ಬಣ್ಣಗೆದರಿದ ಕನಸಿನ ಪಾತ್ರ

೯ನೇ ಕ್ಲಾಸ್‌ನಲ್ಲಿದ್ದಾಗಲೇ ಸಿನೆಮಾಕ್ಕೆ ಬಣ್ಣಹಚ್ಚಿದ ಹುಡುಗಿ ಕೃತಿಕಾ. ಬಿಗ್‌ಬಾಸ್‌ನಿಂದ ಅವಳ ಪ್ರತಿಭೆ ಮತ್ತು ನೇರಾನೇರ ವ್ಯಕ್ತಿತ್ವ ಹೊರಬಿತ್ತು ಅಲ್ಲಿವರೆಗೆ ಅವಳು ಜನರಿಗೆ ಗೊತ್ತಿದ್ದಿದ್ದು ರಾಧಿಕಳಾಗಿ. ಈಗ ನಿಜವಾದ ಕೃತಿಕಾ ವ್ಯಕ್ತಿತ್ವದಲ್ಲಿಯೇ  ಸಿನೆಮಾಕ್ಕೆ ಮತ್ತೆ ಮರಳಿದ್ದಾಳೆ.

*  ಕೆಂಗುಲಾಬಿ ಚಿತ್ರದಲ್ಲಿ ನಿಮ್ಮದು ಯಾವ ರೀತಿಯ ಪಾತ್ರ?
ಇದೊಂದು ಕಾದಂಬರಿ ಆಧಾರಿತ ಮಹಿಳಾ ಪ್ರಧಾನ ಚಿತ್ರ. ದೇವದಾಸಿ ಪದ್ಧತಿ ಇರುವ ಕುಟುಂಬದಲ್ಲಿ ಹುಟ್ಟಿರುವ ಅವಳು ಅನಿವಾರ್ಯವಾಗಿ ವೇಶ್ಯೆಯಾಗ ಬೇಕಾಗಿ ಬಂದಾಗ ಅವಳ ಮುಂದಿನ ಜೀವನ ಏನು? ಇದು ಚಿತ್ರದ  ಮೂಲ ಕಥೆ. ಹಳ್ಳಿ ಹುಡುಗಿ, ಮದುವೆಯಾಗುವ ಹೆಣ್ಣು, ವೇಶ್ಯೆ, ಕೊನೆಯಲ್ಲಿ ಹುಚ್ಚಿ ತರಹ ಆಗುವಂಥ ಹೀಗೆ ಒಂದಾದ ಮೇಲೆ ಒಂದರಂತೆ  ಐದು ಶೇಡ್‌ಗಳಿರುವ ಪಾತ್ರವಿದೆ. ಒಬ್ಬ ನಾಯಕಿಗೆ ಅಥವಾ ನಟಿಗೆ ಇದೊಂದು ಕನಸಿನ ಪಾತ್ರ ಅಂತಲೇ ಹೇಳಬಹುದು. ಮತ್ತೆ  ಸಿನೆಮಾಕ್ಕೆ ವಾಪಾಸ್ ಆಗಲು ಇಂಥ ಪಾತ್ರ ಸಿಕ್ಕಿದ್ದಕ್ಕೆ ನಾನು ತುಂಬಾನೇ ಅದೃಷ್ಟ ಮಾಡಿದ್ದೇನೆ.

*  ಮೊದಲು ನಟಿಸಿದ್ದ ಸಿನೆಮಾ?
ಪಟ್ರೆ ಲವ್ಸ್ ಪದ್ಮಾ ಸಿನೆಮಾದಲ್ಲಿ ನಟಿಸಿದ್ದೆ. ಆಗಿನ್ನೂ ೯ನೇ ಕ್ಲಾಸ್‌ನಲ್ಲಿದ್ದೆ. ನಂತರ ಓದಿಗೆ ತೊಂದರೆಯಾಗುತ್ತೆ ಅಂತ ಬ್ರೇಕ್ ಮಾಡಿದ್ದೆ. ಈಗ ಪೂರ್ತಿಯಾಗಿ ಸಿನೆಮಾಕ್ಕೇ
ಮರಳಿದ್ದೇನೆ.

* ಬಿಗ್‌ಬಾಸ್ ರಿಯಾಲಿಟಿ ಶೋನಿಂದ ನಿಮಗೆ ಆದ ಪ್ಲಸ್‌ಪಾಯಿಂಟ್?
ಆ ರೀತಿಯೆಲ್ಲಾ ಹೇಳೋದಿಕ್ಕೆ ಇಷ್ಟಪಡೋಲ್ಲ. ಆದ್ರೆ ಬಿಗ್‌ಬಾಸ್‌ನಿಂದ ಕೃತಿಕಾ ರವೀಂದ್ರ ಅನ್ನೋ ಹುಡ್ಗಿ ಇದ್ದಾಳೆ ಎಂದು ಇಡೀ ಇಂಡಸ್ಟ್ರಿ ಮತ್ತು ಜನರು ತಿರುಗಿ ನೋಡುವಂತೆ ಆಗಿದೆ. ಅದುವರೆಗೆ ರಾಧಾ ಕಲ್ಯಾಣ ಧಾರಾವಾಹಿಯ ರಾಧಿಕ ಅಂತಷ್ಟೇ ಗುರುತಿಸಲಾಗುತ್ತಿತ್ತು. ಅವ್ಳು ನಿಜವಾಗಿ ರಾಧಿಕ ಅಲ್ಲ ತನ್ನದೇ ಆದ ವ್ಯಕ್ತಿತ್ವ ಇರುವ ಕೃತಿಕಾ ಅನ್ನೋದನ್ನು ತೋರಿಸಿಕೊಟ್ಟಿದ್ದು ಖಂಡಿತವಾಗಿ ಬಿಗ್‌ಬಾಸ್.

*  ಬಿಗ್‌ಬಾಸ್ ಆದ್ಮೇಲೆ ಸುಮಾರು ಎರಡು ವರ್ಷ ಎಲ್ಲೂ ಕಾಣಿಸಿಕೊಳ್ಳಲಿಲ್ಲ  ಏನ್ ಮಾಡ್ತಿದ್ರಿ?
ಕೆಂಗುಲಾಬಿ ಶೂಟಿಂಗ್ ನಡೀತಿತ್ತು ಇದರ ಜೊತೆಗೆ ಕಿರಣ್ ಗೋವಿ ನಿರ್ದೇಶನದ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದೇನೆ ಅದರ ಶೂಟಿಂಗ್ ನಡೀತಿದೆ.

*  ಕನ್ನಡ ಸಿನೆಮಾದಿಂದ ನೀವು ಎದುರು ನೋಡ್ತಿರೋದು?
ಕನ್ನಡದಲ್ಲಿ ದೊಡ್ಡ ಹೀರೋಯಿನ್, ಗ್ಲಾಮರಸ್ ಹೀರೋಯಿನ್ ಅನ್ನಿಸಿಕೊಳ್ಳೋದು ಮುಖ್ಯನೇ ಆದ್ರೆ ಕೃತಿಕಾ ಅದ್ಭುತವಾಗಿ ಅಭಿನಯಿಸ್ತಾರೆ ಅಂತ ಅನ್ನಿಸಿಕೊಳ್ಳೋಕ್ಕೆ ಇಷ್ಟಪಡ್ತೀನಿ.

-ಕೆ.ಬಿ. ಪಂಕಜ

Leave a Comment