ಬಂದ್ ಪರದಾಟ

ಆಹಾರ ವಿತರಿಸಿದ ಶಾಸಕ
ಮಂಗಳೂರು, ಸೆ.೧೧- ಭಾರತ್ ಬಂದ್ ಸಂದರ್ಭ ಕೆಲವು ಕಡೆಗಳಲ್ಲಿ ಹೋಟೆಲ್, ಕ್ಯಾಂಟೀನ್ ಮುಚ್ಚಿದ್ದರಿಂದ ಆಹಾರ ಸಿಗದೆ ಜನರು ಪರದಾಡುವಂತಾಗಿತ್ತು. ಪರವೂರುಗಳಿಂದ ಮಂಗಳೂರಿಗೆ ಬಂದ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯುಂಟಾಯಿತು. ಜನರು ಆಹಾರ ಪದಾರ್ಥಗಳಿಗಾಗಿ ಸಮಸ್ಯೆ ಎದುರಿಸಿದರು. ಈ ಹಿನ್ನೆಲೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದ ಜನರಿಗಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ್ ಕಾಮತ್ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಮಾಡುವ ಮೂಲಕ ಶಹಬ್ಬಾಸ್‌ಗಿರಿ ಪಡೆದುಕೊಂಡಿದ್ದಾರೆ.
ಶಾಸಕರ ಈ ಕಾರ್ಯದ ಕುರಿತು ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಶಾಸಕ ವೇದವ್ಯಾಸ ಕಾಮತ್ ಅವರು ಒಂದೂವರೆ ಸಾವಿರ ಜನರಿಗಾಗುವಷ್ಟು ಪುಲಾವ್ ಮತ್ತು ನೀರಿನ ಬಾಟಲ್‌ಗಳನ್ನು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಹಂಪನಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳ ಸಹಿತ ವಿವಿಧೆಡೆ ವಿತರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಹಲವು ಕಡೆ ಹೋಟೆಲ್‌ಗಳನ್ನು ಬಲವಂತವಾಗಿ ಕಾಂಗ್ರೆಸಿಗರು ಬಂದ್ ಮಾಡಿದ್ದಾರೆ, ಕೆಲವೆಡೆ ಕಲ್ಲು ತೂರಿದ್ದಾರೆ. ಇದರಿಂದ ಜನರಿಗೆ ಮಧ್ಯಾಹ್ನದ ಊಟಕ್ಕೂ ತೊಂದರೆಯಾಗಿದೆ. ತೊಂದರೆಗೆ ಒಳಗಾದ ಜನರಿಗೆ ಆಹಾರ ಮತ್ತು ಶುದ್ಧ ನೀರನ್ನು ಒದಗಿಸಿರುವುದಾಗಿ ತಿಳಿಸಿದ್ದಾರೆ.

Leave a Comment