ಬಳ್ಳಾರಿ ವಿಭಜನೆ ಅಲ್ಲಂ ವಿರೋಧ, ಕೊಂಡಯ್ಯ ಸಮ್ಮತಿ

ಬಳ್ಳಾರಿ, ಅ. ೧- ಬಳ್ಳಾರಿ ಜಿಲ್ಲೆಯ ವಿಭಜನೆಯ ಬಗ್ಗೆ ಪರವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಮಾಜಿ ಸಚಿವ ಹಾಗೂ ವಿಧಾನಸಭಾ ಸದಸ್ಯ ಅಲ್ಲಂ ವೀರಭದ್ರಪ್ಪ ಅಖಂಡ ಬಳ್ಳಾರಿ ಜಿಲ್ಲೆಯ ಪರವಾಗಿದ್ದರೆ, ಕಾಂಗ್ರೆಸ್‌ನ ಮತ್ತೊಬ್ಬ ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಬಳ್ಳಾರಿ ಜಿಲ್ಲೆಯ ವಿಭಜನೆಯ ಪರವಾಗಿ ನಿಂತಿದ್ದಾರೆ.
ಬಳ್ಳಾರಿ ಜಿಲ್ಲೆಯ ವಿಭಜನೆ ಖಂಡಿಸಿ, ಇಂದು ನಡೆದಿರುವ ಬಳ್ಳಾರಿ ಬಂದ್ ಹಿನ್ನೆಲೆಯಲ್ಲಿ `ಸಂಜೆವಾಣಿ’ಯೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅಲ್ಲಂವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಅಖಂಡವಾಗಿಯೇ ಉಳಿಯಬೇಕು, ಜಿಲ್ಲೆ ವಿಭಜನೆ ಬೇಡ ಎಂದರು.
ಈ ಹಿಂದೆ ಬಳ್ಳಾರಿ ಜಿಲ್ಲೆಯನ್ನು ಆಂಧ್ರಪ್ರದೇಶಕ್ಕೆ ಸೇರಿಸಬೇಕು ಎಂಬುದರ ವಿರುದ್ಧ ನಮ್ಮ ಕುಟುಂಬ ಹೋರಾಟ ಮಾಡಿ ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಯುವಂತೆ ನೋಡಿಕೊಂಡಿತ್ತು. ಈ ಹಿಂದೆ ಬಳ್ಳಾರಿಯ ಹರಪನಹಳ್ಳಿ ತಾಲ್ಲೂಕನ್ನು ದಾವಣಗೆರೆ ಜಿಲ್ಲೆಗೆ ಸೇರಿಸಿವುದನ್ನು ವಿರೋಧ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡರು.
ಜಿಲ್ಲೆಯ ವಿಭಜನೆ ದ್ವೇಷ-ಅಶಾಂತಿಗೆ ಕಾರಣವಾಗುತ್ತಿದೆ. ಹಾಗಾಗಿ, ಜಿಲ್ಲೆಯ ವಿಭಜನೆ ಬೇಡ, ಮುಖ್ಯಮಂತ್ರಿಗಳು ಜಿಲ್ಲೆಯ ಜನರ ಅಭಿಪ್ರಾಯಪಡೆಯಬೇಕು. ಸರ್ವ ಪಕ್ಷದ ಜನಪ್ರತಿನಿಧಿಗಳ ಸಭೆ ಕರೆದು ನಂತರ ತೀರ್ಮಾನ ಕೈಗೊಳ್ಳಲಿ ಎಂದರು.
ಬಳ್ಳಾರಿ ವಿಭಜನೆ ಸೂಕ್ತ, ಕೆ.ಸಿ ಕೊಂಡಯ್ಯ
ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಠಿಯಿಂದ ಈಗಿರುವ ಬಳ್ಳಾರಿ ಜಿಲ್ಲೆಯನ್ನು ಹಿಬ್ಭಾಗ ಮಾಡಿ ಹೊಸ ಜಿಲ್ಲೆ ನಿರ್ಧಾರ ಸೂಕ್ತವಾದದ್ದು ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಹೇಳಿದರು.
ಬಳ್ಳಾರಿ ಜಿಲ್ಲೆ ವಿಭಜನೆ ಬಗ್ಗೆ ಪ್ರತ್ಯೇಕವಾಗಿ `ಸಂಜೆವಾಣಿ’ಯೊಂದಿಗೆ ಮಾತನಾಡಿದ ಕೆ.ಸಿ ಕೊಂಡಯ್ಯ ಅವರು, 1996ರಿಂದ ಜಿಲ್ಲೆಯ ಜನಪ್ರತಿನಿಧಿಯಾಗಿ ಇಡೀ ಜಿಲ್ಲೆಯಲ್ಲಿ ಓಡಾಡಿರುವೆ. ಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕಿನ ಕೊನೆಯ ಭಾಗದ ಜನ ಜಿಲ್ಲಾ ಕೇಂದ್ರಕ್ಕೆ ಬರುವುದು ಬಹಳ ಕಷ್ಟವಾಗುತ್ತದೆ. ಹಾಗಾಗಿ, ಜಿಲ್ಲೆ ವಿಭಜನೆಯಾದರೆ ಅನುಕೂಲ ಎಂದರು.
ಹೊಸಪೇಟೆಯನ್ನು ಕೇಂದ್ರವಾಗಿರಿಸಿ, ವಿಜಯನಗರ ಜಿಲ್ಲೆ ರಚನೆಯಾಗಬೇಕು ಎಂಬ ಕೂಗು ಕಳೆದ ಎರಡು ದಶಕಗಳಿಂದ ಕೇಳಿ ಬರುತ್ತಿದೆ. ಇದು ಹೊಸದೇನಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ ಬಳ್ಳಾರಿ ಜಿಲ್ಲೆ ವಿಭಜನೆಯ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಜಿಲ್ಲೆ ವಿಭಜನೆ ಬೇಡ ಎನ್ನುವವರು ಸಭೆಯಲ್ಲಿ ಕಾರಣಗಳನ್ನು ತಿಳಿಸಬಹುದು ಎಂದು ಅವರು ಹೇಳಿದರು.
ಕೆಲವರು ಹರಪನಹಳ್ಳಿ, ಹಗರಿ ಬೊಮ್ಮನಹಳ್ಳಿ ಜಿಲ್ಲೆಯಾಗಲಿ ಎಂದಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತದಿಂದ ಮುಖ್ಯಮಂತ್ರಿಗಳು ಪರಾಮರ್ಶೆ ಮಾಡಿ, ಯಾವುದು ಸೂಕ್ತ ಎಂಬುದನ್ನು ತೀರ್ಮಾನಿಸಲಿ, ಸರ್ಕಾರದ ತೀರ್ಮಾನಕ್ಕೆ ನಾವೆಲ್ಲ ಬದ್ಧ ಎಂದರು.

Leave a Comment