ಬಡ್ಡಿ ದರ ಏರಿಕೆ ವಾಹನ ಸಾಲ ತುಟ್ಟಿ

ನವದೆಹಲಿ, ಸೆ. ೧- ದೇಶದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂದಿನಿಂದಲೇ ಜಾರಿಗೆ ಬರುವಂತೆ ತಾನು ನೀಡುವ ಸಾಲಗಳ ಮೇಲೆ ಬಡ್ಡಿ ದರವನ್ನು ಏರಿಕೆ ಮಾಡಿದೆ.

ಆರ್.ಬಿ.ಐ. ಇತ್ತೀಚೆಗೆ ರೆಪೋ ದರವನ್ನು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಇಂದು ತನ್ನ ಸಾಲಗಳ ಮೇಲೆ 20 ಅಂಶ ಅಂದರೆ, ಶೇ. 0.2 ರಷ್ಟು ಬಡ್ಡಿಯನ್ನು ಏರಿಕೆ ಮಾಡಿದೆ.

ಹೀಗಾಗಿ ಸ್ಟೇಟ್ ಬ್ಯಾಂಕ್‌ ಸಾಲಗಳ ಬಡ್ಡಿ ದರ ಈಗ ಶೇ. 7.9 ನಿಂದ 8.1 ಗೆ ಏರಿಕೆಯಾಗಿವೆ. ಏರಿಕೆಯ ಹಿನ್ನೆಲೆಯಲ್ಲಿ ಗೃಹ ಸಾಲ, ವಾಹನ ಸಾಲಗಳು ತುಟ್ಟಿಯಾಗಲಿವೆ. ಅಲ್ಪಾವಧಿ ಸಾಲಗಳ ಮೇಲೆ ಬಡ್ಡಿ ಏರಿಕೆ ಜೊತೆಗೆ ಮೂರು ವರ್ಷಗಳ ದೀರ್ಘಕಾಲದ ಸಾಲಗಳ ಮೇಲೆ ಬಡ್ಡಿ ಏರಿಕೆ ಮಾಡಿದ್ದು, ಈ ಏರಿಕೆಯಿಂದ ಉಳಿದ ಬ್ಯಾಂಕ್‌ಗಳೂ ಸಾಲಗಳ ಮೇಲಿನ ಬಡ್ಡಿಯನ್ನು ಏರಿಸಲಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ 6 ರಂದು ರೆಪೋ ದರವನ್ನು 0.25 ರಷ್ಟು ಏರಿಸುವ ಮೂಲಕ ಶೇ. 6.25ಕ್ಕೆ ಏರಿಕೆ ಮಾಡಿತ್ತು. ಆರ್.ಬಿ.ಐ. ನ ಈ ರೆಪೋ ದರ ಏರಿಕೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ, ಉಳಿದ ಬ್ಯಾಂಕ್‌ಗಳ ಬಡ್ಡಿ ದರವನ್ನು ಏರಿಸಲು ಕಾರಣವಾಗಿದೆ.

Leave a Comment