ಬಣಜಿಗ ಸಮಾಜ ಅಭಿವೃದ್ಧಿಗೆ ಶ್ರಮಿಸುತ್ತಿದೆ

ಬಾದಾಮಿ,ಆ.6-ಚಾಲುಕ್ಯರಾಳಿದ ನಾಡಿನಲ್ಲಿ ಐಹೊಳೆಯನ್ನು ವಾಣಿಜ್ಯ ಕೇಂದ್ರವಾಗಿಸಲು  ಕಾರಣೀಕರ್ತರಾದ ಬಣಜಿಗರು ಬದುಕಿನಲ್ಲಿ ವ್ಯಾಪಾರದ ಜತೆಗೆ ನ್ಯಾಯ ನಿಷ್ಟುರತೆ ಹಾಗೂ ಅನ್ಯ ಸಮಾಜದೊಂದಿಗೆ ಉತ್ತಮ ಬಾಂಧ್ಯವ್ಯದ ಮೂಲಕ ಉತ್ತರ ಕರ್ನಾಟಕದ ಮುಖ್ಯಮಂತ್ರಿಗಳ ಆಡಳಿತ ಸೇರಿ ಅಖಂಡ ಕರ್ನಾಟಕದ ಆದ್ಯತೆಯ ಆಡಳಿತ ಇತಿಹಾಸವಾದರೆ, ರಾಜಕೀಯವಾಗಿ ಸಕಲ ಜಾತಿ ಜನಾಂಗದವರಿಗೆ ಪ್ರಾಧಾನ್ಯತೆ ನೀಡುತ್ತ ಬಂದಿರುವುದು ಆಧುನಿಕ ಸಾಕ್ಷಿಯಾಗಿದೆ ಎಂದು ವೀರಪುಲಿಕೇಶಿ ವಿದ್ಯಾ ಸಂಸ್ಥೆ ಚೇರಮನ್ ಎ.ಸಿ.ಪಟ್ಟಣದ ಹೇಳಿದರು.
ಭಾನುವಾರ ಇಲ್ಲಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಣಜಿಗ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 50 ವರ್ಷಗಳಿಂದಲೂ ಎಲ್ಲ ಸಮಾಜಗಳೊಂದಿಗೆ ಅನ್ಯೋನ್ಯತೆ ಸ್ಪಂದನೆ ಮೂಲಕ ನಡೆದುಕೊಂಡು ಬಂದಿದ್ದಲ್ಲದೆ, ಸಾಹುಕಾರ ದಿ. ಕಲ್ಲಪ್ಪ ಪಟ್ಟಣಶೆಟ್ಟಿ ಅವರ ದೂರದೃಷ್ಟಿಯಿಂದ ವೀರಪುಲಿಕೇಶಿ ಸಹಕಾರಿ ಬ್ಯಾಂಕ್ ಹಾಗೂ ಶಿಕ್ಷಣ ಸಂಸ್ಥೆ ಮೂಲಕ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ನೀಡುತ್ತ ಬಂದಿದೆ. ಇದಕ್ಕೆ ತಳಪಾಯ ಹಾಕಿದ ದಿ. ಕಲ್ಲಪ್ಪನವರು ನಮ್ಮ ಸಮಾಜದ ಮಹಾನ್ ಪುರುಷರು, ಅವರ ದೂರದೃಷ್ಟಿಯಿಂದಲೆ ನಾವೆಲ್ಲ ಇಂದು ಸುಶಿಕ್ಷತರಾಗಿ ಸಮಾಜಕ್ಕೆ ವಿವಿಧ ರೀತಿಯಲ್ಲಿ ಸೇವೆ ಗೈಯಲು ಸಾಧ್ಯವಾಗಿದೆ ಎಂದರು.
ಸಾಹುಕಾರ ದಿ. ಕಲ್ಲಪ್ಪನವರೊಂದಿಗೆ ದಿ. ಗುರುಪಾದಪ್ಪನವರು ಮಾಡಿದ ಸೇವೆ ಅವಿಸ್ಮರಣೀಯವಾಗಿದ್ದು, ಇವರ ಸ್ಮರಣಾರ್ಥ ಸಹಕಾರಿ ಬ್ಯಾಂಕಿನಲ್ಲಿ ಪ್ರತಿ ವರ್ಷವೂ ತಾಲೂಕಿನ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರದ ಜತೆಗೆ ಅವರ ಶೈಕ್ಷಣಿಕ ಆರ್ಥಿಕತೆಗೆ ಸಹಕಾರವನ್ನೂ ನೀಡುತ್ತ ಬಂದಿದೆ. ಇದನ್ನು ಸಮಾಜದವರು ಸೂಕ್ಷ್ಮವಾಗಿ ಗಮನಿಸಿ ಬಣಜಿಗ ಸಮಾಜದ ಪ್ರತಿಭಾನ್ವಿತರನ್ನು ಬ್ಯಾಂಕಿನಲ್ಲಿ ಸದಸ್ಯತ್ವ ಇಲ್ಲವೆ ಪಾಲಕರ ಸದಸ್ಯತ್ವ ಮಾಡಿಸಿ ಪ್ರಯೋಜನ ಪಡೆಯಬೇಕು ಎಂದ ಅವರು ಬಣಜಿಗ ಸಮಾಜದ ಯುವಕರು ಹಾಗೂ ಮಹಿಳೆಯರು ಒಗ್ಗಟ್ಟಿನ ಮೂಲಕ ವಿವಿಧ ಘಟಕಗಳನ್ನು ಸ್ಥಾಪಿಸುವ ಮೂಲಕ ಸಮಾಜದ ಬಡ ಜನಾಂಗದ ಏಳ್ಗೆಗೆ ಶ್ರಮಿಸಬೇಕಿದೆ ಎಂದರು.
ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಮಾತನಾಡಿ ಸಮಾಜದ ಸಂಘಟನೆ ಇಂದಿನ ದಿನಮಾನಗಳಲ್ಲಿ ಅತ್ಯವಶ್ಯಕ. ಸಂಘಟನೆ ಜಾತಿಗಾಗಿ ಮಾತ್ರ ಮಾಡಬಾರದು, ಇದನ್ನು ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲತೆಗೆ ಬಳಸಿಕೊಂಡಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವಷ್ಟು ಬಲಿಷ್ಟರಾಗಬಹುದಾಗಿದೆ. ಕೇಂದ್ರ ಸರಕಾರದ ಆಡಳಿತದ ಪ್ರಕಾರ ನಾವು ಮೀಸಲಾತಿಗೆ ಒಳಪಡುತ್ತೇವೆ.  ಸರಕಾರದಿಂದ ಶೈಕ್ಷಣಿಕ ಸೌಲಭ್ಯ ಪಡೆದಲ್ಲಿ ಮಕ್ಕಳ ಭವಿಷ್ಯವೂ ಉಜ್ವಲಗೊಳ್ಳುತ್ತದೆ. ಬಣಜಿಗ ಸಮಾಜದಲ್ಲಿ ಸಾಕಷ್ಟು ಜನ ಸಾಧಕರಿದ್ದು ಅವರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಸಂಘ ಮಾಡಬೇಕು. ಬಣಜಿಗ ಯುವಕರು ಸುಸಂಸ್ಕ್ರತರಾಗಿ ಬಸವಣ್ಣ, ಅಕ್ಕಮಹಾದೇವಿ ಅವರು ರಚಿಸಿದ ವಚನಗಳ  ಮೂಲಕ ಧಾರ್ಮಿಕವಾಗಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಮಾತನಾಡಿ ದಿ. ಕಲ್ಲಪ್ಪನವರ ದೂರದೃಷ್ಟಿ ಇಲ್ಲದಿದ್ದರೆ ನಾವೆಲ್ಲರೂ ಈ ಕ್ಷೇತ್ರದಲ್ಲಿ ಹೀಗಿರಲು ಸಾಧ್ಯವಿರಲಿಲ್ಲ. ಕಲ್ಲಪ್ಪನವರು ಕಲಿತಿದ್ದು 3 ತರಗತಿ ಅವರ ಶಿಕ್ಷಣ ಕಡಿಮೆ ಇದ್ದರೂ ಸುಶಿಕ್ಷಿತರಗಿಂತಲೂ  ಉದಾರ ಮನಸ್ಸಿನ ವ್ಯಕ್ತಿಯಾಗಿದ್ದರು. ಉತ್ತರ ಕರ್ನಾಟಕದಲ್ಲಿ ಎಸ್. ನಿಜಲಿಂಗಪ್ಪನವರಿಂದ ಬಿ.ಎಸ್.ಯಡಿಯೂರಪ್ಪನವರ ವರೆಗೂ ಬಣಜಿಗರೇ ಹೆಚ್ಚು ಸಿಎಂ ಆದರವರು. ಅವರ ಅಖಂಡ ಕರ್ನಾಟಕದ ಕನಸು ಇಂದಿಗೂ ಅಜರಾಮರವಾಗಿದೆ. ಬಣಜಿಗರು ಎಂದಿಗೂ ಜಾತಿಗೆ ಒತ್ತು ನೀಡಿದವರಲ್ಲ. ನಮ್ಮನ್ನು ನಂಬಿದ ವೀರಶೈವ ಲಿಂಗಾಯತ ಸಮುದಾಯಗಳ ಏಳ್ಗೆಗೆ ಹಗಲಿರುಳು ಶ್ರಮಸಿದ್ದು ಇತಿಹಾಸವಾದರೆ, ಕಳೆದ ಚುನಾವಣೆಯಲ್ಲಿ ಬಣಜಿಗರಾದ  ನಾನು ಮತ್ತು ಎಂ.ಕೆ.ಪಟ್ಟಣಶೆಟ್ಟಿ ಹಾಗೂ ರಾಜಶೇಖರ ಶೀಲವಂತ  ಸಂಸದ ಶ್ರೀರಾಮುಲು ಅವರಿಗೆ ಕ್ಷೇತ್ರದಲ್ಲಿ ತ್ಯಾಗ ಮಾಡಿದ್ದೂ ಸಮಾಜ ಬಾಂಧವರು ಗಮನಿಸಬೇಕು ಎಂದರು.
ಸಮಾಜದ ಶಿರೋಳದ ಶಂಕರಾರೂಢ ಶ್ರೀಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ಅವಿನಾಶ ಮಮದಾಪೂರ ಅಧ್ಯಕ್ಷತೆ ವಹಿಸಿದ್ದರು. ಕೆರೂರಿನ ಸಮಾಜದ ಹಿರಿಯ ಮಲ್ಲಪ್ಪಜ್ಜ ಘಟ್ಟದ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿದ್ರಾಮಪ್ಪ ಕಾಡಲೂರ ಮಾತನಾಡಿದರು. ನಿವೃತ್ತ ಉಪನ್ಯಾಸಕ ಎಂ.ಎಸ್.ಅಂಗಡಿ ಉಪನ್ಯಾಸ ನೀಡಿದರು. ಸಂಘದ ಕಾರ್ಯದರ್ಶಿ ನಾಗರಾಜ ಕಾಚೆಟ್ಟಿ ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಬಣಜಿಗ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ80 ಅಧಿಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಮಾಜದವತಿಯಿಂದ ಸನ್ಮಾನಿಸಲಾಯಿತು.
ತಾಲೂಕಿನ ಬಣಜಿಗ ಸಮಾಜದ ಮುಖಂಡರು, ಯುವಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಶೀತಲ ಪಟ್ಟಣಶೆಟ್ಟಿ ಹಾಗೂ ಕುಮಾರಿ ಕಡಗದ ಸ್ವಾಗತಿಸಿ ನಿರೂಪಿಸಿದರು. ರಾಚಣ್ಣ ಪಟ್ಟಣದ ಆಶೆಯ ನುಡಿ ಹೇಳಿದರು. ತಾಲೂಕಿನ ವಿವಿಧ ಗ್ರಾಮ ಹಾಗೂ ನಗರಗಳಿಂದ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

Leave a Comment