ಬದುಕಿದ್ದು ಸತ್ತಂತಿರುವ ಸರ್ಕಾರ ಬಿಎಸ್‌ವೈ ಟೀಕೆ

ಬಾಗಲಕೋಟ, ಸೆ 2- `ರಾಜ್ಯದಲ್ಲಿ ಸರ್ಕಾರ ಬದುಕಿದ್ದೂ ಸತ್ತಂತಾಗಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಮ್ಮಿಶ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಜಿಲ್ಲೆಯ ಮುಧೋಳ ತಾಲೂಕಿನಲ್ಲಿಂದು ಶಾಸಕ ಮುರುಗೇಶ ನಿರಾಣಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿದೆ. ಆದರೆ ಸಿಎಂ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ದಿನವಾದರೂ ಪ್ರವಾಸ ಮಾಡಿದ್ದೀರಾ ? ಎಂದು ಸಿಎಂ ಕುಮಾರಸ್ವಾಮಿಗೆ  ಪ್ರಶ್ನೆ ಮಾಡಿದರು.

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ರೈತರ ಸಾಲಮನ್ನಾ ಮಾಡಿರುವ ಕುರಿತು ಸಿಎಂಗೆ ಯಾವುದೇ ಸ್ಪಷ್ಠತೆ ಇಲ್ಲ ಎಂದು ದೂರಿದ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಸಿಎಂ ಪ್ರಚಾರದಲ್ಲಿದ್ದಾರೆ ವಿನ: ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಯಡಿಯೂರಪ್ಪ ಮತ್ತೆ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಯಡಿಯೂರಪ್ಪ ಅವರು ಬಿಎಸ್‍ವೈ ಹಗಲುಗನಸು ಕಾಣುತ್ತಿದ್ದಾರೋ ಅಥವಾ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೋ ಎಂದು ಸದ್ಯದಲ್ಲೇ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

ಸಿಎಂ ಕುಮಾರಸ್ವಾಮಿ ದೇವಸ್ಥಾನಗಳಿಗೆ ಹೋಗುತ್ತಿರುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಸಂಕಷ್ಟದಲ್ಲಿರುವ ರೈತರ, ಸಂತ್ರಸ್ತರ ನೋವು ಕೇಳಬೇಕೆಂದು ಆಗ್ರಹಿಸಿದರು.

ಈ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‍ನ ಕೆಲವು ಶಾಸಕರಿಂದ ಮುಂದಿನ ಸಿಎಂ ನಾನೇ ಎಂದು ಹೇಳಿಕೆ ಕೊಡಿಸುತ್ತಿದ್ದಾರೆ. ಸರ್ಕಾರದಲ್ಲಿ ಕಚ್ಚಾಟ ಇರದಿದ್ರೆ ಸಂಪುಟ ವಿಸ್ತರಣೆ ಮಾಡ್ತಿರೋದೇಕೆ ಎಂದು ಪ್ರಶ್ನೆ ಮಾಡಿದ ಅವರು ಸರ್ಕಾರದಿಂದ ಪ್ರಮುಖ ನಾಯಕರ ಫೋನ್ ಕದ್ದಾಲಿಕೆ ಆಗುತ್ತಿರುವುದು ಸತ್ಯ. ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಕೊಪ್ಪಳ ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಸಿದ್ದರಾಮಯ್ಯ ಎಲ್ಲಿಂದಾದ್ರೂ ಸ್ಪರ್ಧಿಸಲಿ ನಮಗೇನೂ ವ್ಯತ್ಯಾಸವಾಗುವುದಿಲ್ಲ. ಅಲ್ಲದೇ ಮೋದಿಯವರ ವರ್ಚಸ್ಸು ಇನ್ನೂ ಹೆಚ್ಚಾಗುತ್ತದೆ. ಹೆಚ್ಚು ಸ್ಥಾನಗಳನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದ ಶೇ. 50 ಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.

ಸರ್ಕಾರದಲ್ಲಿ ವಸೂಲಿಬಾಜಿ ದಂಧೆ ನಡೆದಿದೆ. ಅಧಿಕಾರಿಗಳ ವರ್ಗಾವಣೆಯಷ್ಟೆ ನಡೆದಿದೆ ಹೊರತು ಬೇರೆ ಯಾವುದೇ ಜನಪರ ಅಭಿವೃದ್ದಿ ಕೆಲಸಗಳಾಗಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಇನ್ನು ಸ್ವಲ್ಪ ದಿನಗಳಲ್ಲೇ ಸಮ್ಮಿಶ್ರ ಸರ್ಕಾರ ಉರುಳಿ ಬೀಳುತ್ತದೆ. ಈ ಮಾತನ್ನು ಕಾಂಗ್ರೆಸ್, ಜೆಡಿಎಸ್ ನಾಯಕರೇ ಹೇಳುತ್ತಿದ್ದಾರೆ ಎಂದು ಹೇಳಿದ ಅವರು ಮುಂದೆ ನಾನೇ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Comment