ಬಡ ಮಧ್ಯಮ ಓದುಗರಿಗೆ ಜ್ಞಾನ ಭಂಡಾರವಾದ ಜಿಲ್ಲಾ ಗ್ರಂಥಾಲಯ

(ರಾಚಯ್ಯ ಸ್ವಾಮಿ ಮಾಚನೂರು)
ರಾಯಚೂರು.ಜು.14- ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಠ್ಯ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ವಿಷಯಗಳ ಅಭ್ಯಾಸಕ್ಕೆ ಜಿಲ್ಲಾ ಗ್ರಂಥಾಲಯ ಜ್ಞಾನ ಭಂಡಾವಾಗಿರುವ ಕಾರಣಕ್ಕೆ ಬಹುತೇಕ ವಿದ್ಯಾರ್ಥಿಗಳು ಹಾಗೂ ಇನ್ನಿತರ ಓದುಗರರಿಂದ ಸದಾ ತುಂಬಿಕೊಂಡಿರುತ್ತದೆ.
ಅಂತರ್ಜಾಲ ಮತ್ತು ಅಂಗೈಯಲ್ಲಿ ಆಕರ್ಷಕ ಆಪ್ ಆಧುನಿಕ ಯುಗದಲ್ಲಿ ಗ್ರಂಥಾಲಯಕ್ಕೆ ತೆರಳಿ, ಓದುವ ಹವ್ಯಾಸವೇ ಕಳೆದು ಹೋದ ಪರಿಸ್ಥಿತಿಯಲ್ಲಿ ಜಿಲ್ಲಾ ಗ್ರಂಥಾಲಯ ತನ್ನ ಓದುಗರನ್ನೂ ಯಥಾರೀತಿ ಉಳಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯವೆಂದರೇ ಪುಸ್ತಕ ಮ್ಯೂಸಿಯಂಗಳಾಗಿವೆ. ರಾಜ್ಯದಲ್ಲಿ ಅನೇಕ ಕಡೆ ಗ್ರಂಥಾಲಯಗಳು ಬಿಕೋ ಎನ್ನುತ್ತಿದ್ದರೇ, ಜಿಲ್ಲಾ ಗ್ರಂಥಾಲಯ ಪ್ರತಿ ನಿತ್ಯ ನೂರಾರು ವಿದ್ಯಾರ್ಥಿಗಳ ಅಭ್ಯಾಸದ ಕೇಂದ್ರವಾಗಿ ತನ್ನ ಹಿಂದಿನ ವೈಭವ ಕಾಯ್ದುಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಮೊಬೈಲ್, ಅಂತರ್ಜಾಲ ಬಳಕೆ ವ್ಯಾಪಾಕವಾಗಿದೆ. ದಿನದ 24×7 ವಾಟ್ಸಾಪ್ ಮತ್ತು ಫೇಸ್ ಬುಕ್‌ಗಳಲ್ಲಿ ಮುಳುಗಿದ ಯುವ ಜನತೆಗೆ ಗ್ರಂಥಾಲಯ ಒಂದು ಜ್ಞಾನದ ದೇಗುಲ ಎನ್ನುವ ಕಲ್ಪನೆಯೂ ಮರೆತು ಹೋಗಿದೆ.
ಇದರ ಪರಿಣಾಮದಿಂದ ಅನೇಕ ಕಡೆ ಗ್ರಂಥಾಲಯ ಓದುಗರಿಲ್ಲದೇ, ಮುಚ್ಚುವ ಸ್ಥಿತಿ ಬಂದೋದಗಿದೆ. ಆದರೆ, ನಗರದ ಉದ್ಯಾನವನದಲ್ಲಿರುವ ಜಿಲ್ಲಾ ಗ್ರಂಥಾಲಯ ಮಾತ್ರ ಮುಂಜಾನೆ 8 ಗಂಟೆಯಿಂದ ಸಂಜೆವರೆಗೂ ಓದುಗರಿಂದ ತುಂಬಿರುತ್ತದೆ. ವಿದ್ಯಾರ್ಥಿಗಳಂತೂ ಗ್ರಂಥಾಲಯಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ಮಧ್ಯಮ ಮತ್ತು ಬಡ ವರ್ಗದ ವಿದ್ಯಾರ್ಥಿಗಳು ಕಾಲೇಜು ಮತ್ತು ಪದವಿಗಳ ಶೈಕ್ಷಣಿಕ ಪ್ರಕ್ರಿಯೆಗೆ ಗ್ರಂಥಾಲಯ ಬಹುದೊಡ್ಡ ನೆರವಾಗಿದೆ.
ದುಬಾರಿ ವೆಚ್ಚದ ಪಠ್ಯ ಪುಸ್ತಕಗಳು ಖರೀದಿ ಮತ್ತು ತತ್ಸಬಂಧ ಮಾಹಿತಿ ಹೊಂದಿದ ಪುಸ್ತಕಗಳ ಖರೀದಿಸುವ ಆರ್ಥಿಕ ಸಾಮರ್ಥ್ಯದ ಕೊರತೆ ಕೇಂದ್ರ ಗ್ರಂಥಾಲಯ ನಿವಾರಿಸುತ್ತಿದೆ.
ವಿದ್ಯಾರ್ಥಿಗಳಿಗೆ ಅಂತರ್ಜಾಲ ಉಪಯೋಗಕ್ಕೆ ಹೈಟೆಕ್ ಕಂಪ್ಯೂಟರ್ ವ್ಯವಸ್ಥೆ ಇಲ್ಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ನೂರಾರು ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಸಂಜೆವರೆಗೆ ಓದುತ್ತಾರೆ. ರಜಾ ದಿನಗಳಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯದ ಉದ್ಯಾನವನದಲ್ಲಿ ವಿದ್ಯಾಭ್ಯಾಸ ಮಾಡುವುದು ಮತ್ತೊಂದು ವಿಶೇಷವಾಗಿದೆ. ಗ್ರಂಥಾಲಯಕ್ಕೆ ಬರುವ ಮಹಿಳೆಯರಿಗೆ ಪ್ರತ್ಯೇಕ ವಿದ್ಯಾಭ್ಯಾಸಕ್ಕೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಕಳೆದ ಎರಡು ದಶಕಗಳಿಂದ ಜಿಲ್ಲಾ ಗ್ರಂಥಾಲಯ ಸಾವಿರಾರು ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ಅದೇಷ್ಟೋ ಜನ ಸರ್ಕಾರಿ ನೌಕರಿಗೆ ಸೇರ್ಪಡೆಗೊಂಡ ಉನ್ನತ ಹುದ್ದೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಮಧ್ಯಮ ಮತ್ತು ಬಡ ವಿದ್ಯಾರ್ಥಿಗಳಿಗೆ ಜಿಲ್ಲಾ ಗ್ರಂಥಾಲಯ ವಿದ್ಯಾಭ್ಯಾಸಕ್ಕೆ ಅತ್ಯುತ್ತಮ ವೇದಿಕೆಯಾಗಿದೆ.

@12bc = ಹಳ್ಳಿಯಿಂದ ಬರುವ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಗ್ರಂಥಾಲಯ ಅನುಕೂಲಕರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಅನೇಕ ಪುಸ್ತಕ ಅಭ್ಯಾಸ ಅನಿವಾರ್ಯ. ಇಷ್ಟೆಲ್ಲಾ ಪುಸ್ತಕ ಖರೀದಿಸುವ ಸಾಮರ್ಥ್ಯವಿಲ್ಲದ ಬಡವರ ಪಾಲಿಗೆ ಈ ಗ್ರಂಥಾಲಯ ಜ್ಞಾನದ ಆಲಯವಾಗಿದೆ.
ಸುಧಾ ಪಾಟೀಲ್
ಶಾವಂತಗೇರಾ.

@12bc = ಪಿಯುಸಿ ಹಂತದಿಂದಲೂ ನಾನು ಗ್ರಂಥಾಲಯಕ್ಕೆ ಬರುವುದು ಅಭ್ಯಾಸ ಮಾಡಿಕೊಂಡಿದ್ದೇನೆ. ಇಲ್ಲಿಯ ಅನೇಕ ಪುಸ್ತಕಗಳನ್ನು ಓದಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಹೈಟೆಕ್ ಕಂಪ್ಯೂಟರ್ ವ್ಯವಸ್ಥೆ ಮತ್ತು ಪ್ರತ್ಯೇಕ ಕೊಠಡಿ ವ್ಯವಸ್ಥೆ ವಿದ್ಯಾಭ್ಯಾಸಕ್ಕೆ ಅತ್ಯುತ್ತಮ ಪರಿಸರವಾಗಿದೆ.
ಕಿರಣ್ ರಾಜೇಂದ್ರ
ರಾಯಚೂರು.

Leave a Comment