ಬಳಕೆ ಕಡಿಮೆಯಾದರೆ ಭಾಷೆಯ ಅವಸಾನ

  • ವಿಜಯಕುಮಾರಸ್ವಾಮಿ, ಸುರೇಶ್ ಹೊನ್ನಪ್ಪಗೌಡ

ಧಾರವಾಡ, ಜ. ೪- ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ, ಜನ ಬಳಸುವುದು ಕಡಿಮೆಯಾಗುತ್ತಾ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಹಾಗಾದಲ್ಲಿ ಯಾವುದೇ ಪ್ರಶಸ್ತಿ, ಸರ್ಕಾರದ ಅನುದಾನಗಳು, ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ ಚಳವಳಿ ಇತ್ಯಾದಿ ಯಾವೂ ಭಾಷೆಯನ್ನು ಉಳಿಸಲಾಗವು. ಇದಕ್ಕೆ ಸಂಸ್ಕೃತವೇ ಜ್ವಲಂತ ಉದಾಹರಣೆ ಎಂದಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ, ಮನುಷ್ಯ ಸಮಾಜದ ಎಲ್ಲ ವಹಿವಾಟುಗಳು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬದಲಾಗುತ್ತಿರುವುದು ಎಲ್ಲ ಕ್ಷೇತ್ರಗಳಲ್ಲೂ ಕಂಪ್ಯೂಟರ್ ಸರ್ವವ್ಯಾಪಿಯಾಗಿ ಆವರಿಸುತ್ತಿದೆ. ಹಾಗಾಗಿ ಕಂಪ್ಯೂಟರ್‌ನಲ್ಲೂ ಇಂಗ್ಲೀಷ್ ಭಾಷೆಯಷ್ಟೇ ಸರ್ವಸಮರ್ಥವಾಗಿ ಕನ್ನಡ ಭಾಷೆಯನ್ನು  ಬಳಸಬೇಕಾಗಿದೆ ಎಂದರು.

ಕಂಪ್ಯೂಟರ್‌ನಲ್ಲಿ ಕನ್ನಡ‌ವನ್ನು ಬಳಸದಿದ್ದರೆ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಪೂರ್ಣಚಂದ್ರ ತೇಜಸ್ವಿ ಮತ್ತು ನಾಡಿನ ಸುಪ್ರಸಿದ್ಧ ವಿಜ್ಞಾನಿ ರಾಜಾರಾಮಣ್ಣ ಹೇಳಿದ್ದರು. ಈ ಸಂದೇಶವನ್ನು ಹೊತ್ತು ತೇಜಸ್ವಿನಿ ಮತ್ತು ನಾನು ಅಂದಿನ ಅನೇಕ ಮಂತ್ರಿಗಳನ್ನು ಭೇಟಿ ಮಾಡಿ ತಂತ್ರಾಂಶದ ಅಗತ್ಯವನ್ನು ಹೇಳಿ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಕೇಳಿಕೊಂಡೆವು. ಭೇಟಿ ಮಾಡಿದವಱ್ಯಾರು ನಮ್ಮ ಸಹಾಯಕ್ಕೆ ಬರಲಿಲ್ಲ. ಆಗ ಮುಂದೆ ಬಂದವರು ಯಡಿಯೂರಪ್ಪನವರು ಮತ್ತು ಅಂದಿನ ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿದ್ದ ಡಾ. ಮನುಬಳಿಗಾರ್. ಅವರು ಪ್ರೊ. ಚಿದಾನಂದಗೌ‌ಡ ನೇತೃತ್ವದಲ್ಲಿ ಒಂದು ಸಮಿತಿ ಮಾಡಿ ಅಗತ್ಯ ಕ್ರಮ ಕೈಗೊಳ್ಳಲು ಹೇಳಿದರು ಎಂದರು.

ಈ ಸಮಿತಿ ತಂತ್ರಾಂಶದಲ್ಲಿ ಆಗಬೇಕಾದ ಕಾರ್ಯಕ್ರಮಗಳ ಪಟ್ಟಿ ಮಾಡಿ ಅಂದಿನ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಿಗೆ ಕೊಟ್ಟರು. ಸಂಸ್ಕೃತಿ ಇಲಾಖೆಯಲ್ಲಿ ದಯಾನಂದ ಇರುವತನಕ ಒಳ್ಳೆಯ ಕಾರ್ಯಕ್ರಮಗಳು ಮುಂದುರೆದವು. ಅವರು ಬೇರೆ ಇಲಾಖೆಗೆ ಹೋದ ನಂತರ ಯಾರೂ ಆ ಕಡೆ ಗಮನಹರಿಸಲಿಲ್ಲ ಎಂದು ವಿಷಾದಿಸಿದರು.

ಮಾಹಿತಿ ತಂತ್ರಜ್ಞಾನದ ವಿವಿಧ ಅಂಗಗಳಲ್ಲಿ ಕಾಲ ಕಾಲಕ್ಕೆ ಆಗುತ್ತಿರುವ ಬದಲಾವಣೆಗೆ ಸರಿ ಹೊಂದುವಂತೆ ಆಗಾಗ ಸರ್ಕಾರಕ್ಕೆ ಸಲಹೆ ಕೊಡಲು ಒಂದು ತಜ್ಞರ ಸಮಿತಿ ಅಗತ್ಯವಿದೆ. ಇದರಲ್ಲಿ ಸಾಫ್ಟ್‌ವೇರ್ ತಂತ್ರಜ್ಞರು, ಭಾಷಾ ತಜ್ಞರು ಮತ್ತು ಕೆಲವು ಅಧಿಕಾರಿಗಳು ಇರಬೇಕು ಎಂದರು.

ಕರ್ನಾಟಕ ಸರ್ಕಾರ ಮಿನಿಕೋಡ್ ಕನ್ಸಾರ್ಷಿಯಂ ಮತ್ತು ಆ ಬಗೆಯ ಸ್ಟ್ಯಾಡರ್ ಡೈಜೇಷನ್ ಬಾಡಿಗಳಲ್ಲಿ ಸದಸ್ಯತ್ವ ಪಡೆದು ಅಧಿಕೃತ ಪ್ರತಿನಿಧಿಯನ್ನು ನೇಮಿಸಬೇಕು ತೆಲಗು ಮತ್ತು ತಮಿಳು ಭಾಷೆಗಳು ಈಗ ಸದಸ್ಯತ್ವ ಪಡೆದುಕೊಂಡು ಅಧಿಕೃತ ಪ್ರತಿನಿಧಿಗಳನ್ನು ನೇಮಿಸಿವೆ ಎಂದರು.

ಕರ್ನಾಟಕದ ವಿದ್ಯಾರ್ಥಿಗಳಿಗೆ ಯಾವುದೇ ಇಂಗ್ಲೀಷ್ ಪಠ್ಯವಾಗಲಿ ಆಯಾ ವರ್ಷವೇ ಕನ್ನಡಕ್ಕೆ ಅನುವಾದ ಮಾಡಬೇಕು. ಇದಕ್ಕೆ ಸರ್ಕಾರದ ಅಪ್ಪಣೆಗೆ ಕಾಯುತ್ತಾ ಕೂರಬಾರದು. ಕನ್ನಡ ವಿಶ್ವವಿದ್ಯಾಲಯ ಈ ಕಾರ್ಯಕ್ಕೆ ಮುಂದೆ ಬಂದು ಅವರೇ ಆ ಕೃತಿಗಳನ್ನು ಪ್ರಕಟಿಸಬೇಕು. ಇದರಿಂದ ಶಿಕ್ಷಕ ಮತ್ತು ವಿದ್ಯಾರ್ಥಿ ಇಬ್ಬರಿಗೂ ಪ್ರಯೋಜನವಾಗುವುದರಲ್ಲಿ ಸಂಶವಿಲ್ಲ. ಏನಿಲ್ಲದಿದ್ದರೂ ವಿದ್ಯಾರ್ಥಿಗಳು ಇಂತಹ ಪ್ರಕಟಣೆಗಳನ್ನು ಗೈಡ್‌ಗಳಂತೆ ಓದಿದರೂ ಪ್ರಯೋಜನಕಾರಿಯಾಗಿದೆ ಎಂದರು.

ಡಬ್ಬಿಂಗ್ ನಿಷೇಧ ಸಮರ್ಥನೆ

ಕನ್ನಡಕ್ಕೆ ಬೇರೆ ಭಾಷೆಯ ಚಲನಚಿತ್ರಗಳನ್ನು ಡಬ್ ಮಾಡಬಾರದೆಂಬ ಕನ್ನಡ ಚಲನಚಿತ್ರ ಮಂಡಳಿ ತೆಗೆದುಕೊಂಡಿದ್ದು ಯೋಗ್ಯವಾದ ನಿರ್ಣಯ ಎಂದು ಡಬ್ಬಿಂಗ್ ವಿಷಯವನ್ನು ಡಾ. ಚಂದ್ರಶೇಖರ ಕಂಬಾರ ಸಮರ್ಥಿಸಿಕೊಂಡರು.

ಆದರೆ ಕನ್ನಡ ಟಿವಿಗಳಲ್ಲಿ ವಿದೇಶಗಳ ಇತಿಹಾಸ, ಡಿಸ್ಕವರಿ, ಅನಿಮಲ್ ಪ್ಲಾಂಟ್‌ನಂತಹ ಚಾನೆಲ್‌ಗಳಲ್ಲಿ ಬರುವ ವಿಷಯಗಳು ಮಕ್ಕಳಿಗೆ ಅನುಕೂಲವಾಗಿವೆ. ಹಾಗಾಗಿ ಇವುಗಳನ್ನು ಕನ್ನಡಕ್ಕೆ ಡಬ್ ಮಾಡಬಾರದು ಎಂಬುದು ತಪ್ಪು. ಇವುಗಳನ್ನು ಕನ್ನಡದಲ್ಲೇ ನೋಡಿದರೆ ಮಕ್ಕಳಿಗೆ ಒಳ್ಳೆಯದು ಎಂದರು.

ಜಾಲತಾಣ

ಕನ್ನಡದ ಜಾಲತಾಣದಲ್ಲಿ 16 ಸಾವಿರಕ್ಕೂ ಹೆಚ್ಚು ಜನ ಕನ್ನಡ ಕಲಿಯುತ್ತಿದ್ದಾರೆ. ಈ ಪ್ರಯತ್ನವನ್ನು ಮುಂದುವರೆಸಿ ವರ್ಚುಯುಲ್ ತರಗತಿಗಳನ್ನು ನಡೆಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಸಂಸ್ಕೃತಿ ಬೇರೆ ರಾಜ್ಯಗಳಿಗಿಂತ ಭಿನ್ನವಾಗಿ ವಿಶಿಷ್ಟವಾಗಿದೆ. ಆಧುನಿಕ ಕನ್ನಡ ಸಾಹಿತ್ಯ ಜಗತ್ತಿನ ಎಲ್ಲ ಚಿಂತನಾ ಕ್ರಮಗಳಿಗೆ ತನ್ನನ್ನು ಮುಕ್ತವಾಗಿ ತೆಗೆದುಕೊಂಡಷ್ಟು ಭಾರತದ ಇತರ ಭಾಷೆಗಳು ತೆಗೆದುಕೊಂಡಿಲ್ಲ. ಇಷ್ಟಿದ್ದರೂ ನಮ್ಮ ಹಿರಿಮೆಯನ್ನು ಹೊರಗಿನವರಿಗೆ ಸಮರ್ಥವಾಗಿ ವಿವರಿಸುವಲ್ಲಿ ವಿಫಲವಾಗಿದ್ದೇವೆ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳನ್ನು ಬೇರೆಯವರಿಗೆ ತಿಳಿಸುವ ಅಗತ್ಯವಿದೆ.

ತಮಿಳು, ಬೆಂಗಾಲಿಯವರು ಈ ವಿಚಾರದಲ್ಲಿ ನಮಗಿಂತ ಮುಂದಿದ್ದಾರೆ. ಈ ಕೆಲಸ ಯಶಸ್ವಿಯಾಗಿ ನಡೆಯಬೇಕಾದರೆ ಹೊರ ದೇಶಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪಿಸಬೇಕು. ಆದರೆ ದುರ್ದೈವದ ಸಂಗತಿ ಎಂದರೆ ಹೊರನಾಡು ಮತ್ತು ಹೊರದೇಶಗಳಲ್ಲಿರುವ ಪೀಠಗಳನ್ನು ಸರ್ಕಾರ ಮುಚ್ಚುತ್ತಿವೆ. ಬನಾರಸ್, ಅಹಮದಾಬಾದ್, ದೆಹಲಿ ವಿಶ್ವವಿದ್ಯಾಲಯಗಳಲ್ಲಿದ್ದ ಕನ್ನಡ ಅಧ್ಯಯನ ಪೀಠಗಳು ಇತ್ತೀಚೆಗೆ ಮುಚ್ಚಿ ಹೋಗಿವೆ ಎಂದು ನೋವಿನಿಂದ ಹೇಳಿದರು.

Leave a Comment