ಬಸವಣ್ಣರ ಹಾದಿಯಲ್ಲಿ ಸಾಗಿದರೆ ಪ್ರಬುದ್ಧ ಭಾರತ ನಿರ್ಮಾಣ

ಮೈಸೂರು. ಆ.4- ಸಮಾಜದಲ್ಲಿ ಲಿಂಗಬೇಧದ ವಿರುದ್ಧ ಹೋರಾಟ ನಡೆಸಿದವರಲ್ಲಿ ಕ್ರಾಂತಿ ವೀರ ಬಸವಣ್ಣನವರು ಅಗ್ರ ಗಣ್ಯರಾಗಿದ್ದರು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಅಭಿಪ್ರಾಯಪಟ್ಟರು.
ಅವರು ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತರ ಸಂಘ, ಬಸವ ಬಳಗಗಳ ಒಕ್ಕೂಟ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
12ನೇ ಶತಮಾನದಲ್ಲಿ ಸಮಾಜದಲ್ಲಿ ಕಂಡು ಬಂದಿದ್ದ ಲಿಂಗಬೇಧ ಹಾಗೂ ಸಮಾನತೆಗಳ ವಿರುದ್ಧ ದನಿ ಎತ್ತಿ ಎಲ್ಲರೂ ಒಂದೇ ಸಮಾನರು ಎಂದು ಘೋಷಿಸಿದ್ದರು. ಅವರ ಅಂದಿನ ದನಿ ಇಂದಿಗೂ ಈಡೇರದಿಲ್ಲದಿರುವುದು ವಿಷಾದದ ಸಂಗತಿ ಎಂದರು.
ಬಸವಣ್ಣನವರು ಎಲ್ಲರೂ ಸಮಾನತೆಯಿಂದ ಬಾಳಬೇಕೆಂಬ ಮಹದಾಸೆಯನ್ನು ಹೊಂದಿದ್ದರು. ಇದಕ್ಕಾಗಿ ಅವರು ಪುರುಷ ಮತ್ತು ಮಹಿಳೆ ಇಬ್ಬರು ಲಿಂಗಧಾರಣೆ ಮಾಡುವಂತೆ ತಿಳಿಯ ಹೇಳಿದ್ದರು. ಇದರೊಂದಿಗೆ ಅವರು ಪ್ರಬುದ್ಧ ಭಾರತ ನಿರ್ಮಾಣ ಆಗಬೇಕೆಂಬ ಮಹದಾಸೆಯನ್ನು ಹೊಂದಿದ್ದರು. ಅವರು ನಡೆದುಕೊಂಡು ಬಂದ ಹಾದಿಯಲ್ಲಿಯೇ ನಾವು ಸಾಗಿದಲ್ಲಿ ಒಂದಲ್ಲಾ ಒಂದು ದಿನ ಪ್ರಬುದ್ಧ ಭಾರತ ನಿರ್ಮಾಣ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಜಿ.ಟಿ. ದೇವೇಗೌಡರು ಗನ್ ಹೌಸ್ ಬಳಿ ಇರುವ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಹಲವಾರು ಜಾನಪದ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗು ತಂದವು. ಮೆರವಣಿಗೆಯು ಬಸವೇಶ್ವರ ವೃತ್ತದಿಂದ ಹೊರಟು ನಗರದ ಪ್ರಮುಖ ರಸ್ತೆಗಳ ಮೂಲಕ ಹಾದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ತಲುಪಿತು.
ಈ ಸಂದರ್ಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Leave a Comment