ಬದುಕಿನ ಪಯಣ ಮುಗಿಸಿದ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಬಿ.ಶೇಷಾದ್ರಿ

ಬಳ್ಳಾರಿ, ಆ.10: ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸ್ಥಾಪಿಸಲ್ಪಟ್ಟ ಮಾನವೀಕ ಅಧ್ಯಯನಕ್ಕಾಗಿ ನೀಡಲಾಗುವ ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿಗೆ ಪುರಸ್ಕೃತರಾಗಿದ್ದ ಖ್ಯಾತ ಅರ್ಥ ಶಾಸ್ತ್ರಜ್ಞ, ಶಿಕ್ಷಣ ತಜ್ಞರೂ ಆಗಿದ್ದ ಡಾ.ಬಿ.ಶೇಷಾದ್ರಿಯವರು ನಿನ್ನೆ ರಾತ್ರಿ 11 .30 ಕ್ಕೆ ನಗರದ ನೆಹರೂ ಕಾಲೋನಿಯ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೂರು ಜನ ಗಂಡು, ಒಬ್ಬರು ಹೆಣ್ಣು ಮಗಳು ಹಾಗು ಪತ್ನಿ ಮತ್ತು ಸಾವಿರಾರು ಜನ ಶಿಷ್ಯ ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿ 1938 ಜುಲೈ 01 ರಂದು ಜನಿಸಿದ ಇವರು. ಅಲ್ಲಿನ ಮುನಿಷಿಪಲ್ ಹೈಸ್ಕೂಲಿನಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪೂರೈಸಿ ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಬಿ.ಎಪದವಿ ಪಡೆದು ನಂತರ ಧಾರವಾಡದಲ್ಲಿ ವಿದ್ಯುತ್ ಇಲಾಖೆಯ ನೌಕರರಾಗಿ ಕಾರ್ಯನಿರ್ವಹಿಸಿದ್ದರು. ಇದೇ ವೇಳೆ ಅವರು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಹೊರ ವಿದ್ಯಾರ್ಥಿಯಾಗಿ ಅರ್ಥಶಾಸ್ತ್ರ ಮತ್ತು ಇಂಗ್ಲೀಷ್‍ನಲ್ಲಿ ಸ್ಥಾತಕೋತ್ತರ ಪದವಿ ಪಡೆದಿದ್ದರು. ನಂತರ ಅವರು ನಗರದ ವೀರಶೈವ ವಿದ್ಯಾವರ್ಧಕ ಸಂಘದ ವೀರಶೈವ ಕಾಲೇಜಿನಲ್ಲಿ ಆರ್ಥಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಅವರು, ಪಿಹೆಚ್‍ಡಿ ಪದವಿ ಪಡೆದಿದ್ದರು.

ಕಳೆದ 32 ವರ್ಷಗಳಿಂದ ಕ್ಯಾನ್ಸ್‍ರ್ನಿಂದ ಬಳಲುತ್ತಿದ್ದ ಅವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ. ಡಾ.ನಂಜುಂಡಪ್ಪ ಅಸಮತೋಲನ ನಿವಾರಣ ಸಮಿತಿಯ ಸದಸ್ಯರಾಗಿ, ದಿವಂಗತ ಮುಖ್ಯ ಮಂತ್ರಿ ಗುಂಡುರಾಯರ ಸಲಹೆಗಾರರಾಗಿ, ತಾವು ಓದಿದಿ ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರೀತಿ ಪಾತ್ರದ ಅಧ್ಯಾಪಕರಾಗಿ, ಮೈಸೂರಿನಲ್ಲಿರುವ ಉನ್ನತಾಧಿಕಾರಿಗಳ ತರಬೇತಿ ಕೇಂದ್ರದ ಅತಿಥಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದರು. ಗೋಗಾಕ್ ಚಳುವಳಿಯಲ್ಲಿಯೂ ಅವರು ಪಾಲ್ಗೊಂಡಿದ್ದರು.

ಶೈಕ್ಷಣಿಕ ಮತ್ತು ಸಮಾಜಿಕ ರಂಗದಲ್ಲಿ ಅವರಿಗೆ ವಿಶೇಷ ಸ್ಥಾನಮಾನವಿತ್ತು. ನಡೆದಾಡುವ ವಿಶ್ವ ವಿದ್ಯಾಲಯವೆಂದೇ ಕರೆಯಲಾಗುತ್ತಿತ್ತು. ಅವರು ಬಳಿ ಕಲಿತ ವಿದ್ಯಾರ್ಥಿಗಳು ಇಂದು ಜಗತ್ತಿನಾಧ್ಯಾಂತ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೊಬ್ಬ ಸಮಾನತಾವಾದಿಯಾಗಿದ್ದರು.

ನಡೆ ನುಡಿ ಕಾರ್ಯಗಳಲ್ಲಿ ನಿರ್ಭೀತಿಯಿಂದಿದ್ದರು. ಸದಾ ಅಭಿವೃದ್ದಿಯ ಚಿಂತಕರಾಗಿದ್ದರು. ಅವರನ್ನು ಕ್ಯಾನ್ಸ್‍ರ್ ವ್ಯಾದಿ ಬಾದಿಸುತ್ತಿದ್ದರೂ ಅದನ್ನು ಮೆಟ್ಟಿನಿಂತು ಸದಾ ಹಸನ್ಮುಖರಾಗಿ ಗಂಟೆ ಗಟ್ಟಲೆ ಉಪನ್ಯಾಸ ನೀಡುತ್ತಾ ಬಂದಿದ್ದು ಯಾರು ಮರೆಯುವಂತಿಲ್ಲ.

ಇತ್ತೀಚೆಗಷ್ಟೇ ಅವರ ಶಿಷ್ಯ ಬಳಗ ಕನ್ನಡದಲ್ಲಿ ಜೈವಿಕ ಬುದ್ಧಿಜೀವಿ ಡಾ.ಬಿ. ಶೇಷಾದ್ರಿ – ವಿಚಾರ ಸ್ಪಂದನ ಎಂದು. ಮತ್ತು ಆಂಗ್ಲ ಭಾಷೆಯಲ್ಲಿ ಎಸ್ಸೇಸ್ ಇನ ಹಾನರ್ ಆಫ್ ಡಾ.ಬಿ.ಶೇಷಾದ್ರಿ- ಗ್ರೊಥ್ ಈಕ್ವಿಟಿ ಅಂಡ್ ಜಸ್ಟೀಸ್ (Essays in Honour of Dr.B.Seshadri – Growth Equity and Justice) ಎಂದು ಅಭಿನಂದನಾ ಗ್ರಂಥಗಳನ್ನು ಬಿಡುಗಡೆ ಮಾಡಿತ್ತು.

ಇವರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯರುಗಳಾದ ಕೆ.ಸಿಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಶಾಸಕ ಸೋಮಶೇಖರ ರೆಡ್ಡಿ, ಶ್ರೀರಾಮುಲು, ನಾಗೇಂದ್ರ. ನಗರದ ಬಸವರಾಜೇಶ್ವರಿ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್. ಮ್ಯಾನೇಜಿಂಗ್ ಟ್ರಸ್ಟಿ ಡಾ. ಎಸ್‍ಜೆ.ವಿ. ಯಶವಂತ್ ಭೂಪಾಲ್. ಹೈಕಾ ಹೋರಾಟ ಸಮಿತಿ ಮುಖಂಡ ಸಿರಿಗೇರಿ ಪನ್ನರಾಜ್, ಗಾಂಧಿಭವನದ ಕಾರ್ಯದರ್ಶಿ ಟಿ.ಜಿ.ವಿಠ್ಠಲ್, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ್ ಮತ್ತು ಕಾರ್ಯದರ್ಶಿ ಚೋರನೂರು ಕೊಟ್ರಪ್ಪ, ಜಿ.ರಾಮಚಂದ್ರಯ್ಯ, ಮೊದಲಾದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಬಳ್ಳಾರಿ ನಗರದಲ್ಲಿ ನಡೆಯಿತು.

 

Leave a Comment