ಬಂಧನದ ಭೀತಿ ನನಗಿಲ್ಲ:ಡಿಕೆಶಿ

ನವದೆಹಲಿ, sಸೆ ೧೦- ತಮಗೆ  ದೆಹಲಿಯಲ್ಲಿ ಮೂರು ಮನೆಗಳು ಇವೆ. ಎಲ್ಲಿ ಬೇಕಾದರೂ ಉಳಿದುಕೊಳ್ಳುತ್ತೇನೆ. ನಾನೆಲ್ಲೂ ನಾಪತ್ತೆಯಾಗಿಲ್ಲ. ನನಗೆ ಬಂಧನದ ಭೀತಿ ಇಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ, “ಯಾರು ಯಾರನ್ನೂ ತಡೆಯಲು ಸಾಧ್ಯವಾಗುವುದಿಲ್ಲ. ಕಾನೂನು ಮುಖಾಂತರ ಏನು ಬೇಕಾದರೂ ಮಾಡಲಿ. ೩೦ನೇ ವಯಸ್ಸಿಗೆ ನಾನು ಮಾಜಿ ಮಂತ್ರಿಯಾಗಿದ್ದೆ. ಎಷ್ಟೋ ವರ್ಷ ಮಾಜಿಯಾಗಿಯೇ ಇದ್ದೇ. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ಎಫ್‌ಐಆರ್ ಹಾಕಲಿ ಏನು ಬೇಕಾದರೂ ತನಿಖೆ ಮಾಡಿಕೊಳ್ಳಲಿ. ಇಡಿ-ಐಟಿ ಅಧಿಕಾರಿಗಳು ನನ್ನನ್ನಂತೂ ಗೌರವಯುತವಾಗಿ ನಡೆಸಿಕೊಂಡಿದ್ದಾರೆ ಎಂದು ಹೇಳಿದರು.

ಯಾವುದೇ ಹಣಕಾಸಿನ ಅವ್ಯವಹಾರ ನಡೆಸಿಲ್ಲ. ಅಕ್ರಮಗಳನ್ನು ಮಾಡಿಲ್ಲ. ಯಾವ್ಯಾವ ರಾಜಕಾರಣಿಗಳ ಪ್ರಕರಣಗಳು ಏನಾಗಿವೆ ಅಂತಾ ನನಗೆ ಗೊತ್ತಿದೆ. ಹೆದರುವ ಪ್ರಮೇಯ ನನಗಿಲ್ಲ. ೯೦ ಜನ ನನ್ನಿಂದ ಕಾನೂನು ತೊಂದರೆ ಅನುಭವಿಸುತ್ತಿದ್ದಾರೆ, ಮುಜುಗರ ಅನುಭವಿಸುತ್ತಿದ್ದಾರೆ. ನಾನು ಹಳೆಯ ರೋಗಿ, ವೈದ್ಯರಿಗಿಂತ ನುರಿತ. ಹಾಗಾಗಿ ವಕೀಲರನ್ನು ಸಂಪರ್ಕಿಸುವುದಿಲ್ಲ. ದೆಹಲಿಯಲ್ಲಿ ನಾನು ಯಾವುದೇ ವಕೀಲರನ್ನು ಭೇಟಿಯಾಗಿಲ್ಲ. ಬಿಜೆಪಿಯಲ್ಲಿ ನನಗೆ ಬಹಳ ಜನ ಸ್ನೇಹಿತರಾಗಿದ್ದಾರೆ. ನಾನು ಯಾವುದೇ ತನಿಖೆ ಎದುರಿಸಲು ಸಿದ್ದ,” ಎಂದು ಡಿಕೆಶಿ ತಿಳಿಸಿದರು.

ದೆಹಲಿಯಲ್ಲಿ ಪತ್ತೆಯಾದ ಅಕ್ರಮ ಸಂಪತ್ತು ಪ್ರಕರಣ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ಜಾರಿ ನಿರ್ದೇಶನಾಲಯದಿಂದ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದ್ದು, ಡಿಕೆಶಿ ಬಂಧನವಾಗಲಿದೆ ಎಂಬ ಮಾತುಗಳು ಕಳೆದ ಎರಡು ದಿನಗಳಿಂದ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಡಿಕೆಶಿ ದೆಹಲಿಗೆ ಆಗಮಿಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಹಿರಿಯ ವಕೀಲ ಕಪಿಲ್ ಸಿಬಾಲ್ ಸೇರಿ ಹಲವು ಕಾನೂನು ಪಂಡಿತರನ್ನು ಸಂಪರ್ಕಿಸಲಿದ್ದಾರೆ ಎಂದು ಹೇಳಲಾಗಿತ್ತು.

ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಚಿವ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ, ಜಾರಿನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ತೊಂದರೆ ಆಗದಂತೆ ಮನವಿ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

Leave a Comment