ಬಳ್ಳಾರಿ ತಾಲೂಕಿನಾದ್ಯಂತ ಭಾರಿ ಮಳೆ…

ಬಳ್ಳಾರಿ,ಅ.1: ನಗರದಲ್ಲಿ ನಿನ್ನೆ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದೆ. ನಗರ ಸೇರಿದಂತೆ ತಾಲೂಕಿನಾದ್ಯಂತ ಸುಮಾರು ಎರಡು ಗಂಟೆಗಳ ಕಾಲ ಗುಡುಗು ಸಿಡಿಲು ಸಮೇತ ಸುರಿದ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು.

ಹಬ್ಬದ ಸಂಭ್ರಮದಲ್ಲಿ
ಹಬ್ಬದ ಸಂಭ್ರಮದಲ್ಲಿ‌ದ್ದ ಜನರು ಮಳೆಯಿಂದ ಬನ್ನಿ ವಿತರಣೆ ಮಾಡದಂತಹ ಪರಿಸ್ಥಿತಿಯನ್ನು ಮಳೆ ತಂದಿಟ್ಟಿತ್ತು. ದೇವಸ್ಥಾನಕ್ಕೆ ತೆರಳಿದ ಭಕ್ತರು ವಾಪಾಸ್ಸು ಮನೆಗೆ ತೆರಳಲು ಎರಡು ತಾಸುಗಳ ಕಾಲ ಕಾದು ಕಾದು ಸುಸ್ತಾಗಿ ಜಿಟಿ ಜಿಟಿ ಮಳೆಯಲ್ಲಿಯೇ ಮನೆ ಸೇರುವಂತಾಗಿತ್ತು. ಮಳೆಯಿಂದ ನಗರದ ತಗ್ಗುಪ್ರದೇಶದ ಮನೆಗಳೆಲ್ಲಾ ನೀರಿನಿಂದ ಆವೃತಗೊಂಡಿವೆ.
ತೆಗ್ಗು ಪ್ರದೇಶದ ಕೆಲ ಮನೆಗಳಲ್ಲಿ ನೀರು ನುಗ್ಗಿದ್ದವು. ಶಾಲಾ ಕಾಲೇಜು ಗಳ ಆವರಣ, ಪಾರ್ಕ್ ಗಳು, ಸರ್ಕಾರಿ ಕಛೇರಿಗಳ ಆವರಣ ಸಂಪೂರ್ಣ ನೀರಿನಿಂದ ಆವೃತಗೊಂಡಿವೆ.

ನೀರಿನಲ್ಲಿ ‌ಮುಳುಗಿದ‌ ಸಾರಿಗೆ‌ ಬಸ್
ನಗರದ ಮಧ್ಯ ಭಾಗ್ಯದಲ್ಲಿರುವ ಎರಡು ಅಂಡರ್ ಬ್ರಿಡ್ಜ್‌ಗಳು ಮತ್ತು ನಲ್ಲಚೆರುವು ಪ್ರದೇಶದಲ್ಲಿರುವ ಬ್ರಿಡ್ಜ್ ನಲ್ಲಿ ಹೆಚ್ಚು ನೀರು ಸಂಗ್ರಹಗೊಂಡಿದ್ದವು.
ಹೀಗಾಗಿ ಮರಳಿ ಡಿಪೋಗೆ ತೆರಳುತ್ತಿದ್ದ ಎರಡು ಸಾರಿಗೆ ಬಸ್‌ಗಳು ಅಂಡರ್ ಬ್ರಿಡ್ಜ್‌‌ನಲ್ಲಿ ನೀರಿನಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಹೀಗಾಗಿ ನಗರದ ದುರ್ಗಮ್ಮ ರಸ್ತೆ. ಸತ್ಯ ನಾರಾಯಣ ಪೇಟೆ ರಸ್ತೆಗಳ ಸಂಚಾರ ಸಂಪೂರ್ಣ ಟ್ರಾಫಿಕ್ ಜಾಮ್‌‌ಗೆ ಒಳಗಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು.

 ಫೇಲಾದ ಪಾಲಿಕೆ
ಬಳ್ಳಾರಿ ನಗರ ಪಾಲಿಕೆಯು ಸಂಪೂರ್ಣವಾಗಿ ನಿಷ್ಕ್ರೀಯಗೊಂಡಿದ್ದು ನಗರದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ರಸ್ತೆಗಳಲ್ಲಿನ ತೆಗ್ಗು ಗುಂಡಿಗಳನ್ನು ಮುಚ್ಚುವಲ್ಲಿ ಚರಂಡಿಗಳನ್ನು ಕ್ಲೀನ್ ಮಾಡುವಲ್ಲಿ ವಿಫಲವಾಗಿರುವುದರಿಂದ ರಸ್ತೆಗಳ ಮೇಲೆಯೇ ನೀರು ಹರಿದು ನಾಗರೀಕರು ಒದ್ದಾಡುವಂತಾಗಿದೆ.
ಒಟ್ಟಾರೆಯಾಗಿ ಜೋರಾಗಿ ಮಳೆ ಬಂತೆಂದರೆ ಸಾಕು ಬಳ್ಳಾರಿ ಜನತೆಯ ಪಾಡು ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

ಮಾಯದಂಥಾ ಮಳೆ ಬಂತಣ್ಣ
ನಗರ ಪಾಲಿಕೆ ಆಯುಕ್ತರಾಗಲೀ ಮೇಯರ್ ಉಪಮೇಯರ್ ಕಾರ್ಪೋರೇಟರ್ ಗಳಾಗಲಿ ಅಧಿಕಾರಿಗಳು, ಸಚಿವ, ಶಾಸಕರುಗಳಾಗಲಿ ಯಾರೊಬ್ಬರು ಬಳ್ಳಾರಿಯ ಜನತೆಯ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಯಾವುದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನಲು ನಿನ್ನೆ ಸುರಿದಂತಹ ಮಾಯದಂಥಾ ಮಳೆಯು ಮತ್ತೊಮ್ಮೆ ಸಾಬೀತು ಪಡಿಸಿದೆ.

ಸತತ ಮಳೆಯಿಂದ ಮೈದುಂಬಿದ ತುಂಗಭದ್ರೆ ಒಡಲು: ಕೃಷಿಕರಲ್ಲಿ ಸಂತಸ
ಬಳ್ಳಾರಿ: ಕಳೆದ ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ತುಂಗಭದ್ರಾ ನದಿ ಜಲಾಶಯದ ಕೆಳ ಭಾಗದಲ್ಲಿ ನೀರು ತುಂಬಿ ಹರಿಯುತ್ತಿದ್ದು ಇದು ನದಿಯನ್ನು ಆಶ್ರಯಿಸಿದ್ದ ಏತ ನೀರಾವರಿ ಕೃಷಿಕರಲ್ಲಿ ಸಂತಸ ಮೂಡಿಸಿದೆ.
ಜಲಾನಯನ ಪ್ರದೇಶಗಳಲ್ಲಿ ಅಗತ್ಯ ಮಳೆಯಾಗದ್ದರಿಂದ ತುಂಗಭದ್ರ ಜಲಾಶಯ ಸಂಪೂರ್ಣ ಭರ್ತಿಯಾಗಿರಲಿಲ್ಲ. ಇದರಿಂದ ಜಲಾಶಯದ ಕೆಳ ಭಾಗಕ್ಕೆ ನೀರು ಹರಿಬಿಟ್ಟಿರಲಿಲ್ಲ. ಹಾಗಾಗಿ ನದಿ ಸಂಪೂರ್ಣ ಬತ್ತಿಹೋಗಿತ್ತು. ಇದರಿಂದ ನದಿಯಲ್ಲಿನ ಜಲಚರಗಳೂ ಸಹ ಸಂಕಷ್ಟದಲ್ಲಿದ್ದವು. ಇನ್ನು ನದಿಯನ್ನು ಆಶ್ರಯಿಸಿದ್ದ ಏತ ನೀರಾವರಿ ಕೃಷಿಕರು ಮುಂಗಾರು ಬೆಳೆ ಇಲ್ಲದೆ ಚಿಂತೆಗೀಡಾಗಿದ್ದರು.

ಆದರೆ, ಕಳೆದ ವಾರದಿಂದ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿದು ಈ ನೀರು ಜಲಾಶಯದ ಕೆಳ ಭಾಗದನದಿ ಸೇರಿವೆ. ಇದರಿಂದ ಇದೇ ಪ್ರಥಮ ಬಾರಿಗೆ ನದಿಯ ಬಲದಂಡೆಯ ಸಿರುಗುಪ್ಪ ತಾಲೂಕಿನ ಮಣ್ಣೂರಿನಿಂದ ಮತ್ತು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕ್ಕರಗೋಳದಿಂದ ತುಂಬಿ ಹರಿಯತೊಡಗಿದೆ. ಸಿರುಗುಪ್ಪ ತಾಲೂಕಿನ ನಡವಿ ಗ್ರಾಮದ ಬಳಿ ನೀರು ಬಹುವಿಸ್ತಾರದಲ್ಲಿ ಹರಿದು ತಿರುವಿನಲ್ಲಿ ಸಾಗುತ್ತಿರುವುದನ್ನು ಜನರೂ ಬಂದು ನೋಡಿ ಸಂತಸ ಪಡುತ್ತಿದ್ದಾರೆ.

ಬಿತ್ತನೆ, ನಾಟಿ ಕಾರ್ಯ ವಿಳಂಬವಾಗಿದೆಯಾದರೂ ಕುಡಿಯಲು ಮತ್ತು ಇತರೆ ಕೃಷಿ ಚಟುವಟಿಕೆ ಕೈಗೊಳ್ಳಲು ನದಿಗೆ ನೀರು ಬಂದಿದ್ದಕ್ಕೆ ನದಿಯ ನೀರನ್ನು ಆಶ್ರಯಿಸಿದ್ದ ರೈತರ ಮನದಲ್ಲಿ ಉಲ್ಲಾಸ ಮೂಡಿಸಿದೆ.

ಹತ್ತಿ ಮೆಣಸಿನ ಕಾಯಿ ಬೆಳೆ ನಷ್ಟ
ಕಳೆದ ವಾರದಿಂದ ಸುರಿಯುತ್ತಿವ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಹಳ್ಳಗಳು ಹರಿಯುವಂತಾಗಿದೆ. ಆದರೆ ಈ ಭಾರೀ ಮಳೆಯಿಂದಾಗಿ ಹತ್ತಿ ಮತ್ತು ಮೆಣಸಿನ ಕಾಯಿ ಬೆಳೆದ ಹೊಲಗಳಲ್ಲಿ ನೀರು ನಿಂತಿದ್ದು, ಹತ್ತಿ ಮತ್ತು ಮೆಣಸಿನ ಕಾಯಿ ಬೆಳೆ ಹೆಚ್ಚು ನೀರಿನಿಂದ ಕೊಳೆಯುತ್ತಿದ್ದು, ಬೆಳೆ ನಷ್ಟು ಉಂಟಾಗುತ್ತಿದೆ. ಹತ್ತಿ ಮತ್ತು ಮೆಣಸಿನ ಕಾಯಿ ಬೆಳೆ ಬೆಳೆದ ರೈತರಿಗೆ ವರವಾಗಬೇಕಾಗಿದ್ದ ಮಳೆ ಶಾಪವಾಗಿ ಪರಿಣಮಿಸಿದೆ.

Leave a Comment