ಬರಪೀಡಿತ 86 ತಾಲ್ಲೂಕುಗಳು ಸರ್ಕಾರ ಘೋಷಣೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಸೆ. ೧೧- ಮಳೆಯಿಲ್ಲದ ರಾಜ್ಯದ 86 ತಾಲ್ಲೂಕುಗಳನ್ನು ಸರ್ಕಾರ ಬರ ಪೀಡಿತ ತಾಲ್ಲೂಕುಗಳು ಎಂದು ಘೋಷಿಸಿದೆ.
ಕೇಂದ್ರ ಸರ್ಕಾರದ ಮಾಹಿತಿಗಳ ಪ್ರಕಾರ ರಾಜ್ಯದ 86 ತಾಲ್ಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ಈ ಪೈಕಿ 86 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ರಾಜ್ಯದ ಬರ ಪರಿಸ್ಥಿತಿ ಅವಲೋಕಿಸಲು ಮತ್ತು ಬರಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳನ್ನು ಕುರಿತು ವಿಧಾನಸೌಧದಲ್ಲಿ ಇಂದು ನಡೆದ ಸಂಪುಟ ಉಪಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 16 ಜಿಲ್ಲೆಗಳ 86 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದರು.
ಈ ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದ ತಲಾ 50 ಲಕ್ಷ ರೂ.ಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಇದರ ಜತೆಗೆ ಜಾನುವಾರುಗಳ ಮೇವಿಗಾಗಿ ಪಶುಸಂಗೋಪನಾ ಇಲಾಖೆಗೆ 18 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.
ಬರಪೀಡಿತ ತಾಲ್ಲೂಕುಗಳಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಜಂಟಿ ಸಮೀಕ್ಷೆ ನಡೆಸಲಿದ್ದು, ಈ ಸಮೀಕ್ಷೆಯಲ್ಲಿ ಶೇ. 50ಕ್ಕೂ ಹೆಚ್ಚು ಬೆಳೆ ಹಾನಿಯಾಗಿದ್ದರೆ ಅಂತಹ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಲಾಗುವುದು ಎಂದು ಅವರು ಹೇಳಿದರು.
ಮಳೆ ಕೊರತೆಯಿಂದ ಬಹುತೇಕ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಕಾಣಿಸಿಕೊಂಡಿದೆ. ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕಾರ್ಯಕ್ಕೆ ಹಣದ ಕೊರತೆಯಿಲ್ಲ ಎಂದು ಅವರು ಹೇಳಿದರು.
 ಸರ್ಕಾರ ಘೋಷಿಸಿದ ಬರಪೀಡಿತ ತಾಲ್ಲೂಕುಗಳ ವಿವರ
ಹೊಸಕೋಟೆ, ಚನ್ನಪಟ್ಟಣ, ಕನಕಪುರ, ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಸಿರಾ, ತಿಪಟೂರು, ತುಮಕೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮೂರು, ಹರಪನಹಳ್ಳಿ, ಹರಿಹರ, ಕೊಳ್ಳೇಗಾಲ, ಯಳಂದೂರು, ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ, ಬಳ್ಳಾರಿ, ಹಡಗಲಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಗಿ, ಸಂಡೂರು, ಸಿರಗುಪ್ಪ, ಗಂಗಾವತಿ, ಕೊಪ್ಪಳ, ಕುಷ್ಟಗಿ, ಯಲ್ಬುರ್ಗಾ, ದೇವದುರ್ಗ, ಲಿಂಗಸೂಗೂರು, ಮಾನ್ವಿ, ರಾಯಚೂರು, ಸಿಂದನೂರು, ಅಜ್ಮಲಪುರ, ಚಿಂಚೋಳಿ, ಚಿತ್ತಾಪುರ, ಕಲ್ಬುರ್ಗಿ, ಜೇವರ್ಗಿ, ಸೇಡಂ, ಶಹಪೂರ, ಷೌರಾಪುರ, ಯಾದಗಿರಿ, ಬೀದರ್, ಹುಮನಾಬಾದ್, ರಾಮದುರ್ಗ, ಸವದತ್ತಿ, ಬಾದಾಮಿ, ಬಾಗಲಕೋಟೆ, ಹುನಗುಂದ, ಜಮಖಂಡಿ, ಬಸವನಬಾಗೇವಾಡಿ, ಬಿಜಾಪುರ, ಹಿಂಡಿ, ಮದ್ದೇಬಿಹಾಳ್, ಸಿಂದಗಿ, ಗದಗ, ಮುಂಡರಗಿ, ನರಗುಂದ, ರೋಣ, ಸಿರಾಹಟ್ಟಿ, ರಾಣೆಬೆನ್ನೂರು, ಹುಬ್ಬಳ್ಳಿ, ನವಲಗುಂದ, ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ, ಕಡೂರು.

Leave a Comment