ಬಂದ್, ಜನಜೀವನ ಅಸ್ತವ್ಯಸ್ತ : ರಾಜ್ಯಾದ್ಯಂತ ಶಾಂತಿಯುತ, ಬಸ್ ಸಂಚಾರ ಸ್ಥಗಿತ

ಬೆಂಗಳೂರು, ಸೆ. ೧೦- ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆನೀಡಿದ್ದ ”ಭಾರತ್ ಬಂದ್‌”ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಲ್ಲಲ್ಲಿ ಕಲ್ಲು ತೂರಾಟ, ರೈಲು ನಿಲ್ದಾಣಕ್ಕೆ ಮುತ್ತಿಗೆ ಯತ್ನಕ್ಕೆ ಮುಂದಾದ ಕಾರ್ಯಕರ್ತರಿಗೆ ಲಾಠಿ ರುಚಿ ಹಾಗೂ ಬಂಧನ ಸೇರಿದಂತೆ, ಹಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಂದ್ ಸಂಪೂರ್ಣ ಶಾಂತಿಯುತವಾಗಿದೆ.

  •  ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ದೇಶಾದ್ಯಂತ ಖಂಡನೆ
  •  ಭಾರತ್ ಬಂದ್‌ಗೆ ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ
  •  ಜಿಲ್ಲೆಗಳಲ್ಲಿ ಪ್ರತಿಭಟನೆ, ಕೇಂದ್ರದ ವಿರುದ್ಧ ಆಕ್ರೋಶ
  •  ಹಲವೆಡೆ ಹೋಟೆಲ್‌ಗಳ ಮೇಲೆ ಕಲ್ಲು ತೂರಾಟ
  •  ಪೊಲೀಸರು, ಕಾರ್ಯಕರ್ತರ ನಡುವೆ ವಾಗ್ವಾದ
  •  ಆಟೋ ಚಾಲಕರಿಗೆ ಸುಗ್ಗಿ
  •  ಕನಿಷ್ಟ ನೂರು ರೂ. ದರ ನಿಗದಿ
  •  ಸರ್ಕಾರಿ ಬಸ್‌, ಕ್ಯಾಬ್ ಸಂಪೂರ್ಣ ಬಂದ್
  •  ಜನಜೀವನ ಅಸ್ತವ್ಯಸ್ತ

10a16

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಜೆಡಿಎಸ್, ರಕ್ಷಣಾ ವೇದಿಕೆ, ಕನ್ನಡಪರ ಒಕ್ಕೂಟಗಳು ಸೇರಿದಂತೆ, ವಿವಿಧ ಸಂಘ ಸಂಸ್ಥೆಗಳು ಬಂದ್‌ಗೆ ಕೈಜೋಡಿಸಿವೆ. ಪ್ರತಿಭಟನೆ ನಡೆಸಿ ರಸ್ತೆಯಲ್ಲಿ ಟೈರಿಗೆ ಬೆಂಕಿಹಚ್ಚಿ, ಬೆಲೆ ಏರಿಕೆಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

10a18ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಟೌನ್ ಹಾಲ್ ಮುಂಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕೆಲವರು ಕಾರಿಗೆ ದಾರಕಟ್ಟಿ ಎಳೆದರೆ, ಮತ್ತೆ ಕೆಲವರು ತಳ್ಳುವ ಗಾಡಿ ಹಾಗೂ ಎತ್ತಿನ ಗಾಡಿಯ ಮೇಲೆ ಸಿಲಿಂಡರ್‌ಗಳನ್ನು ಇಟ್ಟು ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದ ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಹಾಸನ, ಕುಂದಾನಗರಿ ಬೆಳಗಾವಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಮಂಡ್ಯ, ಮೈಸೂರು, ಚಿಕ್ಕಮಗಳೂರು ಸೇರಿದಂತೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಂದ್ ಭಾಗಶಃ ಯಶಸ್ವಿಯಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಜನರಿಗೆ ಬಂದ್‌ನ ಬಿಸಿ ತಟ್ಟಿತು.

ಮಂಗಳೂರು, ಧಾರವಾಡ, ಹುಬ್ಬಳ್ಳಿ, ಮಾಲೂರು ಸೇರಿದಂತೆ ಹಲವೆಡೆ ಹೋಟೆಲ್‌ಗಳಿಗೆ ನುಗ್ಗಿದ ಕಾರ್ಯಕರ್ತರು, ಪ್ಲೇಟ್, ಜಗ್ಗು, ಮಗ್ಗು ಎಸೆದು ದಾಂಧಲೆ ನಡೆಸಿದರು. ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗೆ ಅಡ್ಡಲಾಗಿ ವಾಹನ ನಿಲ್ಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ವಾಗ್ದಾದಕ್ಕೂ ಕಾರಣವಾಯಿತು.

10j15

ಬಂದ್ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಜೊತೆಗೆ ಆಟೋ, ಟ್ಯಾಕ್ಸಿ ಸೇರಿದಂತೆ, ಇತರೆ ಸಾರ್ವಜನಿಕ ವಾಹನಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಭಾಗಗಳಲ್ಲಿ ರಸ್ತೆಗಿಳಿದಿದ್ದ ಕೆಲ ಆಟೋ ಚಾಲಕರಿಗೆ ಸುಗ್ಗಿಯಾಗಿತ್ತು. ಆಟೋ ದರ ಕನಿಷ್ಟ 25 ರೂ. ದರ ಇದ್ದರೂ, ಅದರ ಮಿತಿಯನ್ನು 100 ರೂ. ಗೆ ಹೆಚ್ಚಿಸಿ, ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದುದು ಮೆಜೆಸ್ಟಿಕ್ ಸೇರಿದಂತೆ, ಸುತ್ತಮುತ್ತಲ ಭಾಗಗಳಲ್ಲಿ ಕಂಡುಬಂತು.

ಬಂದ್ ಅಂಗವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಎಂದಿನಂತೆ ಇದ್ದರೂ ಸಿಬ್ಬಂದಿಗಳ ಸಂಖ್ಯೆ ವಿರಳವಾಗಿತ್ತು. ಅನಿವಾರ್ಯವಾಗಿ ಕಚೇರಿಗೆ ತೆರಳಬೇಕಾಗಿದ್ದ ಸಿಬ್ಬಂದಿ, ದ್ವಿಚಕ್ರ ವಾಹನಗಳು ಮತ್ತು ಕಾರುಗಳಲ್ಲಿ ಹೊರಟು ಕಚೇರಿ ಸೇರುವಂತಾಯಿತು.

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಹೋಟೆಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರೊಂದಿಗೆ ವಾಗ್ದಾದ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಹೋಟೆಲ್‌ನಲ್ಲಿದ್ದ ತಿಂಡಿ ತಿನಿಸು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಮಂಗಳೂರು, ಹುಬ್ಬಳ್ಳಿಯಲ್ಲಿಯೂ ಇಂತಹುದೇ ಘಟನೆ ನಡೆಯಿತು.

10j4

ಉಡುಪಿಯಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಲಾಯಿತು. ಬಂದ್ ಇದ್ದರೂ ಚಿತ್ರದುರ್ಗದಲ್ಲಿ ನಾಟಿಕೋಳಿಗಳ ಮಾರಾಟದ ಸಂತೆ ಜೋರಾಗಿ ನಡೆದಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ಜನರು ನಾಟಿಕೋಳಿಯ ರುಚಿ ನೋಡಲು ಮುಗಿಬಿದ್ದು ಖರೀದಿಸುತ್ತಿದ್ದ ದೃಶ್ಯ ಕಂಡುಬಂದಿತು.

ಕೋಲಾರದಲ್ಲಿ ಮದ್ಯದ ಅಂಗಡಿ ಮುಂದೆ ಜನರು ಸರತಿಸಾಲಿನಲ್ಲಿ ನಿಂತು ಅಂಗಡಿ ಮುಚ್ಚಿದ್ದರೂ ತೆರೆಯುವಂತೆ ಆಗ್ರಹಿಸುತ್ತಿದ್ದರು. ಉಡುಪಿಯ ಬಸ್ ನಿಲ್ದಾಣದ ಹೋಟೆಲ್ ಮುಚ್ಚಿದ್ದರೂ ಕುಡುಕರು ಹೋಟೆಲ್ ತೆರೆಯುವಂತೆ ರಾದ್ಧಾಂತ ಮಾಡುತ್ತಿದ್ದರು.

ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ತಳ್ಳುವ ಗಾಡಿಯಲ್ಲಿ ತರಕಾರಿ ಮಾಡಿ ವಿನೂತನವಾಗಿ ತೈಲ ಬೆಲೆ ಏರಿಕೆಯನ್ನು ಖಂಡಿಸಿದರು. ಕಾಂಗ್ರೆಸ್ ಪಕ್ಷದವರ ಜೊತೆಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೈಜೋಡಿಸಿದರು.

ಸರ್ಕಾರಿ ಬಸ್‌ಗಳ ಜೊತೆಗೆ ಖಾಸಗಿ ಬಸ್‌ಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಜನರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ವಿವಿಧೆಡೆ ಹೋಟೆಲ್‌ಗಳು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರೂ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಹಲವೆಡೆ ತೆರೆದಿದ್ದವು. ಒಟ್ಟಾರೆ ಬಂದ್‌ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಗಿ ಭದ್ರತೆ

ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಕಾಂಗ್ರೆಸ್ ಸೇರಿದಂತೆ, ವಿವಿಧ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸ್ ಬಂದೊಬಸ್ತ್ ಒದಗಿಸಲಾಗಿತ್ತು. ಒತ್ತಾಯಪೂರ್ವಕವಾಗಿ ಬಂದ್ ಮಾಡುತ್ತಿದ್ದ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

22 ಕೋಟಿ ರೂ. ನಷ್ಟ

ಬಂದ್ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಒಂದೇ ದಿನ ಕನಿಷ್ಟ ಅಂದಾಜು 22 ಕೋಟಿ ರೂ. ನಷ್ಟು ನಷ್ಟವಾಗಿದೆ. ಇದರಲ್ಲಿ ಕೆ.ಎಸ್.ಆರ್.ಟಿ.ಸಿ.ಗೆ 8.5 ಕೋಟಿ ರೂ., ಬಿಎಂಟಿಸಿಗೆ 4.5 ಕೋಟಿ ರೂ., ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗೆ 4.5 ಕೋಟಿ ರೂ. ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ 4 ಕೋಟಿ ರೂ. ನಷ್ಟು ನಷ್ಟ ಸಂಭವಿಸಿದೆ. ಈಗಾಗಲೇ ಡೀಸೆಲ್ ಬೆಲೆ ಏರಿಕೆಯಿಂದ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗೆ ಬಂದ್‌ನಿಂದಾಗಿ ಮತ್ತಷ್ಟು ಹೊರೆ ಬಿದ್ದಿದೆ.

ಕಾರ್ಯಕರ್ತರ ಬಂಧನ

ತೈಲಬೆಲೆ ಏರಿಕೆಯನ್ನು ವಿರೋಧಿಸಿ ಬೆಂಗಳೂರು ಸೇರಿದಂತೆ, ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಸೆಸ್ ಇಳಿಕೆ ಚರ್ಚೆ

ಪೆಟ್ರೋಲ್, ಡೀಸೆಲ್ ಬೆಲೆ ರಾಜ್ಯದಲ್ಲಿ ಏರಿಕೆ ಮಾಡಿರುವ ಸಂಬಂಧ ಆರ್ಥಿಕ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿ ಕಡಿಮೆ ಸೆಸ್ ವಿಧಿಸಲಾಗುತ್ತಿದೆ ಎಂದು ಹೇಳಿದರು.

Leave a Comment