ಬಸವಣ್ಣನ ಧರ್ಮ ಪುನರುತ್ಥಾನಗೊಳಿಸಿದ ಶ್ರೀಗಳು

ತುಮಕೂರು, ಜ. 19-  ಸ್ವಾರ್ಥವೇ ತುಂಬಿ ತುಳುಕುತ್ತಿರುವ ಸಮಾಜದಲ್ಲಿ 111 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿರುವ  ಲಿಂ. ಶ್ರೀ ಶಿವಕುಮಾರ ಶ್ರೀಗಳು ಕೇವಲ ಮಠಾಧಿಪತಿಗಳಾಗದೆ ಜನರ ಹೃದಯ ಸಿಂಹಾಸನಾಧಿಪತಿಗಳಾಗಿದ್ದರು ಎಂದು ಕನ್ನಡ ಮತ್ತು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಇಂದಿಲ್ಲಿ ಸ್ಮರಿಸಿದರು.

ನಗರದ ಸಿದ್ದಗಂಗಾ ಮಠದಲ್ಲಿ ನಡೆದ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರಥಮ ಪುಣ್ಯ ಸಂಸ್ಮರಣೋತ್ಸನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾವು ದೇವರನ್ನು ನೋಡಿಲ್ಲ,  ದೇವರು ಹೇಗೆ ಇದ್ದಾರೆ ಎಂದರೆ ನಾವು  ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ಹೇಳುತ್ತೇವೆ.  ನಮ್ಮ ಕಾಲಘಟ್ಟದಲ್ಲಿ ನೋಡಿರುವ ಶ್ರೀಗಳಿಗೂ ದೇವರಿಗೂ ಯಾವುದೇ ಭಿನ್ನತೆ ಇಲ್ಲ. ದೇವರಿಗೂ ಮತ್ತು ಶ್ರೀಗಳಿಗೂ ಭಿನ್ನತೆ ಇಲ್ಲದ ಬದುಕನ್ನು ನಾವು ಕಂಡಿದ್ದೇವೆ ಎಂದರು.

12ನೇ ಶತಮಾನದ ಬವಸಣ್ಣವರ ಧರ್ಮದ ಪುನರುತ್ಥಾನ ಸಿದ್ದಗಂಗಾ ಮಠದಲ್ಲಿ ಸ್ಥಾಪನೆಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು ಎಂದರು.

ಸಮಾಜದಲ್ಲಿ ಯಾರೂ ಸಹ ಜಾತೀಯತೆಯಿಂದ ದೈವತ್ವಕ್ಕೆ ಏರಿರುವ ಉದಾಹರಣೆಗಳಿಲ್ಲ. ಆದರೆ ನಿಸ್ವಾರ್ಥ ಬದುಕು ಸೇವೆಯಿಂದ ದೈವತ್ವಕ್ಕೆ ಏರಿರುವ ಉದಾಹರಣೆಗಳು ನಮಗೆ ಸಿಗುತ್ತವೆ ಎಂದು ಅವರು ಹೇಳಿದರು.

ಸಾಮಾಜಿಕ ಆಂದೋಲನ

ಪ್ರಸ್ತುತ ದಿನಗಳಲ್ಲಿ ಮತ್ತೆ ಸಾಮಾಜಿಕ ಆಂದೋಲನದ ಅವಶ್ಯಕತೆ ಇದೆ.  ಪರಂಪರೆಯ ವಾರಸುದಾರಿಕೆಯನ್ನು ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಆಂದೋಲನ ಅತಿ ಮುಖ್ಯವಾಗಿದೆ ಎಂದರು.

ಇಂದಿನ ಜಾತಿ ವ್ಯವಸ್ಥೆಯಲ್ಲಿ ಬಹಳಷ್ಟು ಜನನಾಯಕರು ಜನ ಹಿತಕ್ಕಿಂತ ಕುಟುಂಬ ಹಿತಕ್ಕೆ ಒತ್ತು ನೀಡುತ್ತಿದ್ದಾರೆ ಎಂದು ವಿಷಾದಿಸಿದರು.

ಭಾರತ ದೇಶವನ್ನು ಜಾತೀಯತೆ, ಅಸ್ಪೃಶ್ಯತೆ ದುರ್ಬಲಗೊಳಿಸಿದೆ. ಎಷ್ಟೋ ಜನಕ್ಕೆ ಜಾತೀಯತೆಯೇ ಬಂಡವಾಳವಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಕಲ್ಪತರು ನಾಡು ಇದುವರೆಗೂ ಸಿದ್ದಗಂಗಾ ಶ್ರೀಗಳ ಹೆಸರಿನ ಮೇಲೆ ಜಗತ್ತಿನಲ್ಲಿ ಹೆಸರುವಾಸಿಯಾಗಿತ್ತು. ಈಗ ಅವರ ನೆನೆಪಿನ ಮೇಲೆ ಇನ್ನು ನೂರಾರು ವರ್ಷಗಳ ಕಾಲ ಸಿದ್ದಗಂಗಾ ಮಠ ಮತ್ತು ಜಿಲ್ಲೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕಾಗಿದೆ ಎಂದರು.

ಶ್ರೀಗಳ ಅನುಭವದ ಜ್ಞಾನ ನಮ್ಮೆಲ್ಲರಿಗೂ ಅನುಕರಣೀಯ. ಅನುಭವದಿಂದ ಬರುವ ಜ್ಞಾನ ಬಹಳ ಶ್ರೇಷ್ಠ ಎಂದು ಶ್ರೀಗಳು ಸದಾ ಹೇಳುತ್ತಿದ್ದರು ಎಂದು ಸ್ಮರಿಸಿದರು.

ರಾಜ್ಯದ ಲಕ್ಷಾಂತರ ಬಡಮಕ್ಕಳಿಗೆ ಜ್ಞಾನದ ಹಸಿವು, ಹೊಟ್ಟೆಯ ಹಸಿವಿನ ದಾಹ ತಣಿಸಿದ ಶ್ರೀಗಳು  ಬಡ ಮಕ್ಕಳ ಬದುಕಿನಲ್ಲಿ ಸದಾ ಬೆಳಕು ಚೆಲ್ಲುತ್ತಾ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.

ಸಿದ್ಧಗಂಗಾ ಮಠ ದೇಶ-ವಿದೇಶಗಳಲ್ಲಿ ಗುರುತಿಸಿಕೊಳ್ಳಿವಂತೆ ಮಾಡಿರುವ ಆಚಾರ-ವಿಚಾರದಲ್ಲಿ ಬಸವಣ್ಣನವರನ್ನು ಅನುಸರಿಸಿ, ಸರ್ವರ ಏಳಿಗೆಗೆ ಶ್ರಮಿಸಿದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಗಳು ಚಿರಸ್ಮರಣೀಯರಾಗಿದ್ದಾರೆ ಎಂದರು.

ಶ್ರೀಗಳವರು ಕಷ್ಟ ಕಾರ್ಪಣ್ಯಗಳನ್ನು ಅರಿತು ಬಡವರ ಮತ್ತು ನಿರ್ಲಕ್ಷಿತ ಸಮುದಾಯದ ಮಕ್ಕಳಿಗೆ ಅನ್ನ, ವಸತಿ ಹಾಗೂ ಜ್ಞಾನ ದಾಸೋಹವನ್ನು ನೀಡಿ ಎಲ್ಲರೂ ಕ್ಷೇಮವಾಗಿರಲಿ ಎಂದು ಬಯಸಿದವರು. ಅವರ ನಿತ್ಯ ಪ್ರವಚನ ಅಂತರಂಗಕ್ಕೆ ಅರಿವು ಮೂಡಿಸಿ ಜೀವನ ಪಾಠವನ್ನು ಕಲಿಸುವಂತಹದ್ದಾಗಿತ್ತು. ಜಾತಿ, ಮತ, ಕುಲ, ಎಂಬ ತಾರತಮ್ಯ ತಡೆಯುವಲ್ಲಿ ಮತ್ತು ಹಿಂಸೆ ನಿಗ್ರಹಿಸಲು ಅವರು ಹಾಕಿಕೊಟ್ಟ ಸತ್ ಸಂಪ್ರದಾಯ ನಿಜ ಜೀವನಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಲಾವಿದ ಪರಮೇಶ್ ಗುಬ್ಬಿ ಅವರು ಶ್ರೀಗಳ ಚಿತ್ರವನ್ನು ಕೆಲ ನಿಮಿಷಗಳಲ್ಲೇ ಬಿಡಿಸಿ ನೆರೆದಿದ್ದ ಅಪಾರ ಭಕ್ತರಲ್ಲಿ ಅಚ್ಚರಿ ಮೂಡಿಸಿದರು.

Leave a Comment