ಬಸ್‌ಗಳ ನಡುವೆ ಭೀಕರ ಡಿಕ್ಕಿ  ೭ಮಂದಿ ಸಾವು ೩೫ ಮಂದಿಗೆ ಗಾಯ

ಚೆನ್ನೈ,ಸೆ.೧-ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದು ಕರ್ನಾಟಕ ಮೂಲದ ಮೂವರು ಸೇರಿ ಒಟ್ಟು ೭ ಮಂದಿ ಮೃತಪಟ್ಟ ಘಟನೆ ಸೇಲಂ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಮಿಂಗಮ್ ಬಳಿ ಇಂದು ನಸುಕಿನಲ್ಲಿ ನಡೆದಿದೆ.

ಧರ್ಮಾಪುರಿಯಿಂದ ಮುಂಜಾನೆ ೨ರ ವೇಳೆ ಬರುತ್ತಿದ್ದ ಬಸ್ ಚಾಲಕನು ರಸ್ತೆ ಮಧ್ಯದಲ್ಲಿ ನಿಂತಿದ್ದ ಲಾರಿಯನ್ನು ತಪ್ಪಿಸಲು ಮುಂದಾಗಿದ್ದ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಎದುರಿಗೆ ಬರುತ್ತಿದ್ದ (ಕೇರಳದ ಪಲಕ್ಕಡ್ ಕಡೆಗೆ ಹೊರಟಿದ್ದ)ಮತ್ತೊಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ.

ವೇಗವಾಗಿದ್ದ ಎರಡೂ ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದು,ಒಂದು ಬಸ್ ಸಂಪೂರ್ಣವಾಗಿ ಜಖಂಗೊಂಡು ಅದರಲ್ಲಿದ್ದ ಕೆಲವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅವರ ದೇಹಗಳು ಗುರುತು ಸಿಗದಂತಾಗಿದೆ. ಅಪಘಾತದಲ್ಲಿ ೧೧ ಮಹಿಳೆಯರು ಸೇರಿದಂತೆ ೩೭ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಅವರಲ್ಲಿ ಕೆಲವರನ್ನು ಮೋಹನ್ ಕುಮಾರಂಗಳಂ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ಹಾಗೂ ಉಳಿದವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.ಈ ಕುರಿತು ಸುರಮಂಗಲಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ

Leave a Comment