ಬಡ್ತಿ ಮೀಸಲಾತಿಗೆ ಸುಪ್ರೀಂ ಅಸ್ತು : ಸಿದ್ದು ಸರ್ಕಾರ ರೂಪಿಸಿದ್ದ ಕಾಯ್ದೆ ಎತ್ತಿಹಿಡಿದ ಕೋರ್ಟ್

ನವದೆಹಲಿ, ಮೇ ೧೦- ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿಹಿಡಿದಿದ್ದು, ಈ ಮೂಲಕ ಹಲವಾರು ವರ್ಷಗಳಿಂದ ಬಡ್ತಿ ಮೀಸಲಾತಿಗಾಗಿ ಹೋರಾಟ ನಡೆಸಿದ್ದ ಈ ಸಮುದಾಯದ ನೌಕರರು ನಿಟ್ಟುಸಿರುಬಿಡುವಂತಾಗಿದೆ.

  • ಎಸ್‌ಸಿ, ಎಸ್‌ಟಿ ನೌಕರರ ಬಡ್ತಿ ಮೀಸಲಾತಿ ಕುರಿತ ರಾಜ್ಯ ಸರ್ಕಾರದ ಕಾಯ್ದೆ ಎತ್ತಿಹಿಡಿದ ಸುಪ್ರೀಂ.
  • ಸುಪ್ರೀಂ ಕೋರ್ಟ್ ತೀರ್ಪಿನಿಂದ ಈ ಸಮುದಾಯಗಳ ಸಾವಿರಾರು ನೌಕರರು ನಿಟ್ಟುಸಿರು.
  • ಸಾಂವಿಧಾನಬದ್ಧವಾಗಿ ತಮಗೆ ದೊರಕಬೇಕಾದ ನ್ಯಾಯ ದೊರಕಿದೆ ಎಂಬ ಸಂತಸ.
  • ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಬಿ.ಕೆ. ಪವಿತ್ರ ಮತ್ತು ಇತರರಿಗೆ ತೀವ್ರ ಹಿನ್ನೆಡೆ.
  • ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಿದ್ದ ಬಡ್ತಿ ಮೀಸಲಾತಿ ಕಾಯ್ದೆ.
  • ಬಡ್ತಿ ಸೌಲಭ್ಯ ವಂಚಿತ ನೌಕರರಿಗೆ ಮತ್ತೆ ಸೌಲಭ್ಯ ಸಿಗುವ ಸದಾವಕಾಶ.

ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜೇಷ್ಠತೆ ವಿಸ್ತರಿಸುವ ರಾಜ್ಯ ಸರ್ಕಾರದ ಕಾಯ್ದೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಹಾಗೂ ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮಹತ್ವದ ತೀರ್ಪನ್ನು ಇಂದು ಬೆಳಿಗ್ಗೆ ನೀಡಿದೆ.

ರಾಜ್ಯ ಸರ್ಕಾರದ ಬಡ್ತಿ ಮೀಸಲಾತಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿ ಕುರಿತು ಕಾಯ್ದಿರಿಸಿದ್ದ ತನ್ನ ತೀರ್ಪನ್ನು ವಿಭಾಗೀಯ ಪೀಠ ಇಂದು ಪ್ರಕಟಿಸಿದ್ದು, ಕಾಯ್ದೆ ಪ್ರಶ್ನಿಸಿದ್ದವರಿಗೆ ಹಿನ್ನೆಡೆ ಉಂಟಾಗಿದೆ.

2018ರ ಅಕ್ಟೋಬರ್ 23 ರಿಂದ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ ಕಳೆದ ಮಾರ್ಚ್ 6 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆಯನ್ನು ರದ್ದುಪಡಿಸಿ, ಸುಪ್ರೀಂ ಕೋರ್ಟ್ 2017ರ ಫೆಬ್ರವರಿ 9 ರಂದು ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ಪ್ರತ್ಯೇಕ ಹಾಗೂ ಹೊಸ ಬಡ್ತಿ ಮೀಸಲಾತಿ ಕಾಯ್ದೆಯನ್ನು ರೂಪಿಸಿತ್ತು.

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಹೊಸಕಾಯ್ದೆಯನ್ನು ರೂಪಿಸಿತ್ತು. ಈ ಕಾಯ್ದೆಗೆ ರಾಷ್ಟ್ರಪತಿಯವರೂ ಅಂಕಿತ ಹಾಕಿದ್ದರು. ಈ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಪವಿತ್ರ ಹಾಗೂ ಇತರರು, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಅಹಿಂಸಾ ಸಂಘಟನೆ ತೀವ್ರ ಹೋರಾಟ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪರಿಶಿಷ್ಟ ಸಮುದಾಯಗಳ ನೌಕರರೂ ತಮಗೆ ಸಾಂವಿಧಾನ ಬದ್ಧವಾಗಿ ದೊರಕಬೇಕಾದ ಹಕ್ಕುಗಳ ಪರವಾಗಿ ಸತತವಾಗಿ ಹೋರಾಟ ನಡೆಸಿದ್ದರು.

ಪವಿತ್ರ, ಮತ್ತಿತರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಹಲವಾರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗಿದ್ದರು.

ರಾಜ್ಯ ಸರ್ಕಾರ ಜಾರಿಗೆ ತಂದ ಬಡ್ತಿ ಮೀಸಲಾತಿ ಕಾಯ್ದೆ ಅನ್ವಯ ನೂರಾರು ನೌಕರರಿಗೆ ಬಡ್ತಿ ಸೌಲಭ್ಯ ದೊರಕಿತ್ತು. ತದನಂತರದ ಬೆಳವಣಿಗೆಗಳಿಂದಾಗಿ ಈ ನೌಕರರು ಪಡೆದಿದ್ದ ಬಡ್ತಿ ಸೌಲಭ್ಯದಿಂದ ಹಿನ್ನೆಡೆ ಅನುಭವಿಸಿದ್ದರು.

ಪವಿತ್ರ, ಮತ್ತಿತರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಹಲವಾರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗಿದ್ದರು.

ರಾಜ್ಯ ಸರ್ಕಾರ ಜಾರಿಗೆ ತಂದ ಬಡ್ತಿ ಮೀಸಲಾತಿ ಕಾಯ್ದೆ ಅನ್ವಯ ನೂರಾರು ನೌಕರರಿಗೆ ಬಡ್ತಿ ಸೌಲಭ್ಯ ದೊರಕಿತ್ತು. ತದನಂತರದ ಬೆಳವಣಿಗೆಗಳಿಂದಾಗಿ ಈ ನೌಕರರು ಪಡೆದಿದ್ದ ಬಡ್ತಿ ಸೌಲಭ್ಯದಿಂದ ಹಿನ್ನೆಡೆ ಅನುಭವಿಸಿದ್ದರು.

Leave a Comment