ಬಡಜನರಿಗೆ ಮೋದಿ ನೆರವಿನ ಹಸ್ತ; ನವೆಂಬರ್ ಅಂತ್ಯದವರಿಗೆ ಉಚಿತ ಪಡಿತರ ವಿತರಣೆ: ಪ್ರಧಾನಿ‌ ಮಹತ್ವದ ಘೋಷಣೆ

ನವದೆಹಲಿ, ಜೂ 30 – ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ದೇಶದ ಯಾವುದೇ ನಾಗರಿಕನ ಮನೆಯಲ್ಲಿ ಒಲೆ ಉರಿಯದಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಆಶಯ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಉಚಿತ ರೇಷನ್‌ ವಿತರಣೆ ಯೋಜನೆಯನ್ನು ನವೆಂಬರ್‌ ಅಂತ್ಯದವರೆಗೆ ಮುಂದುವರಿಸುವುದಾಗಿ ಪ್ರಕಟಿಸಿದ್ದಾರೆ. ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಿಂದ ಜಾರಿಯಲ್ಲಿರುವ ಪ್ರತಿ ಬಡ ಕುಟುಂಬಕ್ಕೆ ಒಂದು ತಿಂಗಳಿಗೆ ತಲಾ 5 ಕೆಜಿ ಅಕ್ಕಿ ಅಥವಾ ಗೋದಿ ಮತ್ತು ಒಂದು ಕೆಜಿ ಬೇಳೆ ಉಚಿತವಾಗಿ ನೀಡುವ ‘ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ’ ಯೋಜನೆಯನ್ನು ದೀಪಾವಳಿಯಿಂದ ಆಯುಧಪೂಜೆಯವರೆಗೆ ಅಂದರೆ, ನವೆಂಬರ್ ಅಂತ್ಯದವರೆಗೆ ವಿಸ್ತರಿಸುವುದಾಗಿ ಮೋದಿ ಪ್ರಕಟಿಸಿದರು.
ದೇಶದಲ್ಲಿ ಲಾಕ್‌ಡೌನ್‌ ಪರಿಣಾಮಗಳನ್ನು ಜನರು ಎದುರಿಸುತ್ತಿದ್ದಾರೆ. ಜೊತೆಗೆ, ಮಳೆಗಾಲ ಆರಂಭವಾಗುತ್ತಿದೆ. ಈಗ ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಕೆಲಸವಿರುತ್ತದೆ. ಇತರ ಕ್ಷೇತ್ರಗಳಲ್ಲಿ ಸ್ವಲ್ಪ ವಿರಾಮವಿರುತ್ತದೆ. ಅಲ್ಲದೆ, ನಿಧಾನವಾಗಿ ಹಬ್ಬದ ವಾತಾವರಣವೂ ರಂಗೇರುತ್ತಿದೆ. ಜುಲೈ 15ಕ್ಕೆ ಗುರುಪೂರ್ಣಿಮೆ ಬರುತ್ತಿದೆ. ಅದರ ನಂತರ ಶ್ರಾವಣ, ಕೃಷ್ಣ ಜನ್ಮಾಷ್ಟಮಿ, ಆಗಸ್ಟ್ 15, ರಾಖಿ ಹಬ್ಬ, ದಸರಾ ದೀಪಾವಳಿಯಂತಹ ಸಾಲು ಸಾಲು ಹಬ್ಬಗಳು ಬರುತ್ತಿವೆ. ಈ ಸಂದರ್ಭದಲ್ಲಿ ಅಗತ್ಯಗಳು ಮತ್ತು ಖರ್ಚುಗಳು ಹೆಚ್ಚಾಗುತ್ತವೆ.
ಆದ್ದರಿಂದ ದೇಶದ 80 ಕೋಟಿ ಜನರಿಗೆ ಉಚಿತ ರೇಷನ್ ನೀಡುವ ಯೋಜನೆ ನವೆಂಬರ್‌ವರೆಗೆ ಮುಂದುವರಿಯಲಿದೆ. ಇದಕ್ಕಾಗಿ 90 ಸಾವಿರ ಕೋಟಿಗಿಂತ ಹೆಚ್ಚು ಖರ್ಚಾಗಲಿದೆ.ಕಳೆದ ಮೂರು ತಿಂಗಳ ವೆಚ್ಚ ಸೇರಿಸಿದರೆ ಒಂದೂವರೆ ಲಕ್ಷ ಕೋಟಿ ರೂ. ವೆಚ್ಚವಾಗಲಿದೆ ಎಂದರು.

ಲಾಕ್‌ಡೌನ್‌ ಅವಧಿಯಲ್ಲಿ ದೇಶದ 80 ಕೋಟಿ ಜನರಿಗೆ ಉಚಿತ ರೇಷನ್ ವಿತರಿಸುವುದು ಇಡೀ ವಿಶ್ವದ ಹುಬ್ಬೇರಿಸುವಂತೆ ಮಾಡಿದೆ. ಇದು ಅಮೆರಿಕದ ಪೂರ್ಣ ಜನರಿಗಿಂತ ಎರಡೂವರೆ ಪಟ್ಟು ಹೆಚ್ಚಿದ್ದು, ಬ್ರಿಟನ್ ಜನಸಂಖ್ಯೆಗಿಂತ 12 ಪಟ್ಟು ಮತ್ತು ಯೂರೋಪಿಯನ್‌ ದೇಶದ ಜನಸಂಖ್ಯೆಯ 2 ಪಟ್ಟು ಜನರಿಗೆ ಉಚಿತ ರೇಷನ್ ನೀಡಿದೆ. ಸರಿಯಾದ ಸಮಯದಲ್ಲಿ ನಿರ್ಧಾರ ಮಾಡುವುದರಿಂದ ಸಮಸ್ಯೆ ಎದುರಿಸುವ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು.

ಸಂಪೂರ್ಣ ಭಾರತಕ್ಕೆ ನಾವೊಂದು ಕನಸು ನೋಡಿದ್ದೇವೆ. ದೇಶಾದ್ಯಂತ ‘ಒಂದು ದೇಶ ಒಂದು ರೇಷನ್ ಕಾರ್ಡ್’ ವ್ಯವಸ್ಥೆ ಜಾರಿಯಾಗುತ್ತಿದೆ. ಇದರಿಂದ ಬಡವರಿಗೆ ದೊಡ್ಡ ಲಾಭವಾಗಲಿದೆ. ಉದ್ಯೋಗ ಹುಡುಕಿ ಇತರ ಸ್ಥಳಗಳಿಗೆ ವಲಸೆ ಹೋಗುವವರಿಗೆ ನೆರವಾಗಲಿದೆ ಎಂದರು.
ಕಳೆದ ಮೂರು ತಿಂಗಳಲ್ಲಿ 9 ಕೋಟಿ ರೈತರ 18 ಸಾವಿರ ಕೋಟಿ ರೂ. ಜಮೆ ಆಗಿದೆ. ಇದಕ್ಕಾಗಿ ಸರ್ಕಾರ 15 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ ಎಂದು ಮಾಹಿತಿ ನೀಡಿದರು.ಸರ್ಕಾರ ಈ ಸಾಧನೆಯ ಶ್ರೇಯಸ್ಸು ಎರಡು ವರ್ಗದವರಿಗೆ ಸೇರುತ್ತದೆ. ಶ್ರಮಿಕ ಕೃಷಿಕರು ಮತ್ತು ಪ್ರಾಮಾಣಿಕ ತೆರಿಗೆ ಕಟ್ಟುವವರು. ಇವರಿಗೆ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.

ಮುಂಬರುವ ವರ್ಷಗಳಲ್ಲಿ ನಮ್ಮ ಪ್ರಯತ್ನ ಹೆಚ್ಚಿಸುತ್ತೇವೆ. ಗರೀಬ್‌, ಅವಕಾಶ ವಂಚಿತರನ್ನು ಸಶಕ್ತರನ್ನಾಗಿಸಲು ನಿರಂತರ ಕೆಲಸ ಮಾಡುತ್ತೇವೆ. ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತೇವೆ. ಸ್ವಾವಲಂಬಿ ಭಾರತಕ್ಕಾಗಿ ದಿನರಾತ್ರಿ ದುಡಿಯುತ್ತೇವೆ. ಸ್ಥಳೀಯರಿಗಾಗಿ ಧ್ವನಿಯಾಗುತ್ತೇವೆ ಎಂದು ಭರವಸೆ ನೀಡಿದರು.

ಇತರ ದೇಶಗಳ ಅಂಕಿ ಅಂಶಗಳಿಗೆ ಹೋಲಿಸಿದರೆ ದೇಶದಲ್ಲಿ ಕೊರೋನಾ ನಿವಾರಣೆಯ ಸ್ಥಿತಿಗತಿ ಉತ್ತಮವಾಗಿದೆ. ಸಮಯಕ್ಕೆ ಸರಿಯಾಗಿ ಕೈಗೊಂಡಿರುವ ಲಾಕ್‌ಡೌನ್ ಮತ್ತು ಇತರ ನಿರ್ಧಾರಗಳು ಲಕ್ಷಾಂತರ ಜನರ ಜೀವ ಉಳಿಸಿದೆ. ಆದರೆ, ಈಗಲೂ ಜನರು ಬೇಜವಾಬ್ದಾರಿತನ ತೋರುತ್ತಿದ್ದಾರೆ, ಕಂಟೈನ್ಮೆಂಟ್‌ ವಲಯಗಳಿಗೆ ಹೆಚ್ಚಿನ ಗಮನ ನೀಡಬೇಕು. ನಿಯಮ ಪಾಲಿಸದವರಿಗೆ ತಡೆಯಬೇಕು, ದಂಡ ವಿಧಿಸಬೇಕು ಎಂದು ಸಲಹೆ ನೀಡಿವೆ ಎಂದರು. ದೇಶದ ನಿಯಮಗಳು ಎಲ್ಲರಿಗೂ ಒಂದೇ. ಪ್ರಧಾನಿಗೆ ಕೂಡ ಅದು ಅನ್ವಯವಾಗುತ್ತದೆ. ಯಾವುದೋ ದೇಶದ ಪ್ರಧಾನಿ ಮಾಸ್ಕ್ ಧರಿಸದಿರುವುದಕ್ಕೆ 13 ಸಾವಿರ ದಂಡ ವಿಧಿಸಲಾಗಿತ್ತು. ಇದು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ದೇಶದಲ್ಲಿ ಮತ್ತೊಮ್ಮೆ ಲಾಕ್ಡೌನ್ ಮುಂದುವರಿಸುವುದಿಲ್ಲ 

ಮಂಗಳವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು ಕೊರೊನಾ ವಿರುದ್ಧ ನಾವು ಹೋರಾಡುತ್ತಲೇ ಅನ್ಲಾಕ್ ಎರಡನೇ ಹಂತಕ್ಕೆ ಪ್ರವೇಶಿಸುತ್ತಿದ್ದೇವೆ. ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತದ ಸ್ಥಿತಿ ಉತ್ತಮವಾಗಿದೆ. ಸರಿಯಾದ ಸಮಯಕ್ಕೆ ಲಾಕ್ಡೌನ್ ಮಾಡಿದ್ದೇವೆ. ಈ ಮೂಲಕ ಲಕ್ಷಾಂತರ ಜನರ ಪ್ರಾಣ ಉಳಿಸಿದ್ದೇವೆ. ನಾವೆಲ್ಲರೂ ಲಾಕ್ಡೌನ್ ನಿಯಮ ಪಾಲಿಸಿದ್ದೇವೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಬಳಸಿದ್ದೇವೆ. ಆದರೂ ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗ್ರತೆ ತುಂಬಾ ಅವಶ್ಯಕವಾಗಿದೆ. ಕಂಟೈನ್ಮೆಂಟ್ ಝೋನ್ಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ ಎಂದು ಕರೆ ನೀಡಿದರು. ಇದೇ ವೇಳೆ ಲಾಕ್ಡೌನ್ ಕುರಿತು ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಮತ್ತೆ ಲಾಕ್ಡೌನ್ ಮುಂದುವರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ತಿಳಿಸಿದರು.

Share

Leave a Comment