ಬರಗೂರು ಬರಹ ಪಠ್ಯಪುಸ್ತಕದಿಂದ ಕೈಬಿಡಲು ಆಗ್ರಹ

ಪುತ್ತೂರು, ಆ.೧೩- ದೇಶದ ಕಾಯುವ ಯೋಧರನ್ನು ಅವಹೇಳನಕಾರಕವಾಗಿ ಬಿಂಬಿಸಿರುವ ’ಯುದ್ಧ ಒಂದು ಉದ್ಯಮ’ ಎಂಬ ಲೇಖನವನ್ನು ಪ್ರಥಮ ಬಿಸಿಎ ಕನ್ನಡ ಪಠ್ಯಪುಸ್ತಕ ಪದಚಿತ್ತಾರದಲ್ಲಿ ಅಳವಡಿಸುವ ಮೂಲಕ ದೇಶದ ಸೈನಿಕರ ಘನತೆಗೆ ಧಕ್ಕೆ ತರಲಾಗಿದ್ದು, ಸೈನಿಕರ ಮೇಲೆ ಕಳಂಕ ಲೇಪಿಸುವ ಈ ಬರಹವನ್ನು ತಕ್ಷಣ ಪಠ್ಯಪುಸ್ತಕದಿಂದ ಹಿಂತೆಗೆಯಬೇಕು ಎಂದು ಪುತ್ತೂರು ಮಾಜಿ ಸೈನಿಕರ ಸಂಘ ಆಗ್ರಹಿಸಿದೆ.
ನಿನ್ನೆ ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಂಘದ ಗೌರವಾಧ್ಯಕ್ಷರಾದ ಲೆಪ್ಟಿನೆಂಟ್ ಕರ್ನಲ್ ಜಿ.ಟಿ.ಭಟ್ ಮಾತನಾಡಿ, ದೇಶದ ಯೋಧರ ಮೇಲಿನ ಗೌರವಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದ ಲೇಖನ ಚ್ಯುತಿ ತಂದಿದೆ. ದೇಶಪ್ರೇಮವನ್ನು ಉದ್ಯಮ ಎನ್ನುವ ಇವರು ಸೈನಿಕರು ಅತ್ಯಾಚಾರ ಮಾಡುತ್ತಾರೆ. ಗುಂಡೇಟು ಬಿದ್ದು ಸ್ಮತಿ ಕಳೆದುಕೊಂಡ ಸೈನಿಕ ಹೆಣಗಳ ಮೇಲೆ ಮಲಗಿದ್ದನ್ನು ಬರಗೂರು ಅಮಾನವೀಯ ಎನ್ನುತ್ತಾರೆ. ಆದರೆ ಗುಂಡೇಟಿಗೆ ಸಿಕ್ಕಿದ ಸೈನಿಕ ಸರಿಯಾದ ಜಾಗ ನೋಡಿ ಬೀಳಲು ಸಾಧ್ಯವೇ ಎಂಬುವುದನ್ನು ಇವರು ಯೋಚಿಸಿ ಬರೆಯಬೇಕಾಗಿತ್ತು. ಇವರ ಲೇಖನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವ ಮೂಲಕ ವಿದ್ಯಾರ್ಥಿಗಳ ಮೇಲೆ ಬೀರುವ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬುವುದನ್ನು ಇವರು ಗಮನಿಸಬೇಕಿತ್ತು. ಇಂತಹ ಲೇಖನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಂಡಿರುವುದು ಘೋರ ಅಪರಾಧವಾಗಿದ್ದು, ಸಾಹಿತಿ ಬರಗೂರು ಸಾಹಿತ್ಯವನ್ನು ಮಾಜಿ ಸೈನಿಕರಾದ ತೀವ್ರವಾಗಿ ಖಂಡಿಸುತ್ತೇವೆ ಎಂದರು.
ದೇಶದ ರಕ್ಷಣೆಗಾಗಿ ಕುಟುಂಬನ್ನು ಬಿಟ್ಟು ರಾತ್ರಿಹಗಲು ಕೆಲಸ ಮಾಡುತ್ತಿರುವ ಸೇನೆಯ ಘನತೆಯನ್ನು ಹಾಳುಮಾಡುವ ರೀತಿಯಲ್ಲಿ ಲೇಖನ ಬರೆದಿರುವುದು ದೇಶದ್ರೋಹದ ಕೆಲಸವಾಗಿದೆ. ಸೈನಿಕರು ನಂಬಿಕೆಗೆ ಅರ್ಹರಲ್ಲ ಎಂಬುವುದನ್ನು ಬಿಂಬಿಸಿರುವ ಬರಗೂರು ಕೂಡಾ ನಂಬಿಕೆಗೆ ಅರ್ಹರಾಗಿ ಕಾಣುತ್ತಿಲ್ಲ ಎಂದವರು ಹೇಳಿದರು.
ಕೇವಲ ಬರಗೂರು ಮಿತ್ರರೊಬ್ಬರು ಹೇಳಿದರು ಎಂಬ ನೆಲೆಯಲ್ಲಿ ದೇಶದ ೧೦ಲಕ್ಷಕ್ಕೂ ಅಧಿಕ ಸೈನಿಕರ ಭಾವನೆಗಳಿಗೆ ನೋವುಂಟು ಮಾಡುವ ಕೃತ್ಯವನ್ನು ಅವರು ಮಾಡಿದ್ದಾರೆ. ಪರರಾಷ್ಟ್ರಗಳ ಸಂಭಾವ್ಯ ಆಕ್ರಮಣವನ್ನು ತಡೆಯಲು ಶಸ್ತ್ರಾಸ್ಯ ಖರೀದಿಮಾಡುವುದು ಹಾಗೂ ಸುಸಜ್ಜಿತ ಸೇನೆ ನಿರ್ಮಾಣ ಮಾಡಿಕೊಳ್ಳುವುದು ಯಾವತ್ತಿಗೂ ಉದ್ಯಮವಲ್ಲ. ಭಾರತೀಯ ಯೋಧರು ಪರಸ್ತ್ರೀಯರನ್ನು ಅಕ್ಕತಂಗಿಯರಂತೆ ಭಾವಿಸುತ್ತಾರೆ. ಇದು ಭಾರತೀಯ ಸೇನೆಗೆ ಇರುವ ವಿಶೇಷವಾದ ಗೌರವವಾಗಿದೆ. ಆದರೆ ಇದೆಲ್ಲವನ್ನೂ ಗಾಳಿಗೆ ತೂರಿದಂತೆ ಬರಗೂರು ತಮ್ಮ ಲೇಖನದಲ್ಲಿ ಸೈನಿಕರ ಮಾನಹರಣ ಮಾಡುವ ಹಾಗೂ ಸೈನಿಕರ ಮೇಲೆ ಅಪನಂಬಿಕೆ ಉಂಟು ಮಾಡುವ ಕೆಲಸ ಮಾಡಿದ್ದಾರೆ. ಸಾಹಿತಿಗಳಿಗೂ ಸಾಮಾಜಿಕ ಜವಾಬ್ದಾರಿ ಇರಬೇಕಿದ್ದು, ಈ ರೀತಿಯ ಋಣಾತ್ಮಕ ಅಂಶಗಳನ್ನು ಸಂಶೋಧಿಸದೆ ಬರಹವಾಗಿ ಬಿಂಬಿಸುವುದು ಎಷ್ಟರ ಮಟ್ಟಗೆ ಸರಿ ಎಂದವರು ಪ್ರಶ್ನಿಸಿದರು. ಪುತ್ತೂರು ಮಾಜಿ ಸೈನಿಕರ ಸಂಘದಲ್ಲಿ ೨೦ರಿಂದ ೩೫ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದವರಿದ್ದಾರೆ. ನಮ್ಮ ಸೇವಾ ಸಂದರ್ಭದಲ್ಲಿ ಬರಗೂರು ವಿವರಿಸಿದಂತೆ ಕಾಣುವ ಯಾವುದೇ ಘಟನೆಗಳು ಕಂಡು ಬಂದಿಲ್ಲ. ಯಾವುದೇ ದಾಖಲೆಗಳಿಲ್ಲದೆ ಬರೆದ ಈ ಬರಹವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಲು ತೀರ್ಮಾನ ಮಾಡಿದವರಿಗೂ ಸಾಮಾಜಿಕ ಜವಾಬ್ದಾರಿ ಇರಬೇಕಿತ್ತು. ಇಂತಹ ಲೇಖನಗಳನ್ನು ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಕನಿಷ್ಟ ಸೇನೆಯ ಬಗೆಗೆ ಮಾಹಿತಿ ಇರುವ ವ್ಯಕ್ತಿಗಳ ಸಂಪರ್ಕಿಸಿ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಬೇಕಾಗಿತ್ತು. ಆದರೆ ಏಕಾಎಕಿಯಾಗಿ ಯೋಧರನ್ನು ಕಳಂಕಿತರನ್ನಾಗಿಸುವ ಲೇಖನವನ್ನು ಇವರು ಬರೆದದ್ದು ಕೂಡಾ ತಪ್ಪು. ಪಠ್ಯದಲ್ಲಿ ಅಳವಡಿಸಿರುವುದು ಅದಕ್ಕಿಂತಲೂ ದೊಡ್ಡ ತಪ್ಪು ಕೆಲಸವಾಗಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಮಾಜಿ ಸೈನಿಕರ ಸಂಘ ಅಧ್ಯಕ್ಷ ತುಳಸೀದಾಸ್ ಪಿಲಿಂಜ, ಮಾಜಿ ಅಧ್ಯಕ್ಷರಾದ ರಮೇಶ್ ಬಾಬು ಹಾಗೂ ಕೋಶಾಧಿಕಾರಿ ಜೊ.ಡಿಸೋಜ ಉಪಸ್ಥಿತರಿದ್ದರು.
‘ಸೇನೆಗೆ ಯುವಕರು ಸಿಗೋದು ಕಷ್ಟ’
ದೇಶವನ್ನು ಕಾಯಲು ಇಂದಿನ ಯುವಕರು ಸೇನೆಗೆ ಬರುವುದೇ ಕಷ್ಟವಾಗಿದೆ. ಮರಣಭಯ, ಸಂಬಳ ಕಡಿಮೆ, ವಿಶ್ರಾಂತಿಯಿಲ್ಲದ ಕಷ್ಟವಾದ ದುಡಿಮೆ ಎಂಬ ಕಾರಣದಿಂದ ಶೇ.೮೦ರಷ್ಟು ಯುವಜನತೆ ಸೇನೆಗೆ ಸೇರಲು ಇಷ್ಟ ಪಡುತ್ತಿಲ್ಲ. ತಂದೆ ತಾಯಂದಿರೂ ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸಲು ಒಪ್ಪುವುದಿಲ್ಲ. ಶೇ ೨೦ ಮಂದಿ ಯುವಜನತೆ ಮಾತ್ರ ಸೇನಾ ಪಡೆ ಸೇರಲು ಮುಂದೆ ಬರುತ್ತಿದ್ದಾರೆ. ಇಂತಹ ಲೇಖನಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿ ಸೈನಿಕರ ಇಮೇಜ್ ಹಾಳು ಮಾಡಿದರೆ ಮುಂದೆ ಸೈನ್ಯಕ್ಕೆ ಸೇರುವ ಯುವಕರೇ ಸಿಗುವುದು ಕಷ್ಟ
-ತುಳಸೀದಾಸ್ ಪಿಲಿಂಜ, ಪುತ್ತೂರು ಸೈನಿಕರ ಸಂಘದ ಅಧ್ಯಕ್ಷರು

Leave a Comment