ಬದುಕಿನ ಗುರಿ ತೋರುವ ಗುರುವಿಗೆ ನಮನ

ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ………… ಎಂದು ತ್ರಿಮೂರ್ತಿಗಳಿಗೆ ಗುರುಗಳನ್ನ ಹೋಲಿಸಿ ಬರೆದ ಸ್ತೋತ್ರವಿದು. ಗುರು ಎಂದರೆ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ದಾರಿ ಮಾರ್ಗದರ್ಶನ ಮಾಡುವಾತ. ಅಂತಹ ಗುರುಗಳನ್ನು ನೆನೆದು ಇಂದು ದೇಶದೆಲ್ಲೆಡೆ ಶಿಕ್ಷಕರ ದಿನ ಆಚರಿಸಲಾಗುತ್ತಿದೆ.

ಆದರೆ ಗುರುಗಳು ಎಂದರೆ ಶಾಲೆಯಲ್ಲಿ ಪಾಠ ಹೇಳಿಕೊಡುವ ವ್ಯಕ್ತಿಗಳು ಮಾತ್ರವಲ್ಲ,ಉತ್ತಮ ಬದುಕು ಕಟ್ಡಿಕೋಳ್ಳುವಲ್ಲಿ ಸಹಕರಿಸುವವರೂ ಗುರುವಿನ ಸ್ಥಾನದಲ್ಲಿ ನಿಲ್ಲುತ್ತಾರೆ. ಮನುಷ್ಯನ ಜೀವನದಲ್ಲಿ ಪ್ರತಿಯೊಂದು ಹೆಜ್ಜೆ, ಕಲಿಸಿದವರು, ಅಕ್ಷರ ಕಲಿಸಿದವರನ್ನು ಗುರುಗಳೆಂದು ಕರೆಯಬಹುದು. ನಾವು ದಾರಿಯಲ್ಲಿ ಹೋಗುವಾಗ ಒಂದು ವೇಳೆ ಎಡವಿ ಬಿದ್ದರೆ ಅಲ್ಲಿ ಯಾರಿಗೋ ಪರಿಚಯವಿಲ್ಲದ ವ್ಯಕ್ತಿ ಬಂದು ನಮ್ಮನ್ನ ಎತ್ತಿ ಸರಿಯಾಗಿ ದಾರಿ ನೋಡಿಕೋಂಡು ಹೋಗಪ್ಪ ಎಂದು ಹೇಳುವ ಮಾತು ಕೂಡ ಪಾಠವಾಗಿರುತ್ತದೆ. ಅವರಿಗೂ ಗುರು ಸ್ಥಾನ ಕೊಡುವುದರಲ್ಲಿ ತಪ್ಪಿಲ್ಲ.

ಶಿಕ್ಷಕರು, ಗುರುಗಳು ಎಂದಾಕ್ಷಣ ಮನಸ್ಸಲ್ಲಿ ಮೂಡೋದು ಶಿಸ್ತು, ಶ್ರದ್ದೆ,ವಿನಯ. ಮತ್ತೆ ಶಿಕ್ಷಣ ಎಂದಾಕ್ಷಣ ನಮಗೆ ನೆನಪಾಗೋದು ನಮ್ಮ ಬಾಲ್ಯ ಶಿಕ್ಷಣ ಅಂದರೆ
ಪ್ರಾಥಮಿಕ ಶಿಕ್ಷಣ. ಆ ದಿನಗಳಿಂದಲೇ ನಮಗೆ ಗುರುಗಳು ಎಂಬ ಅಂಶ ನಮ್ಮ ತಲೆಯಲ್ಲಿ ಮೂಡೋದು. ನಾವು ಒಂದು ಮಣ್ಣಿನ ಮುದ್ದೆ ರೀತಿ ಶಾಲೆ ಎಂಬ ಚಕ್ರಕ್ಕೆ ಬಂದು ಬೀಳುತ್ತೇವೆ ಆ ಮಣ್ಣಿನ ಮುದ್ದೆಗೆ ಸರಿಯಾಗಿ ರೂಪ ಕೊಡುವ ಕರ್ತವ್ಯ ಪ್ರಾಥಮಿಕ ಶಿಕ್ಷಣ ಹಂತದ ಗುರುಗಳಿಗೆ ಸೇರಿದ್ದಾಗಿರುತ್ತದೆ. ಅವರು ಕಲಿಸುವ ಪಾಠ, ಹೇಳಿಕೊಡುವ ರೀತಿ, ಮುಂದಿನ ಜೀವನದ ದಾರಿ ದೀಪವಾಗಿರುತ್ತದೆ. ಆ ಹಂತದಲ್ಲಿ ಆ ಮಣ್ಣು ಮುದ್ದೆಗೆ ಒಳ್ಳೆ ಆಕಾರ ಕೊಟ್ಟರೆ ಅದು ಮುಂದೆ ಒಳ್ಳೆ ಬೊಂಬೆಯಾಗುವ ಸಾಧ್ಯತೆಗಳಿರುತ್ತವೆ.

ಇತಿಹಾಸವನ್ನು ಒಮ್ಮೆ ತಿರುವಿ ನೋಡಿದರೆ ಗುರು-ಶಿಷ್ಯರ ಬಾಂಧವ್ಯ ಎಂತಹದು ಎಂಬುದು ಗೊತ್ತಾಗುತ್ತದೆ. ಅಂದು ಗುರುಕುಲ ಪದ್ದತಿ ರೂಢಿಯಲ್ಲಿತ್ತು. ಗುರುಕುಲದಲ್ಲಿ ಗುರು ಶಿಷ್ಯರಿಬ್ಬರು ಒಟ್ಟಿಗೆ ವಾಸ ಮಾಡುವ ಮೂಲಕ ಶಿಷ್ಯರು ಗುರುಗಳ ಸೇವೆ ಮಾಡುತ್ತಾ ಕಠಿಣ ಅಭ್ಯಾಸ ನಡೆಸುತ್ತಿದ್ದರು. ಆದರೆ ಇಂದು ಕಾಲಬದಲಾಗಿದೆ ಗುರು ಶಿಷ್ಯರ ನಡುವೆ ಭಯದ ವಾತಾವರಣ ಹೋಗಿ ಸ್ನೇಹಯುತ ವಾತಾವರಣ ಸೃಷ್ಠಿಯಾಗಿದೆ.
ನಾವೂ ಶಿಕ್ಷಕರನ್ನ ಕೇವಲ ಶಿಕ್ಷಕರ ದಿನದಂದು ಮಾತ್ರ ನೆನೆಯದೇ ಪ್ರತಿದಿನ ನೆನೆಯಬೇಕು, ಏಕೆಂದರೆ ಅವರು ಹಾಕಿಕೊಟ್ಟ ದಾರಿಯಲ್ಲಿ ಬೆಳೆದು ನಾವು ಉತ್ತಮ ಮಟ್ಟದಲ್ಲಿ ಜೀವನ ನಡೆಸುತ್ತಿರುವುದರಿಂದ ಅವರನ್ನು ನೆನಪಿಸಿಕೊಂಡರಾದರು ಅವರ ಋಣ ತೀರಿಸಬೇಕು.
ಒಬ್ಬ ವ್ಯಕ್ತಿ ಒಬ್ಬ ಗುರುವಿಗೆ ತಾನು ಸಂಪೂರ್ಣ ಗುರು ದಕ್ಷಿಣೆ ನೀಡೋದು ಯಾವಾಗ ಅಂದರೆ ಗುರುಗಳು ಹೇಳಿಕೊಟ್ಟ ಪಾಠವನ್ನು ಪಾಲಿಸಿದಾಗ ಮಾತ್ರ..ಆ ಪಾಠದಿಂದ ಇತರರಿಗೆ ಸಹಾಯ ಮಾಡಿದಾಗ ಮಾತ್ರ, ನಾವು ವಾಸ್ತವ ಜೀವನಕ್ಕೆ ಕಾಲಿಟ್ಟಾಗ ಅವರು ಹೇಳಿದ ಪ್ರತಿಯೊಂದು ಮಾತು ನಿಜ ಎನಿಸಿರುವುದು ಉಂಟು.
ಶಿಕ್ಷಕ ಎಂಬ ವೃತ್ತಿಯೂ ಇತರ ವೃತ್ತಿಗಳಿಗಿಂತ ಭಿನ್ನ ಮತ್ತು ಶ್ರೇಷ್ಠವಾದದ್ದು,ಏಕೆಂದರೆ ಈ ವೃತ್ತಿಯಲ್ಲಿ ಹೆಚ್ಚಿನ ಆತ್ಮ ತೃಪ್ತಿ ಸಿಗುತ್ತದೆ.

ಪ್ರಪಂಚದ ಯಾವುದೇ ವ್ಯಕ್ತಿಯ ಬಗ್ಗೆ ಸೀಮಿತವಾಗಿ ಹೇಳಬಹುದು ಆದರೆ ತಂದೆ,ತಾಯಿ,ಗುರುಗಳ ಬಗ್ಗೆ ಎಷ್ಟೇ ಹೇಳಿದರು ಪದಗಳು ಸಾಲುವುದಿಲ್ಲ ಮತ್ತು ಅವರ ಬಗ್ಗೆ ಹೇಳುವುದಕ್ಕೆ ಸೀಮಿತತೆ ಎಂಬುದೇ ಇರುವುದಿಲ್ಲ,ಏಕೆಂದರೆ ಈ ಮೂವರು ವ್ಯಕ್ತಿಗಳು ಜೀವನದಲ್ಲಿ ಅಷ್ಟು ಮುಖ್ಯ ಮತ್ತು ಪ್ರಭಾವ ಬೀರಿರುತ್ತಾರೆ.ಅವರೆಲ್ಲರನ್ನು ನೆನೆದು ಕೃತಜ್ಞತೆ ಸಲ್ಲಿಸುವ ಅಪೂರ್ವ ಸಮಯವಿದು.

ರಾಜೇಶ್ವರಿ ಜಯಚಂದ್ರ
ಸಾತ್ನಕೋತ್ತರ ವಿದ್ಯಾರ್ಥಿ(ಸಂವಹನ ವಿಭಾಗ)
ಬೆಂಗಳೂರು ವಿಶ್ವವಿದ್ಯಾನಿಲಯ

Leave a Comment