ಬಜ್ಪೆ ಏರ್‌ಪೋರ್ಟಲ್ಲಿ ಸಜೀವ ಬಾಂಬ್ ಪತ್ತೆ!

ಬಾಂಬ್ ನಿಷ್ಕ್ರಿಯದಳದಿಂದ ಪರಿಶೀಲನೆ
ಪ್ರಯಾಣಿಕರ ಸ್ಥಳಾಂತರ

ಮಂಗಳೂರು, ಜ.೨೦- ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಅದರಲ್ಲಿ ವೈರ್‌ಗಳನ್ನು ಜೋಡಿಸಲಾದ ಸಜೀವ ಬಾಂಬ್ ಇರುವ ಮಾಹಿತಿ ಲಭ್ಯವಾಗಿದೆ. ಘಟನೆಯ ಬಗ್ಗೆ ಮಾಹಿತಿ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಬಜ್ಪೆ ಪೊಲೀಸರು ಧಾವಿಸಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಕಮಿಷನರ್ ಹರ್ಷ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು ಪ್ರಯಾಣಿಕರನ್ನು ಸ್ಥಳಾಂತರ ಮಾಡಲಾಗಿದೆ.

ಇಂದು ಬೆಳಗ್ಗೆ ೧೧ರ ಸುಮಾರಿಗೆ ಟಿಕೆಟ್ ಕೌಂಟರ್ ಸಮೀಪ ಶಂಕಾಸ್ಪದ ವಸ್ತುವಿದ್ದ ಬ್ಯಾಗ್ ಕಂಡುಬಂದಿದ್ದು ಬಾಂಬ್ ಆಗಿರಬಹುದು ಎಂಬ ಶಂಕೆಯ ಮೇಲೆ ಪ್ರಯಾಣಿಕರನ್ನು ಸ್ಥಳದಿಂದ ತೆರವು ಮಾಡಲಾಗಿದೆ. ಏರ್‌ಪೋರ್ಟ್ ಹೊರಭಾಗದ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಲ್ಯಾಪ್‌ಟಾಪ್ ಬ್ಯಾಗ್ ರೂಪದ ಶಂಕಾಸ್ಪದ ಬ್ಯಾಗ್ ಪತ್ತೆಯಾಗಿತ್ತು. ಬಜಪೆ ಪೊಲೀಸರು, ಶ್ವಾನದಳ ಮತ್ತು ಏರ್ ಪೊರ್ಟ್ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಜೊತೆಗೆ ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ಆಗಮಿಸಿದ್ದು ತೀವ್ರ ತಪಾಸಣೆ ನಡೆಸಿದ ವೇಳೆ ಅದರಲ್ಲಿ ವೈರ್‌ಗಳನ್ನು ಜೋಡಿಸಿಟ್ಟಿದ್ದ ಸಜೀವ ಬಾಂಬ್ ಪತ್ತೆಯಾಗಿದೆ. ವಿಮಾನ ನಿಲ್ದಾಣದ ಒಳಗಿರುವ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ. ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಕಮಿಷನರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾಸ್ಥಳಕ್ಕೆ ಧಾವಿಸಿದ್ದಾರೆ.

ರಿಕ್ಷಾದಲ್ಲಿ ತಂದು ಬ್ಯಾಗ್ ಇಟ್ಟ ಶಂಕಿತರಿಗೆ ಶೋಧ!
ಸಿಸಿ ಕೆಮರಾ ಫುಟೇಜ್ ಪ್ರಕಾರ ರಿಕ್ಷಾದಲ್ಲಿ ಬಂದಿದ್ದ ಶಂಕಿತರು ಬಾಂಬ್ ಇದ್ದ ಬ್ಯಾಗ್ ಅನ್ನು ತಂದಿರಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಿಕ್ಷಾ ಮತ್ತು ಶಂಕಿತರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಏರ್‌ಪೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದ್ದು ಪ್ರಯಾಣಿಕರ ವಾಹನಗಳಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿಲ್ಲ. ಏರ್‌ಪೋರ್ಟ್‌ನ ಎಲ್ಲ ದ್ವಾರಗಳನ್ನು ಮುಚ್ಚಲಾಗಿದ್ದು ವಾಹನಗಳು ಮತ್ತು ಪ್ರಯಾಣಿಕರ ಮೇಲೆ ಕಣ್ಗಾವಲು ಇರಿಸಲಾಗಿದೆ.

Leave a Comment