ಬಡ್ತಿ ಮೀಸಲಾತಿ ಕಾಯ್ದೆ ಜಾರಿ ವಿರೋಧಿಸಿ ಅಹಿಂಸಾ ಪ್ರತಿಭಟನೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜ. ೧೧- ಪರಿಶಿಷ್ಟ ಜಾತಿ ವರ್ಗದ ಬಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸದಂತೆ ಆಗ್ರಹಿಸಿ ಅಹಿಂಸಾ ನೌಕರರ ಹಿತರಕ್ಷಣಾ ಒಕ್ಕೂಟ ನಗರದ ಫ್ರೀಡಂ ಪಾರ್ಕ್‌ನಲ್ಲಿಂದು ಧರಣಿ ನಡೆಸಿತು.
ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. ೪-೫ ದಿನಗಳ ವಿಚಾರಣೆ ಬಾಕಿ ಇದ್ದು, ಫೆಬ್ರವರಿ ತಿಂಗಳಲ್ಲಿ ತೀರ್ಪು ಬರುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಮುಂದುವರೆಸಬೇಕು. ಬಡ್ತಿ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಧರಣಿಯಲ್ಲಿ ಪಾಲ್ಗೊಂಡಿದ್ದ ನೂರಾರು ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗದ ಸರ್ಕಾರಿ ನೌಕರರು ಆಗ್ರಹಿಸಿದರು.
ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಲಯ ನೂತನ ಕಾಯ್ದೆ ಜಾರಿಗೆ ಯಾವುದೇ ಆದೇಶ ನೀಡಿರುವುದಿಲ್ಲ. ಬಡ್ತಿ ಕಾಯ್ದೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠಕ್ಕೆ ಈ ಪ್ರಕರಣವನ್ನು ವರ್ಗಾಯಿಸಿದೆ. ಹಾಗಾಗಿ ಬಡ್ತಿ ಮೀಸಲು ಕಾಯ್ದೆ ಜಾರಿ ಮಾಡುವುದು ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಅಹಿಂಸಾ ನೌಕರರು ಹೇಳಿದರು.
ಸಾಮಾನ್ಯ ವರ್ಗದವರು ಸರ್ಕಾರದ ಶೇ. ೮೨ ರಷ್ಟು ಬಡ್ತಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರ ಕೇವಲ ಶೇ. ೧೮ ರಷ್ಟು ನೌಕರರ ರಕ್ಷಣೆಗೆ ನಿಂತಿರುವುದು ಸರಿಯಲ್ಲ. ಸುಪ್ರೀಂಕೋರ್ಟ್ ವಿಚಾರಣೆ ಮುಗಿದು ತೀರ್ಪು ಹೊರ ಬರುವವರೆಗೂ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.
ಬಡ್ತಿ ಮೀಸಲಾತಿ ಕಾಯ್ದೆಯನ್ನು ಈ ಹಂತದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರಾ. ಜತೆಗೆ ಸಚಿವ ಸಂಪುಟ ಸಭೆಯಲ್ಲೂ ನಾಲ್ಕೈದು ಬಾರಿ ಈ ಬಗ್ಗೆ ಚರ್ಚೆಯಾಗಿದ್ದರೂ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರು ಮುಖ್ಯ ಕಾರ್ಯದರ್ಶಿ ಮತ್ತು ಕಾನೂನು ಕಾರ್ಯದರ್ಶಿಗಳ ಮೇಲೆ ಒತ್ತಡ ಹೇರಿರುವುದು ಸರಿಯಲ್ಲ ಎಂದು ಇವರುಗಳು ಹೇಳಿದರು.
ನ್ಯಾಯಾಲಯದ ತೀರ್ಪು ಹೊರ ಬರುವವರೆಗೂ ಯಥಾಸ್ಥಿತಿಯನ್ನು ಮುಂದುವರೆಸಬೇಕು ಎಂದು ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದರೂ ಸಚಿವ ಸಂಪುಟದಲ್ಲಿರುವ ಪರಿಶಿಷ್ಟ ಜಾತಿ ವರ್ಗದ ನೌಕರರ ಕಾಯ್ದೆಯನ್ನು ಜಾರಿ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಿರುವುದು ಮಾಧ್ಯಮದ ಮೂಲಕ ತಿಳಿದು ಬಂದಿದೆ ಎಂದು ಹೇಳಿರುವ ನೌಕರರು, ಅಹಿಂಸಾ ನೌಕರರು, ಅಂತಿಮ ತೀರ್ಪು ಹೊರ ಬರುವವರೆಗೂ ಸರ್ಕಾರ ಬಡ್ತಿ ಮೀಸಲಾತಿ ಕಾಯ್ದೆ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.
ಅಹಿಂಸಾ ನೌಕರರ ಹಿತಕ್ಷಣಾ ಸಮಿತಿ ಅಧ್ಯಕ್ಷ ಎಂ. ನಾಗರಾಜು ರವರ ನೇತೃತ್ವದಲ್ಲಿ ಈ ಪ್ರತಿಭಟನಾ ಧರಣಿ ನಡೆದಿದೆ.

Leave a Comment