ಬಸ್ಸಲ್ಲಿ ಆಕಸ್ಮಿಕ ಬೆಂಕಿ ಪ್ರಯಾಣಿಕರು ಪಾರು

ಬೆಂಗಳೂರು, ಆ. ೧೨- ಬೆಂಗಳೂರು-ಚೆನ್ನೈ ನಡುವೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೊಲ್ವೊ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣ ಸುಟ್ಟು ಹೋಗಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಚೆನ್ನೈನಿಂದ ಇಂದು ಬೆಳಿಗ್ಗೆ ಹೊರಟು ಬೆಂಗಳೂರು ಕಡೆಗೆ ಬರುತ್ತಿದ್ದ ವೊಲ್ವೊ ಬಸ್‌ನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಬೆಂಕಿ ಇಡೀ ಬಸ್‌‌ಗೆ ಬೆಂಕಿ ವ್ಯಾಪಿಸಿ, ಬಸ್‌ನ ಸೀಟ್ ಹಾಗೂ ಮೇಲ್ಛಾವಣಿಗಳು ಸಂಪೂರ್ಣ ಸುಟ್ಟು ಹೋಗಿದೆ. ಈ ಬೆಂಕಿ ದುರಂತದಲ್ಲಿ ಪ್ರಯಾಣಿಕರು ಯಾವುದೇ ತೊಂದರೆಗೆ ಸಿಕ್ಕದೇ ಪಾರಾಗಿದ್ದಾರೆ.

ಚೆನ್ನೈನ 5 ಕಿ.ಮೀ ದೂರದ ಪೂಂದಮಲ್ಲಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ನಲ್ಲಿ ಈ ಬೆಂಕಿ ದುರಂತ ಸಂಭವಿಸಿದೆ ಎಂದು ರಾಜ್ಯ ರಸ್ತೆಸಾರಿಗೆ ಸಂಸ್ಥೆ ಹೇಳಿದೆ. ವೊಲ್ವೊ ಬಸ್‌ನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿಕರಿಗೆ ಬಸ್‌ನಿಂದ ಇಳಿಯುವಂತೆ ಹೇಳಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ ಎನ್ನಲಾಗಿದೆ.

ಬೆಂಕಿ ದುರಂತಕ್ಕೆ ಕಾರಣ ಗೊತ್ತಾಗಿಲ್ಲ. ಸ್ಥಳಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತಾಂತ್ರಿಕ ಅಧಿಕಾರಿಗಳ ತಂಡವನ್ನು ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.

Leave a Comment