ಬಡತನಕ್ಕೆ ಅನಾರೋಗ್ಯ ಚಿಕಿತ್ಸಾ ವೆಚ್ಚ ಕಾರಣ

ನವದೆಹಲಿ, ಜೂ. ೧೩: ಆರೋಗ್ಯ ಸಮಸ್ಯೆಗಳು ಹಾಗೂ ಅವುಗಳ ಚಿಕಿತ್ಸೆಗೆ ಖರ್ಚು ವೆಚ್ಚ ಮಾಡಿಯೇ ೫೫ ದಶಲಕ್ಷ ಭಾರತೀಯರು ಬಡತನ ಅನುಭವಿಸುವಂತಾಗಿದೆ; ಅದರಲ್ಲೂ ೩೮ ದಶಲಕ್ಷ ಮಂದಿ ವೈದ್ಯಕೀಯ ವೆಚ್ಚದ ಕಾರಣಕ್ಕಾಗಿಯೇ ‘ಬಡತನ ರೇಖೆಗಿಂತ ಕೆಳಕ್ಕೆ’ (ಕಡು ಬಡತನಕ್ಕೆ) ದೂಡಲ್ಪಟ್ಟಿದ್ದಾರೆ ಎಂದು ಆಧ್ಯಯನವೊಂದು ಬಹಿರಂಗಪಡಿಸಿದೆ.
ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಮೂವರು ತಜ್ಞರು ನಡೆಸಿದ ಈ ಅಧ್ಯಯನವೊಂದರಲ್ಲಿ ಈ ಅಂಕಿ ಅಂಶಗಳ ಅಂದಾಜು ಮಾಡಲಾಗಿದೆ.
ಈ ಅಧ್ಯಯನ ವರದಿ ಬ್ರಿಟೀಷ್ ವೈದ್ಯಕೀಯ ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿದ್ದು, ಬಹುತೇಕ ವೈದ್ಯಕೀಯ ವೆಚ್ಚಗಳನ್ನು ಜನರು ಸಾಂಕ್ರಾಮಿಕವಲ್ಲದ ಕಾಯಿಲೆಗಳಾದ ಕ್ಯಾನ್ಸರ್, ಹೃದ್ರೋಗ ಸಂಬಂಧಿ ಅಸ್ವಸ್ಥತೆ ಹಾಗೂ ಮಧುಮೇಹ (ಡಯಾಬಿಟಿಸ್) ಚಿಕಿತ್ಸೆಗಳಿಗೇ ಭರಿಸಿದ್ದಾರೆ ಎಂದು ಹೇಳಲಾಗಿದೆ. ಅದರಲ್ಲೂ ಗೃಹಸ್ಥನಾದವ ಕ್ಯಾನ್ಸರ್ ಚಿಕಿತ್ಸೆಗಾಗಿಯೇ ಅತಿಹೆಚ್ಚು ‘ದುರಂತ ವೆಚ್ಚ’ ಮಾಡಿರುವುದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಗೃಹಸ್ಥರಿಗೆ ಆರೋಗ್ಯ ವೆಚ್ಚವೆಂಬುದು ತಮ್ಮ ಒಟ್ಟಾರೆ ಕೌಟುಂಬಿಕ ಖರ್ಚು ವೆಚ್ಚದ ಶೇ. ೧೦ ಅಥವಾ ಅದಕ್ಕಿಂತ ಹೆಚ್ಚಾದಲ್ಲಿ ಅದು ‘ದುರಂತ’ವೇ ಸರಿ.
ರಸ್ತೆ ಅಪಘಾತ ಅಥವಾ ಅದಕ್ಕೆ ಹೊರತಾದ ಸಂಚಾರ ಕಾರಣಗಳಿಂದ ಗಾಯಗೊಂಡವರ ಪೈಕಿ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರಲ್ಲಿ ಕಡು ಬಡವರೇ ಹೆಚ್ಚಾಗಿದ್ದಾರೆ. ಇಂತಹವರು ಆಸ್ಪತ್ರೆಗಳಲ್ಲಿ ಕನಿಷ್ಟ ಒಂದು ವಾರ ದಾಖಲಾಗುವ ಮೂಲಕ ತಮ್ಮ ದುರಂತ ವೈದ್ಯಕೀಯ ವೆಚ್ಚಕ್ಕೆ ಎರವಾಗುತ್ತಿದ್ದಾರೆ ಎಂಬುದು ಕಂಡುಬಂದಿದೆ.

Leave a Comment