ಬಸವನಗುಡಿಯ ಹಳ್ಳಿಹಬ್ಬ ಕಡಲೆಕಾಯಿ ಪರಿಷೆ

ಕಾರ್ತೀಕಮಾಸದ ದೀಪಗಳಡಿಯಲ್ಲಿ ರಾಶಿ ರಾಶಿ ಕಡಲೆಕಾಯಿ, ನೂರಾರು ಮೈಲುಗಳಿಂದ ನೂರಾರು ಹೊಲಗಳಿಂದ ಬಂದ ಕಡಲೆಕಾಯಿಯ ರಾಶಿಯ ಸೊಬಗ ನೋಡಬೇಕೇ? ಹಾಗಿದ್ದರೆ ಬನ್ನಿ, ಬಸವನಗುಡಿಗೆ ಕಡಲೆಕಾಯಿ ಜಾತ್ರೆಗೆ !

ಬಸವನಗುಡಿಗೆ ಕಡಲೆಕಾಯಿ ಪರಿಷೆಗೆ ತನ್ನದೇ ಆದ ಛಾಪಿದೆ. ಕಾರ್ತೀಕಮಾಸದ ಕೊನೆ ಸೋಮವಾರದ ಹಿಂದು ಮುಂದಿನ ದಿನಗಳಲ್ಲಿ ಬಸವನಗುಡಿಯ ರಸ್ತೆಯ ಇಕ್ಕೆಲಗಳಲ್ಲಿ ಕಡಲೆಕಾಯಿ ದಿಬ್ಬ ನೋಡುಗರ ಕಣ್ಣಿಗೆ ಹಬ್ಬ. ನಗರದ ಜಂಜಾಟದಲ್ಲೂ ಹಳ್ಳಿಯ ಸೊಗಡನ್ನು ಸವಿಯಬೇಕು ಅಂತಿದ್ದರೆ ತಪ್ಪದೆ ಈ ಪರಿಷೆ ಬರೀ ಕಡಲೆಕಾಯಿಗಷ್ಟೇ ಸೀಮಿತ ಅಲ್ಲ, ನಿಮ್ಮ ಮೆಚ್ಚಿನ ಖಾರಾ ಮಂಡಕ್ಕಿ, ಬಣ್ಣ ಬಣ್ಣದ ದೀಪಗಳು, ಚಿಣ್ಣರ ಕಣ್ಣ ಸೆಳೆಯುವ ಬೊಂಬೆಗಳು, ಆಟಿಕೆಗಳು ಹೋ ಒಂದೇ ಎರಡೇ ! ಎಪಿಎಸ್ ಕಾಲೇಜು ಬದಿಯಿಂದ ರಾಮಕೃಷ್ಣ ಚೌಕದವರೆಗೆ ಒಮ್ಮೆ ಹಾದು ಬಂದರೆ ಸಾಕು, ನಿಮಗೊಂದು ಹಳ್ಳಿ ಜಾತ್ರೆಯ ದಿವ್ಯ ಅನುಭವ ಬಾರದಿದ್ದರೆ ಹೇಳಿ.
ಕಡಲೆಕಾಯಿ ಪರಿಷೆಯಲ್ಲಿ ಹಸಿ, ಬೇಯಿಸಿದ, ಹುರಿದ ಕಡಲೆಕಾಯಿ ಈ ಎಲ್ಲವೂ ಲಭ್ಯ. ಬೆಂಗಳೂರಿನ ಮಾವಳ್ಳಿ, ಸುಂಕೇನಹಳ್ಳಿ, ಹೊಸಹಳ್ಳಿ, ಕೋಲಾರದ ಚಿಂತಾಮಣಿಯಿಂದಲೂ ಆಂಧ್ರದ ಕಡೆಯಿಂದಲೂ ತಮಿಳುನಾಡಿನ ಧರ್ಮಪುರಿಯಿಂದಲೂ ಬಂದ ವಿವಿಧ ಕಡಲೆಕಾಯಿಯನ್ನು ನೀವು ನೋಡಬಹುದು. ಸವಿಯಲೂ ಬಹುದು. ಕಡಲೆಕಾಯಿಯೊಂದಿಗೆ ಸವಿ ಬೆರೆಸಲು ಆಲೆಮನೆಯಿಂದ ನೇರವಾಗಿ ಬಂದ ಬೆಲ್ಲದಚ್ಚುಗಳು, ಬೆಲ್ಲದುಂಡೆಗಳು, ತಿಪಟೂರಿಗೆ ಕೊಬ್ಬರಿ ಚೂರು ಇದ್ದೇ ಇರುತ್ತದೆ.

ಕಡಲೆಕಾಯಿ ಕಡಲೆಕಾಯಿ

ಬೆಂಗಳೂರಿನ ಈಗಿನ ಬಸವನಗುಡಿ ಈ ಹಿಂದೆ ಅನೇಕ ಹಳ್ಳಿಗಳ ಜಾಗವಾಗಿತ್ತು. ಇಲ್ಲಿನ ಪ್ರಮುಖ ಬೆಳೆ ಕಡಲೆಕಾಯಿ ಅರ್ಥಾತ್ ಶೇಂಗಾ, ನೆಲಗಡಲೆ ಆಗಿತ್ತು. ಸಮೃದ್ಧವಾಗಿ ಬೆಳೆದು ನಿಂತ ಕಡಲೆಕಾಯಿ ಬೆಳೆಯನ್ನು ಗೂಳಿಯೊಂದು ಹಾಳು ಮಾಡುತ್ತಿತ್ತು. ಇದರ ಉಪಟಳ ತಾಳದೇ ರೈತರು ಸಭೆ ಸೇರಿ, ಗೂಳಿಯನ್ನು ಓಡಿಸುವುದಕ್ಕೆ ಪ್ಲಾನ್ ಮಾಡಿದರು. ಬೆಳೆಗೆ ಬಾಯಿ ಹಾಕಿದ ಗೂಳಿಯನ್ನು ಊರು ಜನರು ಅಟ್ಟಿಸಿಕೊಂಡು ಹೊರಟರು. ರೈತರಿಂದ ತಪ್ಪಿಸಿಕೊಂಡು ಬಂದ ಗೂಳಿ ಸುಂಕೇನಹಳ್ಳಿ ಸಮೀಪದ ಬೆಟ್ಟ ಏರಿ ಕಲ್ಲಾಯಿತು. ಅದನ್ನು ಕಣ್ಣಾರೆ ಕಂಡ ರೈತರು ಇದು ಸಾಮಾನ್ಯ ಗೂಳಿಯಲ್ಲ, ಶಿವನ ವಾಹನ ನಂದಿ, ಬಸವ ಎಂದು ನಂಬಿದರು. ತಾವು ಮಾಡಿದ ತಪ್ಪಿಗಾಗಿ ರೈತರು ಪ್ರತಿವರ್ಷವೂ ಬೆಳೆದ ಕಡಲೆಕಾಯಿಯನ್ನು ಬಸವನಿಗೆ ಅರ್ಪಿಸುತ್ತಾರೆ. ತಾವು ಮಾಡಿದ ತಪ್ಪನ್ನು ಮನ್ನಿಸು ಎಂದು ಬೇಡಿಕೊಳ್ಳುತ್ತಾರೆ. ಅಂದಿನಿಂದ ಈ ಆಚರಣೆ ನಡೆದುಕೊಂಡು ಬಂದಿದೆ. ಇಲ್ಲಿ ಬೆಂಗಳೂರು ಸುತ್ತಮುತ್ತಲಿನ ರೈತರಷ್ಟೇ ಅಲ್ಲದೆ ಕರ್ನಾಟಕದ ವಿವಿಧೆಡೆಗಳಿಂದ ಮತ್ತು ನೆರೆಯ ತಮಿಳುನಾಡು, ಆಂಧ್ರಪ್ರದೇಶಗಳಿಂದಲೂ ರೈತರು ಈ ಪರಿಷೆಗೆ ಕಡಲೆಕಾಯಿ ಮಾರಾಟ ಮಾಡಲು ಬರುತ್ತಾರೆ.

ಮತ್ತೊಂದು ನಂಬಿಕೆ

ನಂದಿ ಕುರಿತಾದ ಮತ್ತೊಂದು ಪ್ರಚಲಿತ ನಂಬಿಕೆ ಎಂದರೆ, ಬಸವ ಬೆಳೆಯದಂತೆ ತಡೆದದ್ದು, ಅಂದು ಐಕ್ಯನಾದ ಬಸವ ಕಲ್ಲಾಗಿದ್ದಷ್ಟೇ ಅಲ್ಲ, ಹಾಗೆಯೇ ಬೆಳೆಯತೊಡಗಿದ. ಅದು ಯಾವ ಪರಿ ಬೆಳೆದನೆಂದರೆ ೧೫ ಡಿ ಎತ್ತರ, ೨೦ ಅಡಿ ಅಗಲದಷ್ಟು ಬೃಹತ್ ಆಗಿ ಬೆಳೆದು ನಿಂತ. ಇನ್ನೂ ಬೆಳೆದರೆ ಪೂಜಿಸಲು ಕಷ್ಟವಾಗುತ್ತದೆಂದು ರೈತರೆಲ್ಲ ಸೇರಿ ಬಸವಣ್ಣನ ತಲೆಯ ಮೇಲೆ ಮೊಳೆ ಹೊಡೆಯುತ್ತಾರೆ. ಅಲ್ಲಿಂದ ಬಸವಣ್ಣ ಬೆಳೆಯುವುದನ್ನು ನಿಲ್ಲಿಸಿದ ಎಂದು ಉಲ್ಲೇಖಿಸಲಾಗಿದೆ. ಅನಂತರ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ೧೫೩೭ರಲ್ಲಿ ಬಸವನಿಗೆ ದೇವಾಲಯವನ್ನು ಕಟ್ಟಿಸಿದ್ದಾರೆ. ಈ ದೇವಸ್ಥಾನದಿಂದಾಗಿಯೇ ಬೆಂಗಳೂರು ಮಹಾನಗರದ ಪ್ರತಿಷ್ಠಿತ ಈ ಬಡಾವಣೆಗೆ ಬಸವನಗುಡಿ ಎಂದು ಹೆಸರಿಟ್ಟಿದ್ದಾರೆ.

ಕಡಲೆಕಾಯಿ ಪರಿಷೆ

ಬಸವನಷ್ಟೇ ಮಹತ್ವ ಕಡಲೆಕಾಯಿ ಪರಿಷೆಗೂ ಇದೆ. ಪ್ರತಿ ವರ್ಷ ಕಾರ್ತೀಕ ಸೋಮವಾರ, ಮಂಗಳವಾರ ಬುಧವಾರ ಈ ಕಡಲೆಕಾಯಿ ಪರಿಷೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಬೇಯಿಸಿರುವ ಕಡಲೆಕಾಯಿ, ಹಸಿ ಕಡಲೆಕಾಯಿ, ಹುರಿದಿರುವ ಕಡಲೆಕಾಯಿ ಮಾರಾಟ ಮಾಡಲಾಗುತ್ತದೆ. ಜತೆಗೆ ಜಾತ್ರೆಯಲ್ಲಿ ಸಿಗುವ ಎಲ್ಲಾ ತರಹದ ಆಟಿಕೆ ಸಾಮಾನುಗಳು ಲಭ್ಯ. ಕಡಲೆಕಾಯಿ ಪರಿಷೆ ಮೂರು ದಿನಗಳ ಕಾಲ ನಡೆಯುತ್ತದೆ. ಮೊದಲ ದಿನದ ಪರಿಷೆಯನ್ನು ಚಿಕ್ಕ ಪರಿಷೆ ಎನ್ನುತ್ತಾರೆ.

ಕಡಲೆಕಾಯಿ ಮಾರುವುದಕ್ಕಿಂತ ಮುಂಚೆ, ಬಸವನಿಗೆ ಕಡಲೆಕಾಯಿಯನ್ನೇ ಪ್ರಸಾದವಾಗಿ ನೀಡುವುದು ವಾಡಿಕೆ. ಹೀಗೆ ಮಾಡುವುದರಿಂದ ಮುಂದಿನ ಬೆಳೆಗಳು ಹುಲುಸಾಗಿ ಬರಲಿದೆ ಎಂಬ ನಂಬಿಕೆ ರೈತರದ್ದು. ಅಂದು ಬಸವನಿಗೆ ವಿಶೇಷವಾದ ಅಲಂಕಾರದ ಜತೆಗೆ ಇಡೀ ದೇವಸ್ಥಾನವನ್ನು ದೀಪಗಳಿಂದ ಕಂಗೊಳಿಸುವಂತೆ ಮಾಡಿರುತ್ತಾರೆ. ಈ ಜಾತ್ರೆಯಲ್ಲಿ ಭಕ್ತರು ಕಡಲೆ ತಿಂದರೆ ಬಸವ ತೃಪ್ತನಾಗುತ್ತಾನೆ ಎಂಬ ಕಾರಣಕ್ಕಾಗಿ ಲಕ್ಷಾಂತರ ಜನರು ಈ ಜಾತ್ರೆಗೆ ಆಗಮಿಸುತ್ತಾರೆ. ಕಡಲೆಕಾಯಿ ತಿಂದು ಸಂಭ್ರಮಿಸುತ್ತಾರೆ. ಬಿಸಾಕಿದ ಕಡಲೆಕಾಯಿ ಸಿಪ್ಪೆಯನ್ನು ರಾತ್ರಿ ವೇಳೆ ಕಲ್ಲು ಬಸವ ನಿಜ ರೂಪ ತಾಳಿ ತಿನ್ನುತ್ತಾನೆ ಎಂಬ ನಂಬಿಕೆಯೂ ಹಲವರದ್ದು.

ಕಡಲೆಕಾಯಿಯೂ ಆಧ್ಯಾತ್ಮವೂ

ನಾಥ ಮತ್ತು ಸಿದ್ಧ ಸಂಪ್ರದಾಯದಲ್ಲಿ ಶಿವನ ವಾಹನ ನಂದಿಯನ್ನೂ ಗುರುವೆಂದು ಪರಿಗಣಿಸುತ್ತಾರೆ. ಉದಾಹರಣೆಗೆ ಸಿದ್ಧ ತಿರುಮೂಲನಾಥರ್, ಪತಂಜಲಿನಾಥರ್ ಅವರ ಗುರುವೇ ನಂದೀಶನಾಗಿದ್ದಾನೆ. ಯೋಗಶಾಸ್ತ್ರದ ಪ್ರಕಾರ, ನಂದಿ ಅಥವಾ ನಂದಿಕೇಶ್ವರನು ಶಿವನ ಶಿರೋಭಾಗವನ್ನು ಪ್ರತಿನಿಧಿಸುತ್ತಾನೆ ಅಂದರೆ ಅವನದು ಪರಿಪೂರ್ಣ ವ್ಯಕ್ತತ್ವ. ಶಿವನನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಮೊದಲು ನಂದಿಯನ್ನು ಅರ್ಥಮಾಡಿಕೊಳ್ಳಬೇಕು. ಅವನಲ್ಲಿರುವ ಜ್ಞಾನವನ್ನು ಮನನ ಮಾಡಿಕೊಳ್ಳಬೇಕು ಎಂಬುದಾಗಿದೆ. ಸರಳವಾಗಿ ಹೇಳುವುದಾದರೆ ನಂದಿಯೊಳಗೆ ಪರಿಪೂರ್ಣ ಗುರುವಿನ ಅವತಾರವಿದೆ.

ಆಧ್ಯಾತ್ಮಿಕ ದೃಷ್ಟಿಯಲ್ಲಿ ನಂದಿಯು ವ್ಯಕ್ತಿಯ ಜೀವದ ಪ್ರತಿನಿಧಿ. ಜೀವನಿಂದ ಹೊರಬರುವ ಸಂದೇಶವು ಆತ್ಮ (ಪರಮಾತ್ಮ)ನಲ್ಲೇ ಪ್ರತಿಷ್ಠಿತವಾಗಿರುವಂತೆ ನಂದಿಯ ದೃಷ್ಟಿಯು ಸದಾ ಪರಮೇಶ್ವರನಲ್ಲೇ ನೆಟ್ಟಿರುತ್ತದೆ. ನಂದಿಗೆ ಪ್ರಿಯವಾದ ಕಡಲೆಕಾಯಿ ಪೌಷ್ಠಿಕಾಂಶದ ದೃಷ್ಟಿಯಿಂದಲೂ ಪರಿಪೂರ್ಣ ಆಹಾರ, ಗಿಡದ ಬುಡದಲ್ಲಿ ಸುಪ್ತವಾಗಿ ಹರಡಿಕೊಳ್ಳುವ ಕಡಲೆಕಾಯಿಯಂತೆ ಆಧ್ಯಾತ್ಮದ ಸಾರವೂ ಸುಪ್ತವಾಗಿರುತ್ತದೆ. ಗೊಂಚಲಾದ ಬಳ್ಳಿಯಲ್ಲಿ ಉತ್ತಮವಾದುದ್ದದ್ದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಸಹನೆಯಿಂದ, ಶ್ರದ್ಧೆಯಿಂದ ಗಡುಸಾದ ಹೊರಕವಚವನ್ನು ಬಿಡಿಸಿದಾಗ ಮಾತ್ರ ಫಲ ದೊರೆಯುತ್ತದೆ. ನಿಗೂಢ ಅಂತರಾರ್ಥ ಹೊಂದಿದ ವೇದಗಳೂ ಮೇಲ್ನೋಟಕ್ಕೆ ಕಡಲೆಕಾಯಿ ಸಿಪ್ಪೆಯಷ್ಟು ಜಟಿಲವೇ. ಶ್ರದ್ಧೆಯಿಂದ ಬಿಡಿಸಿದಷ್ಟು ಅದರ ಸಾರ ಸಿಗುತ್ತದೆ. ಮನಸ್ಸು ಸಂತೃಪ್ತಗೊಳ್ಳುತ್ತದೆ.

Leave a Comment