ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯ

ಚಾಮರಾಜನಗರ, ಫೆ. 23. 2019-20 ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್‍ನಲ್ಲಿ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಮಾಜಿ ಸಂಸದ ಆರ್. ಧೃವನಾರಾಯಣ ಒತ್ತಾಯಿಸಿದ್ದಾರೆ.
ಅವರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಚಾಮರಾಜನಗರ ಜಿಲ್ಲೆಯು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಶಾಲಾ ಕೊಠಡಿಗಳ ನಿರ್ಮಾಣಕ್ಕೆ, ಶಾಲೆಗಳಲ್ಲಿ ಸಮರ್ಪಕ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು 100 ಕೋಟಿ ರೂ. ಅನುದಾನವನ್ನು ಬಜೆಟ್‍ನಲ್ಲಿ ಜಿಲ್ಲೆಗೆ ನೀಡಬೇಕು.
ಹಿಂದೆ ಸರ್ವಶಿಕ್ಷಣ ಅಭಿಯಾನ ಹಾಗೂ ಮಾಧ್ಯಮ ಶಿಕ್ಷಣ ಅಭಿಯಾನ ಯೋಜನೆಯಡಿ ಸರ್ವಶಿಕ್ಷಣ ಅಭಿಯಾನಕ್ಕೆ & ಮಾಧ್ಯಮ ಶಿಕ್ಷಣ ಅಭಿಯಾನ ಯೋಜನೆಗಳಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತಿತ್ತು. ಆದರೆ ಮೋದಿಯವರು ಪ್ರಧಾನಿ ಆದ ನಂತರ ರಾಜ್ಯಕ್ಕೆ ಅನುದಾನ ನೀಡಿರುವುದಿಲ್ಲ. ಆದುದರಿಂದ ಸದರಿ ಯೋಜನೆಗಳಿಗೆ ಶೀಘ್ರದಲ್ಲೇ ಅನುದಾನ ನೀಡಬೇಕು.
ಚಾಮರಾಜನಗರದಲ್ಲಿ ಕೃಷಿ ಕಾಲೇಜು ಮತ್ತು ಕಾನೂನು ಕಾಲೇಜುಗಳ ಕಟ್ಟಡಕ್ಕೆ ಅನುಧಾನ ಮತ್ತು ಕಾನೂನು ಕಾಲೇಜುವಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವನ್ನು ವಿಶ್ವವಿದ್ಯಾನಿಲಯವಾಗಿ ಪರಿವರ್ತಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಅಲ್ಲದೆ ಬಹುಗ್ರಾಮ ಕುಡಿಯುರ ನೀರು 2ನೇ ಹಂತ ಯೋಜನೆಯಡಿ ಹನೂರು ಭಾಗದ 183 ಗ್ರಮಗಳಿಗೆ 248 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಕಟೀಲು ಹರಿಕಥಾ ದಾಸರಿದ್ದಂತೆ : ಕಟೀಲು ಒಬ್ಬ ಹರಿಕಥಾ ದಾಸರಿದ್ದಂತೆ ಅದಕ್ಕೆ ಅವರು ಹೋದಲೆಲ್ಲಾ ಹರಿಕಥೆ ಹೇಳುತ್ತಾರೆ. ಅವರು ಸಿದ್ದರಾಮಯ್ಯ ರವರ ಬಗ್ಗೆ ಹೇಳಿಕೆ ನೀಡಿರುವುದು ಬೇಜವಾಬ್ದಾರಿತನದಿಂದ ಹಾಗೂ ಬಾಲಿಶವಾದ ಹೇಳಿಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲು ಅವರನ್ನು ಟೀಕಿಸಿದರು.
ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ವರ್ಷಗಳ ಸುಭದ್ರ ಆಡಳಿತ ನೀಡಿತ್ತು. ಯಾವುದೇ ಹಗರಣಗಳು ಇಲ್ಲದ ಹಗರಣ ಮುಕ್ತ ಆಡಳಿತ ನಡೆಸಿದ್ದಾರೆ. ಅಲ್ಲದೆ ಜನಪರ ಕಾರ್ಯಕ್ರಮಗಳನ್ನು ನೀಡಿ ಚುನಾವಣೆ ಪ್ರಣಾಳಿಕಯೆಲ್ಲಿ ನೀಡಿದ್ದ ಭರವಸೆಗಳನ್ನೆಲ್ಲಾ ಈಡೇರಿಸದ್ದಾರೆ ಎಂದು ಅವರು ಸಿದ್ದರಾಮಯ್ಯರವರನ್ನು ಶ್ಲಾಘಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಮುಖಂಡರಾದ ಬಿ.ಕೆ. ರವಿಕುಮಾರ್, ಮಹಮದ್‍ಅಸ್ಗರ್ ಮುನ್ನಾ ಹಾಜರಿದ್ದರು.

Leave a Comment