ಬಸರಕೋಡು-ಗೂಳ್ಯಂ ಸೇತುವೆಗಾಗಿ ಜನರಿಂದ ಪ್ರತಿಭಟನಾ ಱ್ಯಾಲಿ

ಬಳ್ಳಾರಿ, ಜೂ.14: ತಾಲೂಕಿನ ಬಸರಕೋಡು ಮತ್ತು ಆಂಧ್ರ ಪ್ರದೇಶದ ಧಾರ್ಮಿಕ ಕ್ಷೇತ್ರ ಗೂಳ್ಯಂ ಮಧ್ಯೆ ಇರುವ ವೇದಾವತಿ (ಹಗರಿ) ನದಿಗೆ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಸೇತುವೆ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ನೂರಾರು ಜನ ಪ್ರತಿಭಟನಾ ಱ್ಯಾಲಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಗರದ ನಾರಾಯಣರಾವ್ ಉದ್ಯಾನವನದಿಂದ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸುವ ಫಲಕಗಳನ್ನಿಡಿದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ, ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ಮುಂದಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಮುಖಂಡರುಗಳಾದ ಕೆ.ಯಱ್ರೆಪ್ಪ, ಈ.ಹನುಮಂತಪ್ಪ, ಎ.ದೇವದಾಸ್ ಮೊದಲಾದವರು ಮಾತನಾಡಿ, ಗೂಳ್ಯಂ ಗಾದಿಲಿಂಗಪ್ಪ ತಾತನವರ ಸ್ಮಾರಕದಿಂದ ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ. ಅಲ್ಲದೇ ನಮ್ಮ ಜಿಲ್ಲೆ ಮೊದಲಾದ ಕಡೆಗಳಿಂದ ನೂರಾರು ಜನತೆ ದರ್ಶನಕ್ಕಾಗಿ ಆಗಮಿಸುತ್ತಾರೆ. ಸೇತುವೆ ಇಲ್ಲದ ಕಾರಣ ಹಗರಿ ನದಿಯ ಉಸುಕು ಮತ್ತು ನೀರಿನಿಂದ ಕೂಡಿದ ಸುಮಾರು ಒಂದುವರೆ ಕಿಲೋ ಮೀಟರ್ ನಷ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಿದೆ.

ಹಗರಿ ನದಿ ತುಂಬಿ ಹರಿಯುವಾಗ ಸಂಪೂರ್ಣ ಬಂದ್ ಆಗಲಿದೆ. ರಸ್ತೆ ನಿರ್ಮಿಸುವಂತೆ ಹಲವು ದಶಕಗಳಿಂದ ಕೇಳಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಇನ್ನು ಆಸಕ್ತಿ ತೋರಿಸಿಲ್ಲ.

ಈ ಹಿಂದೆ ಶ್ರೀರಾಮುಲು ಸಂಸದರಾಗಿದ್ದಾಗ ಬಳ್ಳಾರಿಗೆ ಬಂದಿದ್ದ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಸೇತುವೆ ನಿರ್ಮಾಣಕ್ಕೆ ಕೇಳಿಕೊಂಡಾಗ ಮಂಜೂರು ಮಾಡಲಿದೆಂದು ಹೇಳಿದರೇ ಹೊರತು ಈ ವರೆಗೆ ಆಗಿಲ್ಲ.

ಇದರಿಂದಾಗಿ ದಿನನಿತ್ಯ, ವೃದ್ಧರು, ಮಹಿಳೆಯರು, ಮಕ್ಕಳು ಈ ರಸ್ತೆಯಲ್ಲಿ ಸಂಚರಿಸುವುದು ಸಂಕಷ್ಟವಾಗಿದೆ. ಕೂಡಲೇ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚಿಸಿ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕೆಂದು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಎಂ.ಎನ್.ಮಂಜುಳ, ಆರ್.ಸೋಮಶೇಖರಗೌಡ, ಹರೀಶ್, ದೊಡ್ಡಬಸಪ್ಪ, ಬುಡ್ಡಪ್ಪ, ಶಿವಪ್ಪ, ಪೂಜಾರಿ, ರಾಜ, ಜಗದೀಶ್, ಗೋಪಾಲ್, ಮಲ್ಲಿಕಾರ್ಜುನಗೌಡ, ಗಾದಿಲಿಂಗಪ್ಪ, ಮೊದಲಾದವರು ಉಪಸ್ಥಿತರಿದ್ದರು.

Leave a Comment