ಬಸವ ಜಯಂತಿ : ಪೂರ್ವ ಭಾವಿ ಸಭೆ

ತಿ.ನರಸೀಪುರ : ಮೇ.6- ತಾಲ್ಲೂಕು ಕೇಂದ್ರದಲ್ಲಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಸಂಬಂಧ ಪಟ್ಟಣದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಪೂರ್ವ ಭಾವಿ ಸಭೆ ಆಯೋಜಿಸಲಾಗಿತ್ತು.
ತಾಲ್ಲೂಕಿನ ವಾಟಾಳು ಸೂರ್ಯ ಸಿಂಹಾಸನ ಮಠದ ಡಾ. ಸಿದ್ದಲಿಂಗಶಿವಚಾರ್ಯಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಬಸವ ಜಯಂತಿ ಪೂರ್ವಭಾವಿಯಲ್ಲಿ ಬಸವ ಜಯಂತಿಯನ್ನು ಕಲಾ ತಂಡಗಳ ಮೆರವಣಿಗೆ ಉತ್ಸವವದೊಂದಿಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಮಾತನಾಡಿದ ಮುಖಂಡರು, ಗ್ರಾಮದಲ್ಲಿ ಇರುವ ಕಲಾ ತಂಡಗಳು ಉತ್ಸವದಲ್ಲಿ ಭಾಗವಹಿಸುವಂತೆ ಪ್ರೇರೆಪಿಸಿ ವಿವಿಧ ಕಲಾ ತಂಡಗಳನ್ನು ಗ್ರಾಮೀಣ ದಸರಾ ಮಾದರಿಯಲ್ಲಿ ಮೆರವಣಿಗೆ ನಡೆಸುವುದು. ಜತೆಗೆ ಜಯಂತಿ ಆಚರಿಸಲು ಸುತ್ತೂರು ವೀರ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ದಿನಾಂಕ ಪಡೆದು ನಂತರ ಸ್ಥಳಿಯ ಮಠಾಧೀಶರುಗಳು, ಮುಖಂಡರ ಸಭೆ ಕರೆದು ದಿನಾಂಕ ನಿಗದಿ ಮಾಡುವ ಬಗ್ಗೆ ಹಾಗೂ ಇದೇ ಕಾರ್ಯಕ್ರಮದ ವೇಳೆ ರಾಜೇಂದ್ರಶ್ರೀಗಳ ಜಯಂತಿ, ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯನ್ನು ಒಟ್ಟಾಗಿ ಆಚರಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಮಾತನಾಡಿ, ಬಸವ ಜಯಂತಿಯನ್ನು ತಾಲ್ಲೂಕು ಕೇಂದ್ರದಲ್ಲಿ ಅದ್ದೂರಿಯಾಗಿ ಆಚರಿಸಲು ತಮ್ಮೆಲ್ಲರ ಸಹಕಾರ ಅಗತ್ಯವಿದೆ. ಸಮಾಜದ ಮುಖಂಡರು ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ಸಲಹೆ ಸೂಚನೆಗಳನ್ನು ನೀಡಿ ಜಯಂತಿ ಆಚರಣೆಗೆ ಸಹಕರಿಸುವುದರ ಜತೆಗೆ ಸಮುದಾಯದ ಸಂಘಟನೆಗೆ ಹೆಚ್ಚು ಒತ್ತು ನೀಡಲು ಅಗತ್ಯ ಸಲಹೆ ನೀಡುವಂತೆ ಮನವಿ ಮಾಡಿದರು
ಮಾಡ್ರಹಳ್ಳಿ ಶಾಂತಮಲ್ಲಿಕಾರ್ಜುನಸ್ವಾಮೀಜಿ, ಸೇತುವೆ ಮಠದ ಸಹಜಾನಂದ ಸ್ವಾಮೀಜಿ, ನಿಲಸೋಗೆ ಮಲ್ಲಪ್ಪಸ್ವಾಮೀಜಿ, ಬಿಲಿಗೆರೆಹುಂಡಿ ಸ್ವಾಮೀಜಿ, ಹೊಸವರಹುಂಡಿ ರಾಜಶೇಖರಸ್ವಾಮೀಜಿ, ತಾ.ಪಂ ಸದಸ್ಯ ಮೂಗೂರು ಚಂದ್ರಶೇಖರ್, ಮಹಾಸಭಾದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

Leave a Comment