ಬರ ನಿರ್ವಹಣೆ ಚರ್ಚೆ: ಪರಂ-ಜೆಸಿಎಂ ನಡುವೆ ಜಟಾಪಟಿ

ತುಮಕೂರು, ಜೂ. 15- ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಜಿ.ಪಂ. ಕೆಡಿಪಿ ಸಭೆಯಲ್ಲಿ ನಡೆದ ಚರ್ಚೆಯು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಬಿಜೆಪಿ ಶಾಸಕ ಜೆ.ಸಿ. ಮಾಧುಸ್ವಾಮಿ ಅವರ ಮಾತಿನ ಜಟಾಪಟಿಗೆ ಕಾರಣವಾಯಿತು.

ರಾಜ್ಯ ಮತ್ತು ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಾಂಡವವಾಡುತ್ತಿದೆ. ಆದರೂ ಸಮ್ಮಿಶ್ರ ಸರ್ಕಾರ ಖುರ್ಚಿಗೆ ಅಂಟಿಕೊಂಡಿದೆ. ಸರ್ಕಾರದ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿಗೆ ಜಿಲ್ಲೆ ಸರ್ವನಾಶವಾಗಲಿದೆ ಎಂದು ಜಿ.ಪಂ. ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಜೆ.ಸಿ. ಮಾಧುಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದಾಗ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ನೀವು ಹಾಗೆ ಮಾತನಾಡಬಾರದು, ಜವಾಬ್ದಾರಿಯುತ ಸ್ಥಾನದಲ್ಲಿ ನೀವೂ ಕೂಡ ಇದ್ದೀರಿ ಎಂದು ಹೇಳಿದ್ದು ಇವರಿಬ್ಬರ ಮಾತಿನ ಜಟಾಪಟಿಗೆ ನಾಂದಿಯಾಯಿತು.

ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುಲು ನೀರು, ಮೇವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸಹ ಸಮರ್ಪಕವಾಗಿ ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಜೆ.ಸಿ. ಮಾಧುಸ್ವಾಮಿ ಅವರು ಅಧಿಕಾರಿಗಳ ವೈಫಲ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇರ ಹೊಣೆಗಾರರನ್ನಾಗಿಸಿದರು.

ತ್ರೈಮಾಸಿಕ ಕೆಡಿಪಿ ಸಭೆಯ ಮಾಹಿತಿಯನ್ನು ಶಾಸಕರುಗಳಿಗೆ ಮುಂಚಿತವಾಗಿ ಅಧಿಕಾರಿಗಳು ತಿಳಿಸಿಲ್ಲ. ಸಭೆಯ ನೋಟಿಸ್‌ ಹಾಗೂ ಇಲಾಖೆಗಳ ಪ್ರಗತಿ ವರದಿಯನ್ನು ಮುಂಚಿತವಾಗಿ ತಲುಪಿಸಿಲ್ಲ. ಸಭೆಗೆ ಬಂದು ನಾವು ಏನು ಚರ್ಚೆ ಮಾಡಬೇಕು, ಅಧಿಕಾರಿಗಳು ಹೇಳಿದ್ದನ್ನು ಕೇಳಿಸಿಕೊಂಡು ಹೋಗಬೇಕೆ ಎಂದು ಅವರು ಅಸಮಾಧಾನ ಹೊರ ಹಾಕಿದರು.

ಕಳೆದ ತಿಂಗಳು ನಡೆದ ಬರ ಪರಿಹಾರ ಸಭೆಗೆ ಆಹ್ವಾನ ನೀಡದೆ ಇರುವುದಕ್ಕೆ ಕೂಡ ಮಾಧುಸ್ವಾಮಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಶಾಸಕರಾದ ಎ.ಎಸ್. ಜಯರಾಮ್, ಬಿ.ಸಿ.ನಾಗೇಶ್ ಕೂಡ ಸಹಮತ ವ್ಯಕ್ತಪಡಿಸಿದರು. ಚುನಾವಣಾ ನೀತಿ ಸಂಹಿತೆ ಇದ್ದುದರಿಂದ ಸಭೆಗೆ ಕರೆಯಲಿಲ್ಲ ಎಂದು ಅಧಿಕಾರಿಯೋರ್ವರು ನೀಡಿದ ಸಮಜಾಯಿಷಿಯನ್ನೂ ಒಪ್ಪದ ಮಾಧುಸ್ವಾಮಿ ನಿರಂತರ ವಾಗ್ದಾಳಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿ ಜಿಲ್ಲೆಯನ್ನು ಸರ್ವನಾಶ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಕಡೆಗೆ ತಿರುಗಿ ಮಾಧುಸ್ವಾಮಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಪರಮೇಶ್ವರ್, ‘ಮಾಧುಸ್ವಾಮಿ, ಯು ಡೋಂಟ್ ಟಾಕ್ ಲೈಕ್ ದಟ್, ನೀವು ಹಾಗೆ ಮಾತನಾಡಬಾರದು’ ಎಂದು ಏರು ಧ್ವನಿಯಲ್ಲೇ ಮನವಿ ಮಾಡಿದರು.

ಉಪಮುಖ್ಯಮಂತ್ರಿಗಳ ಪರ ಬ್ಯಾಟ್ ಬೀಸಲು ಮುಂದಾಗ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರನ್ನು ಸಹ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.

ಆಗ ಮಧ್ಯಪ್ರವೇಶಿಸಿದ ಡಾ. ಜಿ. ಪರಮೇಶ್ವರ್, ‘ನೀವು ನನ್ನನ್ನು ಬೈಯಿರಿ. ಸರ್ಕಾರವನ್ನು ಬೈಯಿರಿ’ ಎಂದು ಬಿಜೆಪಿ ಶಾಸಕರ ಗಮನವನ್ನು ತಮ್ಮತ್ತ ಸೆಳೆದು ರಂಗನಾಥ್ ರವರನ್ನು ಟೀಕಾ ಪ್ರಹಾರದಿಂದ ಬಚಾವು ಮಾಡಿದರು.

ಇದಕ್ಕೂ ಮುನ್ನ ಅಧಿಕಾರಿಗಳು ಬರ‌ ನಿರ್ವಹಣೆಯನ್ನು ಸರಿಯಾಗಿ ಮಾಡಿಲ್ಲ. ಬರ ಕಾಮಗಾರಿಯ ಸಂಪೂರ್ಣ ತನಿಖೆಯಾಗಬೇಕು ಎಂದು ಬಿಜೆಪಿ ಶಾಸಕರುಗಳಾದ ಜೆ.ಸಿ ಮಾಧುಸ್ವಾಮಿ, ಬಿ.ಸಿ ನಾಗೇಶ್ ಹಾಗೂ ಮಸಾಲೆ ಜಯರಾಮ್ ಒತ್ತಾಯಿಸಿದರು.

ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಲತಾರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್, ಜಿ.ಪಂ. ಸಿಇಓ ಶುಭಕಲ್ಯಾಣ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Comment