ಬದ್ದತೆ,ಏಕಾಗ್ರತೆಯೇ ಶಿಕ್ಷಣದ ಯಶಸ್ಸಿನ ಸಾಧನೆ

ದಾವಣಗೆರೆ,ಜ. 6 – ಸಮಾಜದಲ್ಲಿ ಘನತೆವೆತ್ತ ಪ್ರಜೆಯಾಗಿ, ಕರ್ತವ್ಯಗಳನ್ನು ಅತ್ಯುತ್ತಮವಾಗಿ ಮಾಡುವಂತಹ ವ್ಯಕ್ತಿತ್ವ ನಿರ್ಮಾಣ ಮಾಡುವುದೇ ಶಿಕ್ಷಣದ ಉದ್ದೇಶ, ಇದರಿಂದ ಶ್ರೇಷ್ಟ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಅಭಿಪ್ರಾಯಪಟ್ಟರು.
ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಿಕೆ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿ, ವರ್ಷಪೂರ್ತಿ ಕಲಿತದ್ದನ್ನು ಮತ್ತೊಮ್ಮೆ ಗಮನಿಸುವುದೇ ವಾರ್ಷಿಕೋತ್ಸವ, ಬದ್ದತೆ, ಏಕಾಗ್ರತೆಯೇ ಶಿಕ್ಷಣದ ಯಶಸ್ಸಿನ ಸಾಧನೆ ಎಂದರು.
ಮುಖ್ಯ ಅತಿಥಿಗಳಾಗಿ ಜ.ಜ.ಮು.ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಸಂಶೋಧನಾಭಿವೃದ್ದಿಯ ಡಾ.ಆಲೂರು ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳ ದೆಸೆಯೆಂದರೆ ಸಾಗರದ ಅಲೆಗಳಂತೆ ಅಬ್ಬರ, ಇದಕ್ಕೆ ಕಾರಣ ದೇಹದ ಗ್ರಂಥಿಗಳು, ಈ ಸ್ಥಿತಿಯಲ್ಲಿ ಎಲ್ಲೂ ಎಡವಬಾರದು, ಶಿಕ್ಷಣವಂತರು ಉತ್ತಮ ಹುದ್ದೆ ಪಡೆದರಷ್ಟೇ ಸಾಲದು, ಉತ್ತಮವಾಗಿ ಕೆಲಸ ಮಾಡಬೇಕು. ತಲ್ಲೀನತೆ ಮತ್ತು ತನ್ಮಯತೆ ಇದಕ್ಕೆ ಅವಶ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ರುದ್ರಪ್ಪ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ಸಕಾರಾತ್ಮಕ ಯೋಚನೆಗಳೇ ಜೀವನೋತ್ಸಾಹಕ್ಕೆ ಸಾಧನವಾಗಿದ್ದು, ವಿದ್ಯಾರ್ಥಿಗಳು ಸಹ ಸಕಾರಾತ್ಮಕ ಯೋಚನೆಗಳೊಂದಿಗೆ ಯೋಜನಾ ಬದ್ದ ಶೈಕ್ಷಣಿಕ ಜೀವನ ರೂಢಿಸಿಕೊಳ್ಳಬೇಕೆಂದರು.
ಕಾಲೇಜಿನ ಹಳೇಯ ವಿದ್ಯಾರ್ಥಿಗಳಾಗಿದ್ದು ಪ್ರಸ್ತುತ ಉತ್ತಮ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಹೆಚ್.ಹೇಮಂತ್ ಮತ್ತು ಎಸ್.ಲೋಹಿತ್ ಸಹಾ ಮುಖ್ಯ ಅತಿಥಿಗಳಾಗಿ ಮಾತನಾಡಿ ತಮ್ಮ ಶೈಕ್ಷಣಿಕ ಅನುಭವನಗಳನ್ನು ಹಂಚಿಕೊಂಡರು. ವಿದ್ಯಾರ್ಥಿ ವೇದಿಕೆಯ ಪದಾಧಿಕಾರಿಗಳಾದ ಡಿ.ಎನ್.ಮಂಜುನಾಥ್, ಸಂಗೀತ, ಆರ್ ಪಿ, ಪ್ರತಿಬಿಂಬಾ ಡಿ.ಹೆಚ್, ಅನಿಲ್ ಕುಮಾರ್ ಬಿ ಮುಂತಾದವರು ವೇದಿಕೆಯಲ್ಲಿದ್ದರು.

Leave a Comment