ಬಸವನಗುಡಿಯಲ್ಲೊಂದು ಭೂವೈಕುಂಠ

ಬೇಡಿದ್ದನ್ನು ಕೊಡುವ ಕಾಮಧೇನು… ಕೇಳಿದ್ದನ್ನು ನೀಡುವ ಕಲ್ಪವೃಕ್ಷ… ಕಷ್ಟಕಾರ್ಪಣ್ಯಗಳನ್ನು ದೂರ ಮಾಡುವ ಶ್ರೀವೆಂಕಟೇಶ್ವರನನ್ನು ನೋಡಲು ತಿರುಪತಿಗೆ ಜನಸಾಗರವೇ ತೆರಳುತ್ತದೆ. ಅದೇ ರೀತಿ ಸಿಲಿಕಾನ್ ಸಿಟಿಯಲ್ಲೂ ಸಾಕಷ್ಟು ಶ್ರೀಬಾಲಾಜಿ ದೇವಸ್ಥಾನಗಳಿವೆ. ಆದರೆ ಐತಿಹಾಸಿಕ ಬಸವಗುಡಿಯ ಸೋಸಲೆ ವ್ಯಾಸರಾಜ ಮಠದಲ್ಲಿರುವ ಶ್ರೀನಿವಾಸನ ಸನ್ನಿಧಾನ ಇತರೆ ದೇವಾಲಯಗಳಿಗಿಂತ ವಿಭಿನ್ನ, ವಿಶಿಷ್ಟ.

vaikunta-svm
ಬೆಂಗಳೂರು ನಗರ ದೇವಸ್ಥಾನಗಳು, ಧಾರ್ಮಿಕ ನಂಬಿಕೆಗಳ, ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯಿಂದ ತುಂಬಿ ತುಳುಕುತ್ತಿದೆ. ನಗರದ ಭಾಗವೆನಿಸಿದ ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿರುವ ಶ್ರೀ ಸೋಸಲೆ ವ್ಯಾಸರಾಜಮಠದ (ಬೆಣ್ಣೆ ಗೋವಿಂದಪ್ಪ ರಸ್ತೆಯಲ್ಲಿ) ಆವರಣದಲ್ಲಿ ಶ್ರೀ ವ್ಯಾಸರಾಜರು ತಿರುಪತಿಯಲ್ಲಿ ಶ್ರೀನಿವಾಸನನ್ನು ಪೂಜಿಸಿದ ಸ್ಮರಣಾರ್ಥವಾಗಿ ಭೂವರಾಹ, ನರಸಿಂಹ ,ಮಹಾಲಕ್ಷ್ಮೀ ಸಮೇತ ಏಳು ಅಡಿ ಎತ್ತರದ ಶ್ರೀ ಪ್ರಸನ್ನ ವರದ ದೇವರನ್ನು ಪ್ರತಿಷ್ಠಾಪಿಸಿ, ಕಲ್ಯಾಣಗಿರಿ ಬೆಂಗಳೂರನ್ನು ತಿರುಪತಿಯ ನಂತರ ಬೆಂಗಳೂರು ಶ್ರೀನಿವಾಸನ ದಿವ್ಯ ಕ್ಷೇತ್ರ ಎಂಬ ಖ್ಯಾತಿ ಪಡೆಯುವ ಹಾಗೂ ಸನ್ನಿಧಾನ ಪೂರ್ಣವಾದ ಕ್ಷೇತ್ರವನ್ನಾಗಿ ಪರಿವರ್ತಿಸಿದ ಕಿರೀಟ ಶ್ರೀಮಠದ ಹಿಂದಿನ ಪೀಠಾಧಿಪತಿಗಳಾದ ಶ್ರೀ ವಿದ್ಯಾವಾಚಸ್ಪತಿ ತೀರ್ಥರದ್ದು.

ಪ್ರತಿನಿತ್ಯ ಶುದ್ಧ ವೈಷ್ಣವನಾಗಿ ಅಂಗಾರ ಅಕ್ಷತೆಗಳಿಂದ ಕಂಗೊಳಿಸುವ ವೆಂಕಟೇಶ್ವರನಿಗೆ ತಂತ್ರಸಾರೋಕ್ತವಾಗಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ. ಇಲ್ಲಿ ಶ್ರೀನಿವಾಸ ಶಂಖ ಚಕ್ರಧಾರಿಯಾಗಿ ಬಲಗೈಯಿಂದ ತನ್ನ ಪಾದಪದ್ಮವನ್ನು ತೋರುತ್ತ ಎಡಗೈಯನ್ನು ತನ್ನ ಕಟಿಯ ಮೇಲಿಟ್ಟು ಕಂಗೋಳಿಸುತ್ತಿದ್ದಾನೆ. ತನ್ನ ಪಾದ ಸೇವೆಯನ್ನು ಮಾಡುವ ಸಂದೇಶ ಸಾರುತ್ತಿದ್ದಾನೆ.
ವಜ್ರಪಡಿ ವ್ಯಾಪಾರಸ್ಥ ಬೆಣ್ಣೆ ಗೋವಿಂದಪ್ಪನವರು ಈಗ ಶ್ರೀಮಠವಿರುವ ನಿವೇಶನವನ್ನು ವ್ಯಾಸರಾಜಮಠಾಧೀಶರಾಗಿದ್ದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರಿಗೆ ದಾನವಾಗಿ ನೀಡಿದ್ದರಿಂದ ಈ ಮಠದ ರಸ್ತೆಗೆ ಬೆಣ್ಣೆ ಗೋವಿಂದಪ್ಪ ರಸ್ತೆ ಎಂದು ನಾಮಕರಣ ಮಾಡಲಾಗಿದೆ.

vyasaraja-mutt
ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ವ್ಯಾಸರಾಯ ಸಂಸ್ಥಾನಕ್ಕೂ ಶ್ರೀನಿವಾಸನಿಗೂ ಇರುವ ಈ ಅನುಬಂಧ ಅಂದು ಇಂದಿನದಲ್ಲ. ಯುಗಯುಗಾಂತರಗಳ ಇತಿಹಾಸವೇ ಅಡಗಿದೆ ಇಲ್ಲಿ. ಆನಂದನಿಲಯವೆಂದು ಪ್ರಖ್ಯಾತವಾದ ಶ್ರೀನಿವಾಸನ ಗರ್ಭಗುಡಿಯ ಶಿಖರಕ್ಕೆ ಚಿನ್ನದ ರೇಖೆಯನ್ನು ಹಾಕಿಸಿ ತಿರುಮಲೆಯ ಗೋಪುರದ ಉತ್ತರ ದಿಕ್ಕಿನಲ್ಲಿ ವಿಮಾನ ಶ್ರೀನಿವಾಸನನ್ನು ಸ್ಥಾಪಿಸಿದ್ದು ಶ್ರೀ ವ್ಯಾಸರಾಯರ ಮಹತ್ತರ ಸಾಧನೆ.
೧೨ ವರ್ಷಗಳ ಕಾಲ ಶ್ರೀನಿವಾಸನನ್ನು ಆವಿಚ್ಛಿನ್ನವಾಗಿ ಪೂಜಿಸಿದ ಶ್ರೀ ವ್ಯಾಸರಾಯರು, ಅರ್ಚಕರ ಸಂತತಿಯ ಬಾಲಕನು ಉಪನೀತವಾದ ಕೂಡಲೇ ಅವನ ಅರ್ಹತೆಯನ್ನು ಪರೀಕ್ಷಿಸಿ, ಶ್ರೀನಿವಾಸನ ಪೂಜಾಧಿಕಾರವನ್ನು ಅವನಿಗೆ ಒಪ್ಪಿಸಿದರು. ಈ ಘಟನೆ ಅವರ ಮಹೋನ್ನತ ತ್ಯಾಗ ವಿರಕ್ತಿಗಳ ದ್ಯೋತಕ.
ಬೆಣ್ಣೆ ಗೋವಿಂದಪ್ಪನವರು ಹಾಗೂ ವ್ಯಾಸರಾಜ ಮಠವೂ: ವ್ಯಾಸರಾಜ ಮಠಕ್ಕೆ ಸೇರಿದ ಮಧ್ಯಮ ವರ್ಗದ ಸುಸಂಸ್ಕೃತ ಮನೆತನದಲ್ಲಿ ೧೮೫೩ರಲ್ಲಿ ಜನಿಸಿದ ಬೆಣ್ಣೆ ಗೋವಿಂದಪ್ಪನವರು ಧರ್ಮಾಸಕ್ತರು. ವಿದ್ಯಾಭ್ಯಾಸದ ನಂತರ ಯೋಗಾಯೋಗರಿಂದ ಪ್ರಸಿದ್ಧ ವಜ್ರ ಮೌಲ್ಯಮಾಪಕರಾಗಿ ಸಂಪರ್ಕವಾಗಿ ಕ್ರಮೇಣ ವಜ್ರಪಡಿ ವ್ಯಾಪಾರಸ್ಥರೆಂದೇ ಹೆಸರು ಪಡೆದು ಯಶಸ್ವಿ ಮೌಲ್ಯಮಾಪಕರಾದರು.
ಬ್ರಾಹ್ಮಣರ ಊಟ ವಸತಿಗೆ ಅವಕಾಶ ನೀಡುವಂತ ಛತ್ರಗಳನ್ನು ವ್ಯಾಪಾರಕ್ಕಾಗಿ ಬರುವ ತಾವೇ ಏಕೆ ಕಟ್ಟಿಸಬಾರದು ಎಂಬ ಆಲೋಚನೆ ಮೂಡಿ ೧೮೮೩ರಲ್ಲಿ ಬಸವಗುಡಿಯಲ್ಲಿ ೨೫೦*೨೫೦ ಚದುರದ ಮೂಲೆ ನಿವೇಶನವನ್ನು ಖರೀದಿಸಿ, ಹಂತ ಹಂತವಾಗಿ ಛತ್ರವನ್ನು ಬೆಳೆಸಲು ಪ್ರಾರಂಭಿಸಿದರು.
ಈ ಮಧ್ಯೆ ಅವರ ಒಬ್ಬನೆ ಮಗ ಬೆಣ್ಣೆ ಸುಬ್ಬರಾಯರು ತಂದೆಯವರು ಸ್ಥಾಪಿಸಿದ ದೇವಸ್ಥಾನ ಹಾಗೂ ಛತ್ರದ ಬೆಳವಣಿಗೆಗೆ ತಮ್ಮ ಬಾಳನ್ನೇ ಮೀಸಲಿಟ್ಟ ಮಹಾತ್ಯಾಗಿಗಳು.ಕಾಲಾನುಕ್ರಮದಲ್ಲಿ ಇಷ್ಟು ದೊಡ್ಡ ಜವಾಬ್ದಾರಿಯನ್ನು ಏಕಾಂಗಿಯಾಗಿ ನಿರ್ವಹಿಸಲು ಕಷ್ಟ ಸಾಧ್ಯವಾದಾಗ, ಹಲವು, ಹಿತೈಷಿ ಭಕ್ತಾದಿಗಳ ಸಹಿತ ಸಮಿತಿಯೊಂದನ್ನು ಪ್ರಾರಂಭಿಸಿದರೂ ಅದೂ ಕೂಡ ಅವರ ಮನಸ್ಸಿಗೆ ಅಸಮರ್ಪಕವೆನ್ನಿಸತೊಡಗಿತು.
ಅಂದಿನ ವ್ಯಾಸರಾಜ ಮಠಾಧೀಶರಾಗಿದ್ದ ಶ್ರೀ ವಿದ್ಯಾಪ್ರಸನ್ನ ತೀರ್ಥರಿಗೆ ದೇವಸ್ಥಾನ ಹಾಗೂ ಛತ್ರವನ್ನು ಕಾನೂನುರೀತ್ಯಾ ದಾನವಾಗಿ ಕೊಟ್ಟು ಕೃತಾರ್ಥರಾದರು. ಇದಕ್ಕೆ ಅವರ ಮಗ ಬೆಣ್ಣೆ ನಾರಾಯಣ ಸ್ವಾಮಿಯವರ ಸಹಯೋಗವೂ ಇತ್ತು. ಇಂದಿಗೂ ಮಠವನ್ನು ಇವರ ಹೆಸರಿನಿಂದಲೇ ಕರೆಯುವುದು ರೂಢಿ.
ಬೆಣ್ಣೆ ಗೋವಿಂದಪ್ಪ ಛತ್ರಕ್ಕೆ ರೂಪುರೇಖೆ ಕೊಟ್ಟ ಕೀರ್ತಿ ಶ್ರೀ ವಿದ್ಯಾಪಯೋನಿಧಿ ತೀರ್ಥರಿಗೆ ಸಲ್ಲಬೇಕು. ಪ್ರಹ್ಲಾದ, ಧ್ರುವರಾಜರಂತೆ ಬಾಲ್ಯದಿಂದಲೂ ಭಾಗವತ ಪ್ರತಿಪಾದ್ಯನಾದ ಶ್ರೀಕೃಷ್ಣನನ್ನು ಒಲಿಸಿಕೊಂಡು ೨೦೦೦ ಭಾಗವತ ಮಹಾಮಂಗಳ ಹಾಗೂ ಸಹಸ್ರಚಂದ್ರ ದರ್ಶನ ಶಾಂತಿ ಮಹೋತ್ಸವದ ಅಂಗವಾಗಿ ಅಕ್ಷತೆ-ಅಂಗಾರವಿರುವ ವೈಷ್ಣವರೆಲ್ಲರೂ ಭಜಿಸಲು ಯೋಗ್ಯವಾದ ಪ್ರಸನ್ನ ನೋಟ, ಭಕ್ತಾಭೀಷ್ಟಪ್ರದ ಅಭಯವರದ ಹಸ್ತಗಳಿಂದ ಶೋಭಿತನಾದ ಭವ್ಯ ಶ್ರೀನಿವಾಸನ ಪ್ರತಿಷ್ಠಾಪನೆ ವಿದ್ಯಾವಾಚಸ್ಪತಿತೀರ್ಥರಿಂದ ನನಸಾದ ಹೊಂಗನಸು. ನಮ್ಮೆಲ್ಲರ ಜನುಮಜನುಮಗಳ ಪುಣ್ಯದ ಬೆಳಸು.
ಈ ಮೂವರು ದೇವರುಗಳು ಸನ್ನಿಧಾನದಿಂದ ಈಗ ಇದೊಂದು ಬೃಹತ್ ಗೋವಿಂದ ಸುಂದರಧಾಮವಾಗಿ ಪುಣ್ಯ ಕ್ಷೇತ್ರವಾಗಿ ಶೋಭಿಸುತ್ತಿದೆ.
ಇದೇ ಜ. ೬ ಸೋಮವಾರ ದಂದು ಶ್ರೀನಿವಾಸ ಸನ್ನಿಧಿಯಲ್ಲಿ ಪವಿತ್ರವಾದ ವೈಕುಂಠ ಏಕಾದಶಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಲು ಸಿದ್ಧತೆ ನಡೆದಿದೆ.

ಪ್ರಸ್ತುತ ಪೀಠಾಧಿಪತಿಗಳಾದ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ಪರಮಮಂಗಲಕರ ಶ್ರೀಮದ್ಭಾಗವತ ಪುರಾಣ ಅಖಂಡ ಪ್ರವಚನ ಮಾಲಿಕೆಯನ್ನು ನಾಡಿನ ಖ್ಯಾತ ವಿದ್ವಾಂಸರಿಂದ ಏರ್ಪಡಿಸಲಾಗಿದೆ. ಪುಣ್ಯದ ಹಿಮಾಲಯವಾದ ಭಾಗವತ ಶ್ರವಣ ಈ ಪರ್ವಕಾಲದಲ್ಲಿ ಮೋಕ್ಷಕ್ಕೆ ಸಾಧನ. ಪ್ರವಚನಕಾರರಾದ ರಾಮವಿಠ್ಠಲಾಚಾರ್ಯ , ಹರಿದಾಸ ಭಟ್, ಎಚ್.ಸತ್ಯನಾರಾಯಣಾಚಾರ್ಯ, ಕರ್ನೂಲ್ ಶ್ರೀನಿವಾಸಾಚಾರ್ಯ, ಬಾಳಿಗಾರು ರುಚಿರಾಚಾರ್ಯ, ಕಲ್ಲಾಪುರ ಪವಮಾನಾಚಾರ್ಯ, ಶ್ರೀಹರಿ ಆಚಾರ್ ವಾಳ್ವೇಕರ್ , ಪಂಚಮುಖಿ ಪವಮಾನಾಚಾರ್ಯ, ಸತ್ಯಧ್ಯಾನಾಚಾರ್ ಕಟ್ಟಿ, ಗುಡೆಬಲ್ಲೂರು ವೆಂಕಟನರಸಿಂಹಾಚಾರ್ಯ, ವಿಠೋಬಾಚಾರ್ಯ, ಬ್ರಹ್ಮಣ್ಯಾಚಾರ್ಯರವರುಗಳು ಬೆಳಿಗ್ಗೆ ೮.೩೦ ರಿಂದ ರಾತ್ರಿ ೧೧.೩೦ ರವರೆಗೆ ನಿರಂತರವಾಗಿ ಸತ್ಕಥಾ ಉಪನ್ಯಾಸ ನಡೆಸಿಕೊಡಲಿದ್ದಾರೆ. ಭಕ್ತಾದಿಗಳು, ತಿರುಪತಿಯ ಪ್ರತಿರೂಪದಂತಿರುವ ಶ್ರೀ ದೇವರನ್ನು ದರ್ಶಿಸಿ ಕೃತಾರ್ಥರಾಗಲು ಇದೊಂದು ಸದವಕಾಶ ಎಂದು ಆಯೋಜಕರು ತಿಳಿಸಿರುತ್ತಾರೆ.

Leave a Comment