, 8,76,200ರೂ ದಂಡ, ಸೇರಿದಂತೆ ಒಟ್ಟು ,18,600,63 ರೂ.ಗಳನ್ನು ಇಲಾಖೆಗೆ ಬಂದಿದೆ ಎಂದು ಶಾಸಕ ಅರವಿಂದ ಕುಮಾರ ಅರಳಿ ಕೇಳಿದ ಪ್ರಶ್ನೆಗೆ ಸಚಿವ ಲಕ್ಷ್ಮಣ್ ಸವದಿ ವಿವರಿಸಿದರು.

Leave a Comment