ಬರ ನೀಗಿಸಿದ ಗೆಲುವು

ಚಿಕ್ಕನೆಟಕುಂಟೆ ಜಿ.ರಮೇಶ್

ಕನ್ನಡ ಚಿತ್ರರಂಗದಲ್ಲಿ ವಾರಕ್ಕೆ ಕನಿಷ್ಠ ಏಳೆಂಟು ಸಿನಿಮಾಗಳು ತೆರೆಗೆ ಬರುತ್ತಿವೆ. ಚಿತ್ರಮಂದಿರಕ್ಕೆ ಚಿತ್ರಗಳು ಬಂದಷ್ಟೇ ವೇಗದಲ್ಲಿ ಖಾಲಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಗೆಲುವು ಮರೀಚಿಕೆಯಾಗಿತ್ತು.ಆಗೊಮ್ಮೆ ಹೀಗೊಮ್ಮೆ ಗೆಲುವು ಸಿಕ್ಕರೂ ಮತ್ತೊಂದು ಗೆಲುವಿಗಾಗಿ ಸಾಕಷ್ಟು ತಿಂಗಳೇ ಕಾಯಬೇಕಾಯಿತು. ’ಟಗರು’, ’ರಾಂಬೋ-೨’ ಚಿತ್ರದ ಬಳಿಕ ’ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ’ಗೆ ಇಂತಹದೊಂದು ಗೆಲುವು ಸಿಕ್ಕಿದ್ದು ಗೆಲುವಿನ ಬರ ನೀಗಿಸಿದೆ. ಕನ್ನಡ ಶಾಲೆಗಳ ಇಂದಿನ ಅವ್ಯಸ್ಥೆಯ ಮೇಲೆ ಬೆಳಕು ಚೆಲ್ಲುವ ಕಥೆಯನ್ನಾಧರಿಸಿ ನಿರ್ದೇಶಕ ರಿಶಬ್ ಶೆಟ್ಟಿ ’ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ’ ಚಿತ್ರವನ್ನು ತೆರೆಗೆ ತಂದಿದ್ದಾರೆ.

shpsk_139

ಬಹಳ ದಿನಗಳ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರ ಐವತ್ತು ದಿನ ಪೂರೈಸಿ ಮುನ್ನೆಡೆದಿದೆ. ಚಿತ್ರದ ಗೆಲುವು ಕನ್ನಡ ಶಾಲೆಗಳ ಇಂದಿನ ಸ್ಥಿತಿಗತಿಗೆ ಸಿಕ್ಕ ಗೆಲುವು ಎಂದು ಚಿತ್ರತಂಡ ಹೇಳಿಕೊಂಡಿದೆ.

ಚಿತ್ರ ಸದ್ದಿಲ್ಲದೆ ಐವತ್ತು ದಿನ ಪೂರ್ಣಗೊಳಿಸಿ ಎಪ್ಪತ್ತೈದನೇ ದಿನದತ್ತ ೭೦ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮುನ್ನುಗ್ಗುತ್ತಿದೆ. ಚಿತ್ರ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಚಿತ್ರೀಕರಣ ನಡೆಸಿದ್ದ ಕೇರಳದ ಕಾಸರಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ಚಿತ್ರತಂಡ ದತ್ತು ಪಡೆದಿದೆ.

ಚಿತ್ರ ಅರ್ಧಶತಕ ಬಾರಿಸಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಹೇಳಿಕೊಳ್ಳಲು ಚಿತ್ರತಂಡ ಪತ್ರಿಕಾ ಗೋಷ್ಠಿ ಕರೆದಿತ್ತು. ಅಲ್ಲಿ ಮೊದಲು ಮಾತು ಆರಂಭಿಸಿದ ನಿರ್ದೇಶಕ ರಿಶಬ್ ಶೆಟ್ಟಿ, ಚಿತ್ರ ಆರಂಭವಾಗುವ ಸಮಯದಲ್ಲಿ ಇಡೀ ತಂಡ ಸಂಭಾವನೆ ಇಲ್ಲದೆ ಚಿತ್ರಕ್ಕಾಗಿ ಕೆಲಸ ಮಾಡಿದೆ. ಎಲ್ಲರ ಶ್ರಮಕ್ಕೆ ಪ್ರತಿಫಲ ಎನ್ನುವಂತೆ ಚಿತ್ರ ಯಶಸ್ವಿಯಾಗಿದೆ ಇದು ಸಂತಸದ ಸಂಗತಿ. ಚಿತ್ರ ಪ್ರದರ್ಶನದ ಸಂದರ್ಭದಲ್ಲಿ ಯಾವುದೇ ಚಿತ್ರಮಂದಿರಕ್ಕೆ ಹೋದರೂ ಚಿತ್ರಮಂದಿರದಲ್ಲಿ ಸಿಕ್ಕ ಪ್ರತಿಕ್ರಿಯೆ ಮತ್ತು ’ಟಗರು’ ಮತ್ತು ’ರ್‍ಯಾಂಬೋ-೨’ಚಿತ್ರದ ಬಳಿಕ ಇಂತಹ ಗೆಲುವು ಸಿಕ್ಕಿದೆ ಎಂದು ಪ್ರಶಂಸೆ ವ್ಕಕ್ತಪಡಿಸಿದಾಗ ಸಿಕ್ಕ ಖುಷಿ ಅಷ್ಟಿಷ್ಟಲ್ಲ. ಗಡಿ ನಾಡಿನ ಭಾಗಗಳಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮೆರಿಕಾದಲ್ಲಿ ಚಿತ್ರದ ಪ್ರದರ್ಶನದಲ್ಲಿ ಹಿರಿಯ ನಟ ಅನಂತ್ ನಾಗ್ ಭಾಗಿಯಾದ ಹಿನ್ನೆಲೆಯಲ್ಲಿ ಇಂದಿನ ಗೋಷ್ಠಿಗೆ ಹಾಜರಾಗಿಲ್ಲ. ನೂರನೇ ದಿನದ ಕಾರ್ಯಕ್ರಮಕ್ಕೆ ಬರುತ್ತಾರೆ.

shpsk_125

ಸರ್ಕಾರಿ ಶಾಲೆಯ ಗೆಲುವು ಇಂತಹ ಅನೇಕ ಪ್ರಯತ್ನಗಳಿಗೆ ಪ್ರೋತ್ಸಾಹ ಮತ್ತು ಮನ್ನಣೆ ನೀಡಿದೆ. ಚಿತ್ರಕ್ಕೆ ಪ್ರತಿಯೊಂದು ಹಂತದಲ್ಲಿ ಸಹಕರಿಸಿದ ಎಲ್ಲರನ್ನೂ ಈ ಸಂಧರ್ಭದಲ್ಲಿ ನೆನೆಯುವುದು ನಮ್ಮ ಕರ್ತವ್ಯವೂ ಕೂಡ ಎಂದು ಹೇಳಿಕೊಂಡರು.

ಹಿರಿಯ ಸಂಗೀತ ನಿರ್ದೇಶಕ ಕೆ. ಕಲ್ಯಾಣ್,  ಒಳ್ಳೆಯ ಕಥೆ ಹುಟ್ಟಿ, ಸಿನಿಮಾ ಹುಟ್ಟಿ ಪ್ರೇಕ್ಷಕರ ಮನಸ್ಸಿನಲ್ಲಿ ಜಟ್ಟಿಯಾಗಿದ್ದಾರೆ ರಿಶಬ್ ಶೆಟ್ಟಿ ಮಾಡಿದ್ದಾರೆ.ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು.

ಸಂಗೀತ ನಿರ್ದೇಶಕ ವಾಸುಕಿ ವೈಭವ್,ಹಿನ್ನೆಲೆ ಸಂಗೀತ ನೀಡಿರುವ ಅಜನೀಶ್ ಲೋಕನಾಥ್ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸಹ ನಿರ್ಮಾಪಕರಾದ ರವಿ ರೈ, ಶಿವು ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ಪ್ರಮೋದ್ ಶೆಟ್ಟಿ, ಪ್ರಗತಿ ಶೆಟ್ಟಿ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಸಂತಸದಲ್ಲಿ ಭಾಗಿಯಾದರು.

Leave a Comment