ಬಡವರ ಆರ್ಥಿಕ ಹೊರೆ ತಗ್ಗಿಸುವ ಸಾಮೂಹಿಕ ವಿವಾಹಗಳು

ದಾವಣಗೆರೆ,ಜು. 12 – ದಾಂಪತ್ಯದಲ್ಲಿ ಕಷ್ಟ ಬರಲಿ, ಮನಸ್ತಾಪವಿರಲಿ ಹೊಂದಾಣಿಕೆ ಹಾಗೂ ತಾಳ್ಮೆಯಿಂದ ಜೀವನವನ್ನು ನಡೆಸಿದಾಗ ಮಾತ್ರ ಸಂಸಾರ ಸುಗಮವಾಗಿ ಸಾಗುತ್ತದೆ ಎಂದು ವಿರಕ್ತಮಠದ ಬಸವಪ್ರಭು ಶ್ರೀಗಳು ಹೇಳಿದರು.
ನಗರದ ಶಿವಯೋಗಾಶ್ರಮದಲ್ಲಿಂದು ಜೆಡಿಎಸ್ ಮುಖಂಡ ಎಂ.ಆನಂದ್ ಅವರ 34ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮಿಯರ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದ 65 ಜೋಡಿ ವಧುವರರಿಗೆ ಆಶೀರ್ವದಿಸಿ ನಂತರ ಮಾತನಾಡಿದ ಅವರು, ಸತಿಪತಿಗಳ ನಡುವೆ ಪರಸ್ಪರ ಸಾಮರಸ್ಯ, ನಂಬಿಕೆ ಇರಬೇಕು. ಆಗ ಆದರ್ಶ ದಂಪತಿಗಳಾಗಿ ಬಾಳುತ್ತೇವೆ.
ಜನಪರ ಕಾರ್ಯಗಳನ್ನು ಆಯೋಜಿಸುವುದು ಉತ್ತಮ ಕಾರ್ಯ. ಇಂತಹ ಆದರ್ಶಮಯ ಕಾರ್ಯಕ್ರಮ ಮಾದರಿಯಾಗಿದೆ ಜನ್ಮ ದಿನವನ್ನು ಅತ್ಯಂತ ಆಡಂಬರದಿಂದ ಮಾಡಿಕೊಳ್ಳುವವರನ್ನು ನೋಡಿದ್ದೇವೆ. ಅವರ ನಡುವೆ ಎಂ.ಆನಂದ್ ಅವರು ಸಾಮೂಹಿಕ ವಿವಾಹ ಆಯೋಜಿಸುವ ಮೂಲಕ ವಿಶಿಷ್ಟವಾಗಿ ನೆರವು ನೀಡುವುದರೊಂದಿಗೆ ತಮ್ಮ ಜನ್ಮದಿನ ಆಚರಿಸಿಕೊಂಡಿರುವುದು ಮಾದರಿಯಾಗಿದೆ. ಬಡಮಕ್ಕಳ ವಿವಾಹ ನೆರವೇರಿಸುವ ಮೂಲಕ ಆದರ್ಶಮಯವಾಗಿ ಆಚರಿಸಿಕೊಂಡಿದ್ದಾರೆ. ಆನಂದ್ ಅವರು ಹಣವಂತರಷ್ಟೇ ಅಲ್ಲ, ಗುಣವಂತರು ಸಹ ಅಂತಹ ಗುಣವಿರುವುದರಿಂದ ಬಡವರಿಗಾಗಿ ಸಾಮೂಹಿಕ ವಿವಾಹ ಆಯೋಜಿಸಿ ಅವರ ಹೊರೆ ತಗ್ಗಿಸಿದ್ದಾರೆ. ಬಡಮಕ್ಕಳಿಗೆ ಪಠ್ಯ ಪುಸ್ತಕ, ಆರ್ಥಿಕ ಸಹಾಯ ಸೇರಿದಂತೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಅತೀ ಚಿಕ್ಕವಯಸ್ಸಿನಲ್ಲಿಯೇ ಮಾಡುತ್ತಾ ಬಂದಿದ್ದಾರೆ. ಇದು ಸಂತಸದ ವಿಷಯ. ಇಂತಹ ಸಮಾಜ ಸೇವೆ ಮಾಡುವ ಯುವಕರು ಹಾಗೂ ಯುವ ಮನಸ್ಸುಗಳು ಸಮಾಜಕ್ಕೆ ಬೇಕಿದೆ. ಮುಂದೆ ಅವರು ರಾಜಕಾರಣದಲ್ಲಿ ಇನ್ನು ಹೆಚ್ಚು ಯಶಸ್ಸು ಸಿಗಲಿ ಎಂದು ಹಾರೈಸಿದರು.
ಮೇಯರ್ ಶೋಭಾಪಲ್ಲಾಗಟ್ಟೆ ಮಾತನಾಡಿ, ಒಂದು ವಿವಾಹ ಕಾರ್ಯ ಜರುಗಿಸಲು ಸಾಕಷ್ಟು ಸಮಸ್ಯೆಗಳು ಬರುತ್ತವೆ. ಆರ್ಥಿಕ ಹೊರೆಯಾಗುತ್ತದೆ. ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿ ಬಡವರಿಗೆ ನೆರವು ನೀಡಿರುವುದು ಅತ್ಯಂತ ಮಾದರಿಯ ಕಾರ್ಯ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಮಾತನಾಡಿ, ಇಂದು ನೂತನ ಜೀವನಕ್ಕೆ ಕಾಲಿಟ್ಟಿರುವ ವಧುವರರು ಆದರ್ಶಮಯ ಬದುಕು ಸಾಗಿಸಬೇಕು. ಸಾಮೂಹಿಕ ವಿವಾಹಗಳನ್ನು ಆಯೋಜಿಸುವುದರಿಂದ ಬಡವರಿಗೆ ಆರ್ಥಿಕ ಹೊರೆ ತಗ್ಗುತ್ತದೆ. ಇಂತಹ ಜನಪರ ಕಾರ್ಯಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಈ ವೇಳೆ 65 ನವಜೋಡಿಗಳಿಗೆ ನೆನಪಿನ ಕಾಣಿಕೆಯಾಗಿ ತೆಂಗಿನ ಸಸಿ ನೀಡಲಾಯಿತು. ಈ ವೇಳೆ ಆನಂದ್ ದಂಪತಿಗೆ ಬಸವಪ್ರಭು ಸ್ವಾಮೀಜಿಯವರಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಬ್ಳಾಳ ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ಚಿತ್ರದುರ್ಗದ ಶಿವಲಿಂಗನಂದಾಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ್ ಸೇವಲಾಲ್ ಸ್ವಾಮೀಜಿ, ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಮಲಿಂಗೇಶ್ವರ ಸ್ವಾಮೀಜಿ,ಹರಿಹರದ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಕೆ.ಬಿ.ಶಂಕರನಾರಾಯಣ್, ಹೆಚ್.ಕೆ.ರಾಮಚಂದ್ರಪ್ಪ, ಅಮಾನುಲ್ಲಾಖಾನ್, ಸವಿತಾ ಪ್ರಕಾಶ್, ಬಸವರಾಜಪ್ಪ, ಚಂದ್ರಶೇಖರ್, ನಾಗೇಶ್ ರಾವ್ ಅನೇಕರಿದ್ದರು.

Leave a Comment