ಬಳ್ಳಾರಿ ಲೋಕಸಭೆ ಉಪ ಚುನಾವಣೆ ವೆಂಕಟೇಶ್ ಪ್ರಸಾದ್ ಗೆದ್ದರೆ, ನಾಗೇಂದ್ರಗೆ ಸಚಿವ ಸ್ಥಾನ!?

ಸಿದ್ದರಾಮಪ್ಪ ಸಿರಿಗೇರಿ
ಬಳ್ಳಾರಿ, ಅ.12- ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ನಿರುತ್ಸಾಹ ಮೂಡಿಸಿರುವ ಬಳ್ಳಾರಿ ಲೋಕಸಭಾ ಉಪ ಚುನಾವಣೆ ಕಾಂಗ್ರೆಸ್ ಮುಖಂಡ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರು ಮಾತ್ರ ಆಸಕ್ತಿ ತೋರಿದ್ದಾರೆ. ಉಪ ಚುನಾವಣೆಗೆ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಅವರ ಸಹೋದರ ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ತೀವ್ರ ಲಾಬಿ ನಡೆಸಿದ್ದಾರೆ. ಅಲ್ಲದೆ, ಚುನಾವಣೆಯಲ್ಲಿ ಅವರ ಸಹೋದರರನ್ನು ಗೆಲ್ಲಿಸಿಕೊಳ್ಳುವಲ್ಲಿ ಸಹ ತೀವ್ರ ಕಸರತ್ತು ನಡೆಸಿದ್ದಾರೆ. ಚುನಾವಣೆಯಲ್ಲಿ ಜಯಗಳಿಸಲು ಬೇಕಾಗಿರುವ ಎಲ್ಲ ರಾಜಕೀಯ ರಣತಂತ್ರವನ್ನು ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇಷ್ಟೆಲ್ಲಾ ಆಸಕ್ತಿಗೆ ಕಾರಣ:
ಈಹಿಂದೆ ಕಾಂಗ್ರೆಸ್ ನೇತೃತ್ವದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಆರಂಭದಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ ಅವರು ಸಚಿವ ಸ್ಥಾನದಿಂದ ವಂಚಿತರಾಗಿದ್ದರು. ಆದರೆ, ನಂತರದ ದಿನಗಳಲ್ಲಿ ರಾಮನಗರದ ಲೋಕಸಭಾ ಚುನಾವಣೆಯಲ್ಲಿ ಅವರ ಸಹೋದರ ಡಿ.ಕೆ. ಸುರೇಶ್ ಅವರನ್ನು ಗೆಲ್ಲಿಸಿಕೊಂಡು ಬಂದಲ್ಲಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗುವುದು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ್ದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಲೋಕಸಭೆ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರುನ್ನು ಸಂಸದರನ್ನಾಗಿ ಮಾಡಿದರು. ಆ ಕೂಡಲೇ ಡಿ.ಕೆ. ಶಿವಕುಮಾರ ಅವರಿಗೆ ಸಚಿವ ದೊರೆಯಲು ಮಾರ್ಗ ಸುಗಮವಾಯಿತು. ಅಂತಹ ಷರತ್ತು ಈಗ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಅವರಿಗೆ ಬಂದೊದಗಿದೆ.

ಈ ಹಿನ್ನೆಲೆಯಲ್ಲಿ ಶಾಸಕ ನಾಗೇಂದ್ರ ಅವರು ಶತಾಯ-ಗತಾಯ ಲೋಕಸಭೆ ಉಪ ಚುನಾವಣೆಯಲ್ಲಿ ಅವರ ಸಹೋದರನನ್ನು ಗೆಲ್ಲಿಸಿಕೊಂಡು ಬಂದರೆ, ತಾವುಬ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಒಂದೇ ಏಟಿಗೆ ಎರಡೂ ಹಕ್ಕಿಗಳನ್ನು ಹೊಡೆಯಬಹದು. ಒಂದು ಸಚಿವ ಸ್ಥಾನ. ಇನ್ನೊಂದು ಅವರ ಸಹೋದರನಿಗೆ ಸಂಸದ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವೇ ನಾಗೇಂದ್ರ ಅವರಿಗೆ ಈ ಚುನಾವಣೆಯಲ್ಲಿ ಇಷ್ಟೆಲ್ಲಾ ಆಸಕ್ತಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಬಳ್ಳಾರಿ ಲೋಕ ಸಭಾ ಉಪ ಚುನಾವಣೆಯಲ್ಲಿ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ ಅವರನ್ನು ಆರಿಸಿಕೊಂಡು ಬಂದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಬಳ್ಳಾರಿಗೆ ಕೊಡುವ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ ಅವರೇ ಈ ಷರತ್ತನ್ನು ನಾಗೇಂದ್ರ ಅವರಿಗೆ ವಿಧಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ತಲೆ ಕೆಡಿಸಿಕೊಳ್ಳದ ಸಾಮಾನ್ಯ ವರ್ಗದ ಮುಖಂಡರು:
ಬಳ್ಳಾರಿ ಲೋಕಸಭೆ ಕ್ಷೇತ್ರ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವುದರಿಂದ ಕಾಂಗ್ರೆಸ್‍ನಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ರಾಜಕೀಉ ಮುಖಂಡರು ಘಟಾನುಘಟಿಗಳು ಇದ್ದಾರೆ. ಅದರೆ, ಅವರ್ಯಾರು ಈ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವ ಯಾವುದೇ ಚುನಾವಣೆಗೆ ಅಷ್ಟೊಂದು ಒತ್ತು ನೀಡುವುದಿಲ್ಲ. ಅಲ್ಲದೆ, ಈ ಬಗ್ಗೆ ಅವರ್ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಕಾರಣ ಅವರವರ ಜಾತಿ ಲೆಕ್ಕಾಚಾರದಲ್ಲಿ ನಡೆಯುತ್ತಿದೆ. ನಮಗೇಕೆ ಈ ಉಸಾಬರಿ ಎಂಬಂತೆ ತೋರಿಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಸಚಿವ ಸ್ಥಾನ ಅಷ್ಟೂ ಸುಲಭವಿಲ್ಲ:
ಜಿಲ್ಲೆಯಲ್ಲಿರುವ 6 ಜನ ಶಾಸಕರ ಪೈಕಿ ಹೊಸಪೇಟೆಯ ಆನಂದ್ ಸಿಂಗ್, ಸಂಡೂರಿನ ಈ. ತುಕಾರಾಂ, ಹೂವಿನಹಡಗಲಿಯ ಪಿ.ಟಿ.ಪರಮೇಶ್ವರ ಸೇರಿದಂತೆ ಹಗರಿಬೊಮ್ಮನಹಳ್ಳಿಯ ಭೀಮಾನಾಯ್ಕ್ ಅವರು ಸಹ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ರೇಸ್‍ನಲ್ಲಿದ್ದಾರೆ. ಅಲ್ಲದೆ, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರು ಬಳ್ಳಾರಿ ಸಚಿವ ಸ್ಥಾನ ನೀಡುವ ಬಗ್ಗೆ ಸಮರ್ಥ ನಾಯಕರಿಗೆ ನೀಡಿ ಎಂದು ಹೈಕಮಾಂಡ್ ಗಮನ ಸೆಳೆಯಲಾಗಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅದರಲ್ಲೂ ಮಂತ್ರಿ ಸ್ಥಾನ ಕೊಟ್ಟರೆ, ನಿಭಾಯಿಸಲು ನಾನು ಸಿದ್ದ ಎಂದು ಹೇಳಿಕೆ ನೀಡಿರುವುದು. ಅವರೂ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎಂದು ಕಂಡು ಬರುತ್ತಿದೆ.

ಆದರೆ, ಲೋಕಸಭೆ ಉಪಚುನಾವಣೆಯಲ್ಲಿ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ ಅವರು ಗೆಲುವು ಸಾಧಿಸಿದರೆ, ಇದಕ್ಕೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಅವರ ಕೃಪಾಕಟಾಕ್ಷ ಖಚಿತವಾದರೆ, ಚುನಾವಣೆ ನಂತರ ನಾಗೇಂದ್ರ ಅವರಿಗೆ ಸಚಿವ ಸ್ಥಾನ ಗ್ಯಾರಂಟಿ ಎಂದು ಬಳ್ಳಾರಿ ಕಾಂಗ್ರೆಸ್‍ನಲ್ಲಿರುವ ಹಿರಿಯ ಮುಖಂಡರು ಹೇಳುವ ಮಾತು.

Leave a Comment