ಬಳ್ಳಾರಿ ಘಟನೆಗೆ ಜಿಲ್ಲಾಡಳಿತ ಕ್ಷಮೆಯಾಚನೆ: ಮಾನವೀಯತೆಯಿಂದ ನಡೆದುಕೊಳ್ಳೋಣ ಎಂದ ಮುಖ್ಯಮಂತ್ರಿ

ಬೆಂಗಳೂರು, ಜೂ.30 – ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಸಿಬ್ಬಂದಿ ನಡವಳಿಕೆ ಅತ್ಯಂತ ಅಮಾನವೀಯ ಹಾಗೂ ತೀವ್ರ ನೋವಿನ ಸಂಗತಿ.
ಕೋವಿಡ್ ಸೋಂಕಿತರೊಂದಿಗೆ ಮಾನವೀಯತೆಯಿಂದ ವರ್ತಿಸಿ, ಸೋಂಕಿತರ ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸಿ ಎಂದು ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೆ ವಿನಂತಿಸುತ್ತೇನೆ. ಮಾನವೀಯತೆಯಿಂದ ನಡೆದುಕೊಳ್ಳೋಣ, ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ ಎಂಬುದನ್ನು ಅರಿಯೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್19 ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೇಳೆ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿರುವುದು ತೀವ್ರ ಖಂಡನಿಯ. ಈ ಪ್ರಕರಣದ ಮಾಹಿತಿ ಪಡೆದುಕೊಳ್ಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಅಂತ್ಯಸಂಸ್ಕಾರ ನಡೆಸಿದ ಎಲ್ಲ ಸಿಬ್ಬಂದಿಯನ್ನು ಅಮಾನತು ಮಾಡಿರುವುದಲ್ಲದೆ,ಜಿಲ್ಲಾಡಳಿತ ಈ ಘಟನೆ ಖಂಡಿಸಿ ಕ್ಷಮೆ ಯಾಚಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಕೋವಿಡ್19 ರಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಪ್ರತ್ಯೇಕ ನಿಯಮಾವಳಿಗಳಿದ್ದು ಅವುಗಳನ್ನು ಪಾಲಿಸಲು ಇಲಾಖೆಯ ಎಲ್ಲ ಸಿಬ್ಬಂದಿಯಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಅಂತ್ಯ ಸಂಸ್ಕಾರವನ್ನು ಸೂಕ್ತ ಹಾಗೂ ಸಕಲ ಗೌರವಗಳಿಂದ ನೆರವೇರಿಸುವುದು ನಮ್ಮ ಸಂಸ್ಕೃತಿ. ಸೋಂಕಿನಿಂದ ಮೃತಪಟ್ಟವರು ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾಡದೆ ಸಲ್ಲಿಸಬೇಕಾದ ಗೌರವ ಸಲ್ಲಿಸೋಣ. ಮಾನವೀಯತೆ ಮೆರೆಯೋಣ ಎಂದು ಅವರು ಟ್ವೀಟ್‌ ಮಾಡಿದ್ದಾರೆ

Share

Leave a Comment