ಬಂದ್: ವೃದ್ಧನ ಚಿಕಿತ್ಸೆಗೆ ನೆರವಾದ ಪೊಲೀಸರು

ಮಂಡ್ಯ, ಸೆ. 10. ಇಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತ್ ಬಂದ್ ನಡೆಯುತ್ತಿದೆ. ಈ ಬಂದ್ ನಡುವೆಯೂ ವೃದ್ಧರೊಬ್ಬರಿಗೆ ಸಹಾಯ ಮಾಡುವ ಮೂಲಕ ಮಂಡ್ಯ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಸಂಜಯ ವೃತ್ತದ ಬಳಿ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಬಿದ್ದಿದ್ದ ವೃದ್ಧನನ್ನು ಆಸ್ಪತ್ರೆಗೆ ಕಳುಹಿಸಿ, ಮಂಡ್ಯ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ವೃದ್ಧರೊಬ್ಬರು ಹೆದ್ದಾರಿಯಲ್ಲಿ ಬಿದ್ದು ತಲೆಗೆ ಗಾಯವಾಗಿ ರಕ್ತ ಸೋರುತ್ತಿತ್ತು. ಇಂದು ಬಂದ್ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಬಂದೋಬಸ್ತ್‍ನಲ್ಲಿ ಪೊಲೀಸರು ಇದ್ದರು.
ವೃದ್ಧನನ್ನು ನೋಡಿ ಸ್ಥಳಕ್ಕೆ ಬಂದ ಸಂಚಾರ ಪೇದೆ ಗಿರೀಶ್ ಮತ್ತು ಪಶ್ಚಿಮ ಠಾಣೆ ಪೇದೆ ರುದ್ರಪ್ಪ ಅವರನ್ನು ಮೇಲೆತ್ತಿ ಆಟೋವನ್ನು ಸ್ಥಳಕ್ಕೆ ಕರೆಸಿದ್ದಾರೆ. ಬಳಿಕ ವೃದ್ಧನನ್ನು ಆಟೋದಲ್ಲಿ ಕೂರಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಜೇಬಿನಿಂದ ವೃದ್ಧನಿಗೆ ಹಣ ಕೊಟ್ಟಿದ್ದಾರೆ. ಪೊಲೀಸರ ಮಾನವೀಯತೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಪೊಲೀಸರ ಸಹಾಯಕ್ಕೆ ವೃದ್ಧ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ.

Leave a Comment