ಬಡತನದಲ್ಲಿ ಅರಳಿದ ಪ್ರತಿಭೆ: ವಿದ್ಯಾರ್ಥಿಗಳಿಂದ ತಂತ್ರಜ್ಞಾನ ಆಪ್ ಬಿಡುಗಡೆ

ಹುಬ್ಬಳ್ಳಿ,ಸೆ 12- ಜೀವನದಲ್ಲಿ ಗುರಿಸಾಧಿಸಲು ಜಾತಿ, ಬಡತನ, ಅಂಗವೈಕಲ್ಯ, ಯಾವುದೇ ಕೊರತೆಗಳಿದ್ದರೂ ಅಡ್ಡ ಪರಿಣಾಮ ಬೀರುವುದಿಲ್ಲ. ಸಾಧಿಸಬೇಕೆಂಬ ಛಲವಿದ್ದಲ್ಲಿ ಎಲ್ಲವನ್ನೂ ಹಿಮ್ಮೆಟ್ಟಿಸಬೇಕೆಂದು ನಗರದ ಶ್ರೀಮತಿ ಚನ್ನಬಸಮ್ಮ ಈಶ್ವರಪ್ಪ ಮುನವಳ್ಳಿ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಪ್ರೊ. ವೀರೇಶ ಅಂಗಡಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿನಿ ಮಂಜುಳಾ ಹಳ್ಳಿಗೇರಿ ತಮ್ಮ ಕಡುಬಡತನದಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 84.18 ರಷ್ಟು ಅಂಕ ಪಡೆದು ಉತ್ತಮ ಸಾಧನೆಗೈಯುವ ಮೂಲಕ ಮಾದರಿಯಾಗಿದ್ದಾಳೆ.
ಕಲಘಟಗಿ ತಾಲೂಕಿನ ಜೋಡಳ್ಳಿಯ ಆನಂದ ಗ್ರುಪ್ ಕಂಪನಿಯ ಸ್ಪೈಸರ್ ಇಂಡಿಯಾದ ಎಸ್.ಎನ್.ಎಸ್. ಫೌಂಡೇಶನ್ ಅವರ ಜೊತೆಗೂಡಿ ಪ್ರತಿವರ್ಷವೂ ಆರ್ಥಿಕ ದುಸ್ತಿತಿಯಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಕಾಲೇಜಿನಲ್ಲಿ ಉಚಿತ ಪ್ರವೇಶಕ್ಕೆ ಅನುಮತಿ ಮಾಡಿಕೊಡುತ್ತಿದ್ದೇವೆ. ಹಾಗೆಯೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮದೇ ಕಂಪನಿಯಲ್ಲಿ ಉದ್ಯೋಗವನ್ನೂ ಕೂಡಾ ಕಲ್ಪಿಸಿಕೊಡುತ್ತಿದ್ದೇವೆ ಎಂದ ಅವರು, ಆನಂದ ಗ್ರುಪ್ ಕಂಪನಿಯು ಪ್ರವೇಶ ಹಣವನ್ನು ಭರಿಸುತ್ತದೆ. ವಿದ್ಯಾರ್ಥಿಗಳ ಮಿಕ್ಕಿದ ಖರ್ಚನ್ನು ಕಾಲೇಜು ಭರಿಸುತ್ತದೆ ಎಂದು ತಿಳಿಸಿದರು.
ಮೆಕ್ಯಾನಿಕಲ್ ವಿಭಾಗಕ್ಕೆ ವಿದ್ಯಾರ್ಥಿನಿಯರು ಬರುತ್ತಿದ್ದು,ಇಂಥವರ ಸಾಲಿನಲ್ಲಿ ಪ್ರತಿಭಾವಂತ ಮಂಜುಳಾ ಕೂಡ ಒಬ್ಬಳು. ಡಿಪ್ಲೋಮಾ ಮೆಕ್ಯಾನಿಕಲ್‌ ಮೊದಲನೇ ವರ್ಷದಲ್ಲಿ ಶೇ. 95 ರಷ್ಟು ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದು ಕಾಲೇಜಿನ ಹೆಮ್ಮೆಯ ಸಂಗತಿ ಎಂದು ಅಂಗಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಅಲ್ಲದೆ ಕೆಎಲ್ಇ ಸಂಸ್ಥೆಯ ಸ್ಥಾನಿಕ ಮಂಡಳಿಯ ಕಾರ್ಯಾಧ್ಯಕ್ಷ ಶಂಕ್ರಣ್ಣ ಮುನವಳ್ಳಿಯವರು ಹಾಗೂ ಕಾಲೇಜಿನ ಸಮಸ್ತ ಸಿಬ್ಬಂದಿ ವರ್ಗ ಮಂಜುಳಾಗೆ ಶುಭ ಕೋರಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿವಿಲ್ ವಿಭಾಗದ ಮಾರುತಿ ಬದ್ದಿ, ವಿನಾಯಕ ಜಡಿ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದಲ್ಲಿ ಡಿ.ಐ.ಪಿ. ಎಸ್.ಕ್ಯೂ. ಎಂಬ ಆಪ್‌ನ್ನು ಪರಿಚಯಿಸಿದ್ದಾರೆ. ಈ ಆಪ್ ಮೂಲಕ ಸಿವಿಲ್ ಮೆಕ್ಯಾನಿಕಲ್, ಅಟೋ ಮೊಬೈಲ್, ಕಂಪ್ಯೂಟರ್ ಸೈನ್ಸ, ಇಆಂಡ್‌ಸಿ, ಇಆಂಡ್ಇ ಹಾಗೂ ಆರ್ಕಿಟೆಕ್ಚರ್ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂಥ ಆಪ್ ಬಿಡುಗಡೆ ಮಾಡಿದರು.
ಗೂಗಲ್ ಪ್ಲೆಸ್ಟೋರ್‌ಗೆ ಹೋಗಿ ಡಿಪ್ಲೋಮಾ ಪಠ್ಯೇತರ ಅಥವಾ ಡಿಪ್ಲೋಮಾ ಕ್ಯೂಪಿ,ಡಿಪ್ಲೋಮಾ ಡಿಸಿಇಟಿ, ಡಿಪ್ಲೋಮಾ ರಿಸಲ್ಟ್, ಬಿಟಿಇ ಕರ್ನಾಟಕ ಹೀಗೆ ಟೈಪ್ ಮಾಡಿದಲ್ಲಿ ಡಿಐಪಿ ಎಸ್‌ಕ್ಯೂ ಆಪ್ ತೆಗೆಯಬಹುದು ಎಂದು ತಿಳಿಸಿದರು.
ಸಮಯವನ್ನು ಸದುಪಯೋಗ ಮಾಡಿಕೊಂಡರೆ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಗಗಳನ್ನು ಮಾಡುತ್ತ,ಹೆಚ್ಚಿನ ಅಂಕಗಳನ್ನು ಗಳಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿ.ಬಿ.ಪಾಟೀಲ, ಪಿ.ಆರ್. ಅಂಗಡಿ, ಮೋಹನ, ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Comment