ಬದುಕಿನ ವಿಕಸನಕ್ಕಾಗಿ ಶಿಕ್ಷಣ ಪಡೆಯಿರಿ-ಸಾಣೇಹಳ್ಳಿ ಶ್ರೀ

ದಾವಣಗೆರೆ, ಸೆ. 11- ಶಿಕ್ಷಣ ಎನ್ನುವುದು ಕೇವಲ ಉದ್ಯೋಗಕ್ಕಾಗಿ ಎಂಬ ಪರಿಕಲ್ಪನೆ ಇದೆ. ಆದರೆ ಶಿಕ್ಷಣ ಇರುವುದು ಮನೋವಿಕಾಸಕ್ಕಾಗಿ ಅಜ್ಞಾನವನ್ನು ತೊಡೆದು ಮೂಢನಂಬಿಕೆಗಳನ್ನು ಅಳಿಸಿ ಹಾಕುವುದೇ ಶಿಕ್ಷಣವಾಗಿದೆ ಎಂದು ಸಾಣೇಹಳ್ಳಿ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ನಗರದ ಎಂ.ಎಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಹಾಗೂ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಇಂದು ಹಮ್ಮಿಕೊಂಡಿದ್ದ  ಶಿಕ್ಷಕರ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತೀಕರಣದ ಭರದಲ್ಲಿ ಹಲವಾರು ಬದಲಾವಣೆಗಳಿಗೆ ಒಳಗಾಗಿರುವ ಇಂದಿನ ವಿದ್ಯಾರ್ಥಿಗಳು ನೈತಿಕ ಮೌಲ್ಯವನ್ನು ಬಿಡದೆ ಗುರುಗಳನ್ನು ಭಯ-ಭಕ್ತಿಯಿಂದ ಕಾಣಬೇಕು, ಶಿಕ್ಷಕರೂ ಸಹ ಮಕ್ಕಳ ಬೌದ್ಧಿಕ ಮಟ್ಟಕ್ಕಿಂತ ಹೆಚ್ಚು ತಿಳುವಳಿಕೆ ಉಳ್ಳವರಾಗಬೇಕು. ಮಣ್ಣಿಗೆ ಸಂಸ್ಕಾರ ನೀಡಿದಾಗ ಮಡಿಕೆಯಾಗುವಂತೆ ವಿದ್ಯಾರ್ಥಿಗಳಿಗೆ ಗುರುವಿನ ಮೂಲಕ ಸಂಸ್ಕಾರ ದೊರೆತಾಗ ವ್ಯಕ್ತಿಗತ ಸುಧಾರಣೆಯಾಗುತ್ತದೆ ಆ ಮೂಲಕ ದೇಶದ ಪ್ರಗತಿ ಸಾಧ್ಯ ಎಂದು ತಿಳಿಸಿದರು.
ಇಂದಿನ ದಿನಗಳಲ್ಲಿ ಹಣ ಪ್ರಧಾನದಿಂದ ದೇಶ ನಾಶವಾಗುತ್ತಿದೆ. ಗುಣಪ್ರಧಾನದಿಂದ ದೇಶ ಉನ್ನತೀಕರಣವಾಗುತ್ತದೆ. ಹಣ ಸಂಪತ್ತಿನ ಹಿಂದೆ ಬಿದ್ದರೆ ಸುಖ,ಶಾಂತಿ, ನೆಮ್ಮದಿ ಸಿಗುವುದಿಲ್ಲ, ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಜನರು ವೈಭವೀಕರಣದ ಬಗ್ಗೆ ಚಿಂತನೆ ಮಾಡುತ್ತಾರೆ. ಜೀವನ ಕಟ್ಟಿಕೊಳ್ಳುವುದಕ್ಕೆ ಅದು ಸಾಧ್ಯವಾಗುವುದಿಲ್ಲ ಆದರ್ಶದ ಜೀವನದಿಂದ ಮಾತ್ರ ಸಾಧ್ಯವಾಗುತ್ತದೆ. ಶ್ರೇಷ್ಟ ಶಿಕ್ಷಕರಿದ್ದರೆ ಅದೇ ಅತ್ಯುನ್ನತ ಶಾಲೆಯಾಗುತ್ತದೆ. ಪ್ರಕೃತಿ ದಿನನಿತ್ಯ ಹೊಸದಾಗಿ ಕಾಣುತ್ತದೆ. ಅದೇ ರೀತಿ ಶಿಕ್ಷಕರು ಹೊಸ ಚಿಂತನೆ, ಚೈತನ್ಯವನ್ನು ಹೊಂದಿರಬೇಕು. ವಯಸ್ಸಿನ ಮೇಲೆ ನಿವೃತ್ತಿ, ಪ್ರವೃತ್ತಿಯನ್ನು ಹೇಳುವುದಕ್ಕೆ ಆಗುವುದಿಲ್ಲ, ಜಡತ್ವವನ್ನು ಮೈಗೂಡಿಸಿಕೊಳ್ಳುವವರೆಗೂ ಶಿಕ್ಷಕ ಗುರುವಾಗೇ ಉಳಿದುಕೊಳ್ಳುತ್ತಾನೆ. ಸಮಾಜದಲ್ಲಿ ಹೆಚ್ಚಾಗಿರುವ ನಕರಾತ್ಮಕ ಧೋರಣೆಗಳನ್ನು ಕಡಿಮೆಗೊಳಿಸಿ ವಿದ್ಯಾರ್ಥಿಗಳನ್ನು ಅಂತರಂಗದ ಜ್ಞಾರ್ನಾಜನೆ ಕಡೆ ಕೊಂಡೊಯ್ಯುವ ಕರ್ತವ್ಯ ಶಿಕ್ಷಕರದ್ದು. ಮನುಷ್ಯನಲ್ಲಿ ಅಂತರಂಗದ ಬೆಳಕಿಲ್ಲದೇ ಹೊರಗಿನ ಶಿಕ್ಷಣ ಪಡೆಯುವುದು ವ್ಯರ್ಥ ಎಂದ ಅವರು, ಕೇವಲ ಉದ್ಯೋಗ ಪಡೆಯುವ ಸಲುವಾಗಿ ವಿದ್ಯಾಭ್ಯಾಸ ಮಾಡದೇ ಅಂತರಂಗದ ಅರಿವಿಗಾಗಿ, ವಿಕಸನಕ್ಕಾಗಿ ಶಿಕ್ಷಣ ಪಡೆಯಿರಿ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮಂಜುನಾಥ ಕುರ್ಕಿ ಮಾತನಾಡಿ, ಶಿಕ್ಷಣ ಎನ್ನುವುದು ನಾಲ್ಕು ಗೋಡೆಗಳನ್ನು ಮೀರಿದ್ದು, ಶಿಕ್ಷಕನಾದವನು ಓದುವ ಹವ್ಯಾಸವನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾಜಮುಖಿ ವಿದ್ಯಾರ್ಥಿ ತಯಾರಾಗುತ್ತಾನೆ. ನೈತಿಕತೆಯ ಕೊರತೆಯಿಂದ ರೋಗಗ್ರಸ್ಥವಾಗಿರುವ ಸಮಾಜವನ್ನು ನಿಮ್ಮ ಅರಿವಿನ ಮೂಲಕ ಗುಣಮುಖಪಡಿಸುವ ವೈದ್ಯರಾಗಿ ಮತ್ತು ಜ್ಞಾನದ ದಂಡಯಾತ್ರೆಗೆ ಸಜ್ಜಾಗಿ ಎಂದು ಸಲಹೆ ನೀಡಿದರು.
ಕೆರೆಬಿಳಚಿಯ ಸನ್ಮಾನಿತ ಶಿಕ್ಷಕ ಸುಹೇಬ್ ಬೇಗ್ ಮಾತನಾಡಿ, ತರಬೇತಿ ಸಂಸ್ಥೆಗಳಲ್ಲಿ ಕಲಿಯುವ ವಿಷಯಗಳು, ತರಗತಿಯ ಕೊಠಡಿಯಲ್ಲಿ ವಿಭಿನ್ನವಾದ ಅನುಭವ ನೀಡುತ್ತವೆ. ಶಿಕ್ಷಕನು ನಿಸ್ವಾರ್ಥ ಸೇವೆ ಗೈದು ಆತ್ಮತೃಪ್ತಿ ಪಡೆಯಬೇಕು. ಇಂದಿನ ಶಿಕ್ಷಣ ಪದ್ಧತಿ ಬದಲಾಗಿರುವುದರಿಂದ ಶಿಕ್ಷಕರೂ ನೂತನ ಶೈಕ್ಷಣಿಕ ಕ್ರವiಗಳನ್ನು  ಅನುಸರಿಸಬೇಕೆಂದು,  ತಮ್ಮ ಶಾಲೆಯಲ್ಲಿ ಸುಮಾರು 7 ಲಕ್ಷ ವೆಚ್ಚದ ಗಣಿತ ಪ್ರಯೋಗಾಲಯವನ್ನು  ನಿರ್ಮಿಸಿದ್ದು, 20 ರಿಂದ 300 ವರೆಗೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿರುವುದಾಗಿ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಂ ಶಿಕ್ಷಣ ಮಹಾವಿದ್ಯಾಲಯ ನಿವೃತ್ತ ಪ್ರಾಂಶುಪಾಲ ಡಾ. ಹೆಚ್.ವಿ ವಾಮದೇವಪ್ಪ ಮಾತನಾಡಿದರು. ಶಿಕ್ಷಕರಾದ ಶ್ರೀಮತಿ ರತ್ನ ಎಂ, ಕೆ. ಆರ್ ಬಸಪ್ಪ, ಗುರುಸಿದ್ದಸ್ವಾಮಿ ಎಂ,ಶರಣಪ್ಪ, ಶ್ರೀಮತಿ ರತ್ನಮ್ಮ ಸಾಲಿಮಠ್, ಜಗದೀಶ್ ಬಳೆಗಾರ್,ಸುಹೇಬ್ ಬೇಗ್ ಇವರನ್ನು ಸನ್ಮಾನಿಸಲಾಯಿತು.

Leave a Comment