ಬಡವರಿಗೆ ಪಳನಿ ಸರ್ಕಾರ 2 ಸಾವಿರ ರೂ. ಕೊಡುಗೆ

ಚೆನ್ನೈ, ಫೆ. ೧೧- ಬರ ಹಾಗೂ ಗಜ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಕಡುಬಡವರಿಗೆ 2 ಸಾವಿರ ರೂ. ವಿಶೇಷ ನೆರವು ನೀಡುವುದಾಗಿ  ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಅವರು ಘೋಷಿಸಿದ್ದಾರೆ.

ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ತಲಾ 2 ಸಾವಿರ ರೂ. ಹಣವನ್ನು ಅವರ ಬ್ಯಾಂಕ್ ಖಾತೆಗೆ ಹಾಕುವುದಾಗಿ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಇಂದು ಘೋಷಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 60 ಲಕ್ಷ ಬಿಪಿಎಲ್ ಕಾರ್ಡುದಾರರಿದ್ದು, ಅವರೆಲ್ಲರ ಬ್ಯಾಂಕ್ ಖಾತೆಗಳಿಗೆ ತಲಾ 2 ಸಾವಿರ ರೂ. ಹಣವನ್ನು ಜಮೆ ಮಾಡುವುದಾಗಿ ನಿಯಮ 100ರಡಿ ಪ್ರಸ್ತಾಪದಲ್ಲಿ ಅವರು ತಿಳಿಸಿದರು.

ಬಿಪಿಎಲ್ ಕುಟುಂಬಗಳಿಗೆ ತಲಾ 2 ಸಾವಿರ ರೂ. ಹಣ ಹಾಕಲು ಸುಮಾರು 1,200 ಕೋಟಿ ರೂ. ಗಳು ಬೇಕಾಗಿದೆ. ಇದರಿಂದ 60 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ಫಲಾನುಭವಿಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಬಡವರು, ಕೃಷಿ ಕೂಲಿ ಕಾರ್ಮಿಕರು, ಕೈಮಗ್ಗ, ಉಪ್ಪು, ಕಟ್ಟಡ ನಿರ್ಮಾಣ ಕಾರ್ಮಿಕರಿಗೂ ಈ ಯೋಜನೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಕಳೆದ ವರ್ಷದ ನವೆಂಬರ್‌ನಲ್ಲಿ ಗಜ ಚಂಡಮಾರುತದಿಂದ ರಾಜ್ಯದ ಬಡವರು ಸಂಕಷ್ಟಕ್ಕೆ ಸಿಲುಕಿದ್ದರು. ಇದರ ಜೊತೆಗೆ ರೈತರೂ ಕೂಡ ಬರದಿಂದಾಗಿ ಕಂಗಾಲಾಗಿದ್ದು, ಅವರ ನೆರವಿಗೆ ಸರ್ಕಾರ ಧಾವಿಸಿದೆ ಎಂದು ತಿಳಿಸಿದರು.

ಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಡಪ್ಪಾಡಿ ಪಳನಿ ಸ್ವಾಮಿ ಅವರು ಈ ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ ಕೇಂದ್ರ ಬಜೆಟ್‌ನಲ್ಲಿ ರೈತರಿಗೆ 6 ಸಾವಿರ ನಗದು ಘೋಷಿಸಲಾಗಿತ್ತು.

Leave a Comment