ಬಸವಕಲ್ಯಾಣದಲ್ಲಿ ಅನುಭವ ಮಂಟಪ ಉತ್ಸವ 23 ರಿಂದ

 

ಕಲಬುರಗಿ ನ 19: ಬೀದರ ಜಿಲ್ಲೆ ಜಿಲ್ಲೆಯ ಬಸವಕಲ್ಯಾಣದಲ್ಲಿ ನವೆಂಬರ್  23 ಹಾಗೂ 24ರಂದು ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪದ ವತಿಯಿಂದ ಎರಡು ದಿನಗಳ  ಅನುಭವ ಮಂಟಪ ಉತ್ಸವ ಜರುಗಲಿದೆ ಎಂದು ಅನುಭವ ಮಂಟಪದ ಅಧ್ಯಕ್ಷರು ಹಾಗೂ ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿಗಳಾದ ಡಾ.ಬಸವಲಿಂಗ ಪಟ್ಟದ್ದೇವರು  ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ವಚನ ಸಂಗೀತೋತ್ಸವ ಈ ಬಾರಿಯ ಅನುಭವ ಮಂಟಪ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಬೆಂಗಳೂರಿನ  ಬೇಲಿಮಠದ ಶಿವರುದ್ರ ಮಹಾಸ್ವಾಮೀಜಿ  ಮತ್ತು ಹಾರಕೂಡ ಶ್ರೀಗಳಾದ ಡಾ.ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ  ಸಾನಿಧ್ಯದಲ್ಲಿ ನವೆಂಬರ್ 23 ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಕಾನೂನು ಸಚಿವ ಪ್ರಹ್ಲಾದ್ ಜೋಶಿ  ಅವರು ಅನುಭವ ಮಂಟಪ ಉತ್ಸವ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಗ್ರಂಥ ಲೋಕಾರ್ಪಣೆ ಮಾಡಲಿದ್ದು, ಸಚಿವ ಜಗದೀಶ ಶೆಟ್ಟರ್ ಪ್ರಶಸ್ತಿ ಪ್ರದಾನ ಸಚಿವ ಪ್ರಭು ಚವ್ಹಾಣ ದಿನದರ್ಶಿಕೆ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮನಗುಂಡಿ ಶ್ರೀ ಗುರು ಬಸವ ಮಹಾಮನೆಯ ಬಸವಾನಂದ ಮಹಾಸ್ವಾಮಿಗಳಿಗೆ  ಡಾ.ಚನ್ನಬಸವ ಪಟ್ಟದೇವರು ಅನುಭವ ಮಂಟಪ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು.

24 ರಂದು ಬೆಳಿಗ್ಗೆ 11.30 ಕ್ಕೆ ಕಲಬುರಗಿಯ ಡಾ.ಜಯಶ್ರೀ ದಂಡೆ ಮತ್ತು ಡಾ. ವೀರಣ್ಣ ದಂಡೆ ದಂಪತಿಗೆ ಡಾ.ಎಂ.ಎಂ.ಕಲಬುರಗಿ ರಾಷ್ಟ್ರೀಯ ಸಂಶೋಧನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಎರಡೂ ಪ್ರಶಸ್ತಿಗಳು 50 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ  ಒಳಗೊಂಡಿದೆ.

23 ರಂದು  ಮಧ್ಯಾಹ್ನ 3 ಗಂಟೆಗೆ  ವಚನ ಸಂಗೀತ ಗೋಷ್ಠಿ  ಮತ್ತು ವಚನ ಸಂಗೀತೋತ್ಸವ ಮತ್ತು 24 ಬೆಳಿಗ್ಗೆ 9.30 ಕ್ಕೆ  ವಚನ ಸಂಗೀತೋತ್ಸವ ನಡೆಯಲಿದ್ದು ಎರಡೂ ದಿನಗಳ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ  ಸಂಗೀತಾ ಕಟ್ಟಿ , ಡಾ. ಮುದ್ದುಮೋಹನ, ವಿಶ್ವರಾಜ ರಾಜಗುರು, ಡಾ ಹನುಮಣ್ಣ ನಾಯಕ ದೊರೆ. ಡಾ ಕೃಷ್ಣಮೂರ್ತಿ ಭಟ್ ಅವರನ್ನೊಳಗೊಂಡಂತೆ ಅನೇಕ ಕಲಾವಿದರು ಸಂಗೀತದ ರಸದೌತಣ ಉಣಬಡಿಸಲಿದ್ದಾರೆ.

24 ರಂದು ಬೆಳಿಗ್ಗೆ 9.30 ಕ್ಕೆ  ಶರಣರ ಸ್ವರ ವಚನ ಸಾಹಿತ್ಯ ಗೋಷ್ಠಿ ಬಸವಣ್ಣನವರ ವಚನಗಳ ರಾಜ್ಯ ಮಟ್ಟದ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಗುವುದು.  ವಚನ ಕಲ್ಯಾಣ-ತಾತ್ವಿಕ ಚಿಂತನೆ ವಿಷಯ ಕುರಿತು ಗೋಷ್ಠಿ ಹಮ್ಮಿಕೊಳ್ಳಲಾಗುವುದು.

ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕನ್ನಡ ಗ್ರಂಥಗಳನ್ನು ಮತ್ತು ಮರಾಠಿ ಗ್ರಂಥಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು

ಸುದ್ದಿಗೋಷ್ಠಿಯಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಕಿರಿಯ ಸ್ವಾಮೀಜಿ ಗುರುಬಸವ ಪಟ್ಟದೇವರು.ಶರಣು ಸಲಗರ, ಧನರಾಜ ತಾಳಂಪಳ್ಳಿ,ಕುಪೇಂದ್ರ ಪಾಟೀಲ ರವೀಂದ್ರ ಶಾಬಾದಿ ನವಲಿಂಗ ಪಾಟೀಲ, ವಿಜಯಕುಮಾರ ತೇಗಲತಿಪ್ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು..

Leave a Comment