ಬಲಿಗಾಗಿ ಬಾಯಿ ತೆರೆದಿವೆ ರಸ್ತೆ ಗುಂಡಿಗಳು..!

 

ಮಹ್ಮದ್, ದಳಸನೂರು

ಬೆಂಗಳೂರು, ಜೂ.೧೩- ನಗರದೆಲ್ಲೆಡೆ ದಿನನಿತ್ಯ ಸುರಿಯುವ ಮಳೆಯಿಂದಾಗಿ ದಿನೇ ದಿನೇ ರಸ್ತೆ ಗುಂಡಿಗಳು ಹೆಚ್ಚಾಗಿದ್ದು, ವಾಹನ ಸವಾರರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಎಲ್ಲಿ ಹೆಚ್ಚು….?

‘ಆರ್‌ಟಿನಗರದ, ದೂರದರ್ಶನ ರಸ್ತೆ, ಕಬ್ಬನ್‌ಪೇಟೆ ಮುಖ್ಯರಸ್ತೆ, ಗುರಪ್ಪನಪಾಳ್ಯ, ಹೂಡಿ, ಶ್ರೀರಾಂಪುರ, ಕೆಆರ್ ಮಾರುಕಟ್ಟೆ ಮಾರ್ಗ, ಶಿವಾಜಿನಗರ ರಸ್ತೆ, ಕ್ವೀನ್ಸ್ ರಸ್ತೆ ಸೇರಿದಂತೆ ಹತ್ತಾರು ಕಡೆ ರಸ್ತೆ ಗುಂಡಿಗಳ ಜೊತೆಗೆ ಮಳೆ ನೀರು ನಿಲ್ಲುವ ಸಮಸ್ಯೆ ದಟ್ಟವಾಗಿದೆ.
ನಗರದ ರಸ್ತೆಗುಂಡಿಗಳನ್ನು ವಾರದೊಳಗೆ ಮುಚ್ಚಲಾಗುವುದು. ನಗರದಲ್ಲಿ ೬ ಸಾವಿರ ರಸ್ತೆ ಗುಂಡಿಗಳಿವೆ. ಅವುಗಳ ಪೈಕಿ ೧ ಚದರ ಮೀಟರ್ ಅಳತೆಯ ೧,೨೦೦ ಗುಂಡಿಗಳಿವೆ. ಪಾಲಿಕೆಯಲ್ಲಿ ಗುಂಡಿ ಮುಚ್ಚಿಸಲು ಪೈಥಾನ್ ಎಂಬ ಎರಡು ಯಂತ್ರಗಳಿವೆ. ಅವುಗಳು ಈಗಾಗಲೇ ಕಾರ್ಯಾರಂಭ ಮಾಡಿವೆ’

-ಜಿ.ಪರಮೇಶ್ವರ್,ಉಪ ಮುಖ್ಯಮಂತ್ರಿ, ಬೆಂಗಳೂರು ಅಭಿವೃದ್ಧಿ ಸಚಿವ

ದಿನ ಕಳೆದಂತೆ ರಸ್ತೆ ಗುಂಡಿಗಳು ಮೃತ್ಯು ಸ್ವರೂಪಿಯಾಗಿ ಪರಿಣಮಿಸಿವೆ. ಅಲ್ಲದೆ, ಗುಂಡಿಗೆ ಬಿದ್ದು, ಗುಂಡಿ ತಪ್ಪಿಸಲು ಹೋಗಿ ಗಂಭೀರವಾಗಿ ಗಾಯಗೊಳ್ಳುವುದು ಇರಲಿ, ಕೆಲವರ ಬಲಿ ಪಡೆಯಲು ಈ ಗುಂಡಿಗಳು ಬಾಯಿ ತೆರೆದಂತೆ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ದಿನಾ ಮಳೆ ಸುರಿದರೂ ರಸ್ತೆ ಗುಂಡಿ ಸಮಸ್ಯೆ ವರ್ಷವಿಡೀ ಜನರನ್ನು ಬಿಡದೆ ಕಾಡುತ್ತದೆ. ಇತ್ತೀಚೆಗಂತೂ ರಸ್ತೆ ಗುಂಡಿಯಿಂದಾಗಿ ಬಿದ್ದು ಗಾಯಗೊಳ್ಳುತ್ತೀರುವ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟಾದರೂ ಬಿಬಿಎಂಪಿ ಹಾಗೂ ಬಿಡಿಎ ರಸ್ತೆ ದುರಸ್ತಿಗೆ ಆದ್ಯತೆ ನೀಡದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ರಸ್ತೆಯಲ್ಲಿ ಸಾಮಾನ್ಯ ವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದರೂ ದಿಢೀರ್ ಗುಂಡಿ ಎದುರಾದಾಗ ಚಾಲಕರು ವಿಚಲಿತಗೊಳ್ಳುತ್ತಾರೆ. ಗುಂಡಿಯೊಳಗೆ ವಾಹನ ಚಕ್ರ ಹರಿಯದಂತೆ ನಿಯಂತ್ರಿಸಲು ಹೋದಾಗ ಅಪಘಾತ ಸಂಭವಿಸುತ್ತಿದೆ.

ವೇಗದಲ್ಲಿದ್ದರೆ ವಾಹನ ಗುಂಡಿಗೆ ಇಳಿದು ಆಗಲೂ ಅಪಘಾತ ಸಂಭವಿಸುತ್ತದೆ. ಚಾಲಕರು ವೇಗ ನಿಯಂತ್ರಿಸುವಲ್ಲಿ ಯಶಸ್ವಿಯಾದರೂ ವಾಹನ ಗುಂಡಿಗೆ ಇಳಿದಾಗ ಬೆನ್ನು ಹುರಿ, ಸೊಂಟ, ಕುತ್ತಿಗೆಗೆ ಹಾನಿಯಾಗುತ್ತದೆ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು ಇದಕ್ಕೆ ಪರಿಹಾರ ದೊರೆಕಿಸಲು ಮುಂದಾಗುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.

ಕಳಪೆ ಕೆಲಸ?: ರಸ್ತೆಯಲ್ಲಿ ಗುಂಡಿಗಳು ಉಂಟಾಗಿ ಅಪಘಾತಗಳು ಹೆಚ್ಚಾದಾಗ ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಬಳಿಕ ತಕ್ಷಣಕ್ಕೆ ಎಂಬಂತೆ ಅವೈಜ್ಞಾನಿಕವಾಗಿ ಗುಂಡಿ ಬಿದ್ದ ಜಾಗಕ್ಕೆ ಒಂದಿಷ್ಟು ಡಾಂಬರು ಸುರಿದು ಅದರ ಮೇಲೆ ಜಲ್ಲಿಪುಡಿ ಹರಡಲಾಗುತ್ತದೆ. ಇದರಿಂದಾಗಿ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಸಷ್ಟಿಯಾಗುತ್ತದೆ.

ಮಳೆ ಸುರಿದರೆ ಕೆಲವೇ ಗಂಟೆಗಳಲ್ಲಿ ಡಾಂಬರು ಕಿತ್ತುಬಂದು ದೊಡ್ಡ ಹೊಂಡ ಸಷ್ಟಿಯಾಗುತ್ತದೆ. ಗುಂಡಿ ದುರಸ್ತಿಗೆ ನಿರ್ದಿಷ್ಟ ಮಾನದಂಡಗಳಿದ್ದು, ಅವುಗಳನ್ನು ಪಾಲಿಸದ ಕಾರಣ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ.

ನಗರದಲ್ಲಿ ೧೩,೦೦೦ ಕಿ.ಮೀ.ಉದ್ದದ ರಸ್ತೆಗಳಿವೆ. ಇದರಲ್ಲಿ ೧,೫೦೦ ಕಿ.ಮೀ. ಉದ್ದದ ಆರ್ಟಿರಿಯರ್, ಸಬ್ ಆರ್ಟಿರಿಯಲ್ ರಸ್ತೆಯಿದೆ ಎಂದು ಹೇಳಲಾಗುತ್ತದೆ. ಆದರೆ, ದಿನನಿತ್ಯ ಸುರಿಯುವ ಮಳೆಯಿಂದಾಗಿ ರಸ್ತೆಗುಂಡಿಗಳ ಸಮಸ್ಯೆ ಹೆಚ್ಚಾಗುತ್ತಿದೆ, ಇದನ್ನು ಶಾಶ್ವತ ಪರಿಹಾರ ನೀಡಬೇಕೆನ್ನುವುದೇ ಸಾರ್ವಜನಿಕರ ಕೋರಿಕೆ.

 

 

 

Leave a Comment