ಬಡ್ತಿ ಮೀಸಲಾತಿ ಕುರಿತ ಸುಪ್ರೀಂ ತೀರ್ಪಿನ ಹಿಂದೆ ಬಿಜೆಪಿ ಪಿತೂರಿ: ಕಾಂಗ್ರೆಸ್‌

ನಾಗ್ಪುರ, ಫೆ 16 -ಬಡ್ತಿ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪು ಬಿಜೆಪಿ ಸರ್ಕಾರದ ಪಿತೂರಿ ಎಂದು ಕಾಂಗ್ರೆಸ್ ವಕ್ತಾರ ಅನ್ಶುಲ್ ಅವಿಜಿತ್ ಆರೋಪಿಸಿದ್ದಾರೆ. ಈ ನಿರ್ಧಾರದ ವಿರುದ್ಧ ಕಾಂಗ್ರೆಸ್ ಪರಿಶೀಲನಾ ಅರ್ಜಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ.

ಎಸ್‌ಸಿ / ಎಸ್‌ಟಿಗೆ ನೀಡಲಾಗಿರುವ ಮೀಸಲಾತಿಯನ್ನು ಕೊನೆಗೊಳಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸಿದ್ಧಾಂತವನ್ನು ಬಿಜೆಪಿ ಸರ್ಕಾರ ಅನುಸರಿಸುತ್ತಿದೆ ಎಂದು ಅವಿಜಿತ್ ಹೇಳಿದರು.

ಈ ತೀರ್ಪು ಸಂವಿಧಾನದ ಮೂಲಭೂತ ಅಂಶಗಳ ಮೇಲಿನ ಆಕ್ರಮಣವಾಗಿದ್ದು, ಇದನ್ನು ಬಿಜೆಪಿ ವಿರೋಧಿಸುತ್ತಿಲ್ಲ ಎಂದು ಅವರು ದೂರಿದರು.
ಬಡ್ತಿಯಲ್ಲಿ ಮೀಸಲಾತಿ ನೀಡಲು ರಾಜ್ಯಗಳು ಕಾನೂನುಬದ್ಧವಾದ ಹಕ್ಕು ಹೊಂದಿಲ್ಲ ಎಂದು ಬಿಜೆಪಿ ಅಧಿಕಾರದಲ್ಲಿದ್ದ ಉತ್ತರಾಖಂಡ ಸರ್ಕಾರ ಅರ್ಜಿಯಲ್ಲಿ ತಿಳಿಸಿತ್ತು. ಇದರ ಆಧಾರದಲ್ಲಿ ಸುಪ್ರೀಂಕೋರ್ಟ್ ಬಡ್ತಿಯಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಆದೇಶ ನೀಡಿದೆ ಎಂದವರು ಆರೋಪಿಸಿದರು.
ಸಮಾಜದ ವಂಚಿತ ವರ್ಗಗಳಿಗೆ ಮೀಸಲಾತಿಯ ಮೂಲಭೂತ ಹಕ್ಕಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೊದಲಿನಿಂದಲೂ ಇದಕ್ಕೆ ವಿರುದ್ಧವಾಗಿವೆ ಎಂದು ಅವಿಜಿತ್ ಹೇಳಿದರು.

1995 ರಲ್ಲಿ ಬಡ್ತಿಯಲ್ಲಿ ಮೀಸಲಾತಿಗಾಗಿ ತಿದ್ದುಪಡಿ ಮಾಡಲಾಯಿತು, ಏಕೆಂದರೆ ಆ ಕಾಲದ ಸಂಸದರು ಇದು ಮೂಲಭೂತ ಹಕ್ಕು ಎಂದು ಭಾವಿಸಿದ್ದರು. ಆದಾಗ್ಯೂ, ಸುಪ್ರೀಂಕೋರ್ಟ್ ನಿರ್ಧಾರವು ಚೆಂಡನ್ನು ರಾಜ್ಯಗಳ ಅಂಗಳಕ್ಕೆ ಹಾಕಿದೆ. ಇದರಿಂದಾಗಿ ರಾಜ್ಯಗಳ ಇಚ್ಛೆ ಮತ್ತು ಮನೋಭಾವಕ್ಕೆ ಅನುಗುಣವಾಗಿ ಅದನ್ನು ಕಾರ್ಯಗತಗೊಳಿಸಲಾಗುತ್ತದೆ, ಇದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದರು.
ಸುಪ್ರೀಂಕೋರ್ಟ್‌ ತೀರ್ಪನ್ನು ಬಿಜೆಪಿ ಸರ್ಕಾರದ ಪಿತೂರಿ ಎಂದು ಹೇಳಿದ ಅವಿಜಿತ್, ಈ ನಿರ್ಧಾರದಿಂದ ಕಾಂಗ್ರೆಸ್ ನಿರಾಸೆ ಹೊಂದಿದ್ದು, ಎಲ್ಲಾ ವೇದಿಕೆಗಳಲ್ಲಿಯೂ ಸರ್ಕಾರದ ವಿರುದ್ಧ ಧ್ವನಿ ಎತ್ತಲಿದೆ ಎಂದು ಹೇಳಿದರು.

Leave a Comment